ಬಾಗಲಕೋಟೆ: ಮಹಾಮಾರಿ ಕೋವಿಡ್-19ಕ್ಕೆ ಜಿಲ್ಲೆಯಲ್ಲಿ 4ನೇ ಬಲಿಯಾಗಿದೆ. ನವನಗರದ ಸೆಕ್ಟರ್ ನಂ.57ರ ನಿವಾಸಿ, ಗೂಡ್ಸ್ ವಾಹನ ಚಾಲಕ ಶನಿವಾರ ಮೃತಪಟ್ಟಿದ್ದು, ಕೋವಿಡ್-19ರಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಕೆಮ್ಮು, ನೆಗಡಿ, ಜ್ವರ ಹಾಗೂ ಸಕ್ಕರೆ ಕಾಯಿಲೆಯಿಂದ ಬಳುತ್ತಿದ್ದ ನವನಗರದ ಸೆಕ್ಟರ್ ನಂ.57ರ ನಿವಾಸಿ, 50 ವರ್ಷದ ವ್ಯಕ್ತಿ ಮೂರು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಶನಿವಾರ ಬೆಳಗ್ಗೆ ಆತ ಮೃತಪಟ್ಟಿದ್ದು, ಖಾಸಗಿ ಆಸ್ಪತ್ರೆಯಲ್ಲಿರುವಾಗಲೇ ಗಂಟಲು ದ್ರವ ಮಾದರಿ ಪಡೆದು, ಜಿಲ್ಲಾ ಕೋವಿಡ್-19 ಆಸ್ಪತ್ರೆಯ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಲಾಗಿತ್ತು. ಜಿಲ್ಲಾ ಆಸ್ಪತ್ರೆಯ ಟ್ರಾನೆಟ್ ಲ್ಯಾಬ್‌ನಲ್ಲಿ ಪಾಸಿಟಿವ್ ಬರುವ ಹೊತ್ತಿಗೆ ಖಾಸಗಿ ಆಸ್ಪತ್ರೆಯಲ್ಲಿ ಆ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ.
ಖಾಸಗಿ ಆಸ್ಪತ್ರೆ ಸೀಲ್‌ಡೌನ್: ಜಿಲ್ಲಾ ಲ್ಯಾಬ್‌ನಲ್ಲಿ ಕೋವಿಡ್ ದೃಢಪಟ್ಟು, ಶನಿವಾರ ಬೆಳಗ್ಗೆ ಮೃತಪಟ್ಟ ವ್ಯಕ್ತಿಗೆ ಚಿಕಿತ್ಸೆ ನೀಡಿದ ನಗರದ ಖಾಸಗಿ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಅಲ್ಲದೇ ಮೃತಪಟ್ಟ ವ್ಯಕ್ತಿ ವಾಸಿಸುತ್ತಿದ್ದ ನವನಗರದ ಸೆಕ್ಟರ್ ನಂ.57ರ ಆತನ ಮನೆಯ ಸುತ್ತಲಿನ ಪ್ರದೇಶ, ಈತ ಸೋಂಕು ತಗುಲುವ ಮುನ್ನ ತನ್ನ ಪುತ್ರಿಯ ಗಂಡನ ಮನೆ, ಬಾದಾಮಿಯ ಆನಂದ ನಗರಕ್ಕೆ ಭೇಟಿ ನೀಡಿದ್ದ. ಪುತ್ರಿ, ಆಕೆಯ ಪತಿ ಹಾಗೂ ಆನಂದ ನಗರದ ಅವರ ಮನೆಯೂ ಸೀಲ್‌ಡೌನ್ ಮಾಡಲಾಗಿದೆ.
ಮೃತಪಟ್ಟ ವ್ಯಕ್ತಿ ಗೂಡ್ಸ್ ವಾಹನ ಚಾಲಕನ್ನಾಗಿದ್ದು, ಪ್ರಯಾಣದ ಹಿನ್ನೆಲೆ ಭಯಾನಕವಾಗಿದೆ ಎನ್ನಲಾಗಿದೆ. ಆತನೊಂದಿಗೆ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಪತ್ತೆ ಹಚ್ಚುವ ಕಾರ್ಯ, ಜಿಲ್ಲಾಡಳಿತ ನಡೆಸುತ್ತಿದೆ. ಸದ್ಯಕ್ಕೆ ಆತನಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಯ ಮೂವರು ಸಿಬ್ಬಂದಿ, ಮನೆಯ ಇಬ್ಬರು, ಬಾದಾಮಿಯ ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿದೆ.
ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಬಾಗಲಕೋಟೆ ನಗರದ 76 ವರ್ಷದ ವೃದ್ಧ (ಪಿ-125) ಕಳೆದ ಏಪ್ರಿಲ್ 3ರಂದು ಮೃತಪಟ್ಟಿದ್ದ. ಇದಾದ ಬಳಿಕ ಜೂ. 23ರಂದು ಬಾಗಲಕೋಟೆ ತಾಲೂಕಿನ ಚಿಕ್ಕಮ್ಯಾಗೇರಿಯ 57 ವರ್ಷದ (ಪಿ-10173) ರೈಲ್ವೆ ಟಿಕೆಟ್ ಕಲೆಕ್ಟರ್ ಮೃತಪಟ್ಟಿದ್ದ. ಇನ್ನು ಬಾಗಲಕೋಟೆ ತಾಲೂಕಿನ ಕಲಾದಗಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಲೀವರ್ ಸಮಸ್ಯೆಯ ಚಿಕಿಗ್ಸೆಗೆಂದು ಬೆಂಗಳೂರಿಗೆ ಪೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಮೃತಪಟ್ಟಿದ್ದಾರೆ. ಅವರ ಗಂಟಲು ದ್ರವ ಮಾದರಿಯನ್ನೂ ಪರೀಕ್ಷೆ ಮಾಡಿದ್ದು, ಮೃತಪಟ್ಟ ಬಳಿಕ ಕೋವಿಡ್-19 ದೃಢಪಟ್ಟಿದೆ.
ಒಟ್ಟಾರೆ, ಶನಿವಾರ ಮೃತಪಟ್ಟ ನವನಗರದ ವ್ಯಕ್ತಿ ಸೇರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ.