ಟೆಹ್ರಾನ್: ಇರಾನ್‌ನಲ್ಲಿ ಎರಡನೇ ಸುತ್ತಿನ ಕೋವಿಡ್ ವೈರಾಣು ಪ್ರಸರಣಕ್ಕೆ ಅಧ್ಯಕ್ಷ ಹಸ್ಸನ್ ರೌಹಾನಿ ಅವರೇ ಕಾರಣರಾದರೆ? ಹೌದೆಂದು ಹೇಳುತ್ತಿದ್ದಾರೆ ಕೆಲವು ತಜ್ಞರು.
ಕಟ್ಟುನಿಟ್ಟಿನ ಲಾಕ್‌ಡೌನ್‌ನಿಂದಾಗಿ ಒಂದು ಹಂತಕ್ಕೆ ಕೋವಿಡ್ ನಿಯಂತ್ರಣಕ್ಕೆ ಬಂದಿತ್ತು. ಆದರೆ ಇದರ ಬೆನ್ನಿಗೆ ರೌಹಾನಿ ಲಾಕ್‌ಡೌನ್ ತೆರವುಗೊಳಿಸಲು ತೀರ್ಮಾನಿಸಿದರು ಹಾಗೂ ಜನರು ಸಾಮಾಜಿಕ ಅಂತರ ಪಾಲನೆಯನ್ನು ಕಡೆಗಣಿಸಿದರು. ಇದರಿಂದಾಗಿ ಎರಡನೇ ಸುತ್ತಿನ ಹಾವಳಿ ಶುರುವಾಗಿದೆ.
ಲಾಕ್‌ಡೌನ್‌ನಿಂದಾಗಿ ಸುಮಾರು 70 ಲಕ್ಷ ಮಂದಿ ನಿರುದ್ಯೋಗಿಗಳಾಗುವ ಅಥವಾ ವೇತನ ಕಡಿತದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿತ್ತು. ಇವರತ್ತ ಕರುಣಾ ದೃಷ್ಟಿ ಹರಿಸಿದ ರೌಹಾನಿ ಸಾಮಾಜಿಕ ನಿರ್ಬಂಧಗಳನ್ನು ಸಡಿಲಿಸಿದರು. ಆದರೆ ಇದುವೇ ಈಗ ಇರಾನ್‌ಗೆ ಮುಳುವಾಗುವ ಸಾಧ್ಯತೆ ಕಾಣಿಸುತ್ತಿದೆ.
ಕಡಿಮೆ ಅಪಾಯವಿರುವ ಲಕ್ಷಾಂತರ ವಾಣಿಜ್ಯ ಸಂಸ್ಥಾಪನೆಗಳನ್ನು ಮರಳಿ ತೆರೆಯಲು ಮತ್ತು ಪ್ರಯಾಣ ನಿರ್ಬಂಧ ಗಳನ್ನು ತೆರವುಗೊಳಿಸಲು ರೌಹಾನಿ ಆದೇಶಿಸಿದರು.
ವ್ಯಾಪಾರ ಮಳಿಗೆಗಳನ್ನು ಎ. 18ರ ತನಕ ಮುಚ್ಚುವುದೆಂದು ಹಿಂದೆ ನಿರ್ಧರಿಸಲಾಗಿತ್ತು. ನಿರ್ಬಂಧ ಸಡಿಲಿಕೆಯಾದ ಬೆನ್ನಿಗೆ ಇವುಗಳೆಲ್ಲ ತೆರೆದಿವೆ. ಜತೆಗೆ ಪ್ರಾಂತ್ಯದ ಒಳಗೆ ವಾಹನಗಳ ಓಡಾಟವೂ ಶುರುವಾಗಿದೆ. ಲಾಕ್‌ಡೌನ್‌ನಿಂದ ಇರಾನ್‌ನ ಮೂರರಲ್ಲಿ ಎರಡು ಭಾಗ ಜನರು ಹಣಕಾಸಿನ ಸಮಸ್ಯೆಗೆ ಸಿಲುಕಿದ್ದಾರೆ. 33 ಲಕ್ಷದಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಇಲ್ಲವೇ ವೇತನ ಕಡಿತಗೊಳಿಸಲಾಗಿದೆ. ಇದೀಗ ಲಾಕ್‌ಡೌನ್ ತೆರವುಗೊಳಿಸಿದ್ದಕ್ಕೆ ರೌಹಾನಿ ವ್ಯಾಪಕ ಟೀಕೆಗಳನ್ನು ಎದುರಿಸುತ್ತಿದ್ದಾರೆ.