ಕೇರಳದಲ್ಲಿ ಕೋವಿಡ್ 3ನೇ ಹಂತಕ್ಕೆ ಕಾಲಿಟ್ಟಿದ್ದು, ಸಾಮುದಾಯಿಕವಾಗಿ ಹರಡಲು ಶುರುವಾಗಿದೆ. 25 ಕೋವಿಡ್ ಸೋಂಕಿತರಿಗೆ ಕೋವಿಡ್ ತಗುಲಿದ್ದು ಹೇಗೆ ಎಂಬುದನ್ನು ಪತ್ತೆಹಚ್ಚಲು ಆರೋಗ್ಯ ಇಲಾಖೆಗೆ ಇದುವರೆಗೂ ಸಾಧ್ಯವಾಗಿಲ್ಲ.
ಈ 25 ಪ್ರಕರಣಗಳಲ್ಲಿ, ಕಲ್ಲಿಕೋಟೆಯ 4 ತಿಂಗಳ ಮಗು ಮತ್ತು ಕಣ್ಣೂರಿನ 71 ವರ್ಷದ ವೃದ್ಧನ ಸಾವು ಕೂಡ ಸೇರಿಕೊಂಡಿದೆ.
ಏಪ್ರಿಲ್ 21ರಿಂದ ಇಲ್ಲಿ ಚೇತರಿಕೆಗಿಂತ ಸೋಂಕು ಹೆಚ್ಚುತ್ತಿರುವವರ ಸಂಖ್ಯೆಯೇ ಹೆಚ್ಚಿದೆ. ಆದಾಗ್ಯೂ ಅಲ್ಲಿನ ಆರೋಗ್ಯ ಸಚಿವರು, “ಸೋಂಕು ಸಾಮುದಾಯಿಕವಾಗಿ ಹಬ್ಬಿರುವ ಬಗ್ಗೆ ಯಾವುದೇ ಸೂಚನೆ ಕಂಡುಬಂದಿಲ್ಲ. ದೃಢಪಟ್ಟ ಮೇಲಷ್ಟೇ ಸರ್ಕಾರ ಒಂದು ನಿರ್ಣಯಕ್ಕೆ ಬರಲು ಸಾಧ್ಯ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅನಗತ್ಯವಾಗಿ ಪ್ಯಾನಿಕ್ ಆಗುವುದು ಬೇಡ’ ಎನ್ನುತ್ತಿದ್ದಾರೆ ಎಂದು “ಇಂಡಿಯಾ ಟುಡೇ’ ವಿಶ್ಲೇಷಿಸಿದೆ.
ಏ.26ರ ನಂತರ 11 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇಡುಕ್ಕಿಯ ವೈದ್ಯರು ಮತ್ತು ನರ್ಸ್‌ಗಳಿಗೂ ಸೋಂಕು ತಗುಲಿದೆ. ಅಲ್ಲದೆ, ಸ್ಥಳೀಯ 7 ಮಂದಿಗೆ ಕೋವಿಡ್ ಅಂಟಿಕೊಂಡಿದೆ. ಈ ಸೋಂಕಿತರಿಗೆ ಯಾವುದೇ ಟ್ರಾವೆಲಿಂಗ್ ಹಿಸ್ಟರಿ ಇಲ್ಲ. ಒಂದೇ ಕೋವಿಡ್ ಸಾಮುದಾಯಿಕ ಹಂತಕ್ಕೆ ಬಂದಾಗಿದೆ ಅಥವಾ ವೈದ್ಯಸಿಬ್ಬಂದಿಯೇ ಅಗತ್ಯ ಸುರಕ್ಷಾ ಕ್ರಮ ಅನುಸರಿಸದೆ, ಪ್ರಮಾದ ಎಸಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.