Advertisement

 ಕೋವಿಡ್‌ಗಿಂತ ಚುಚ್ಚು ಮಾತುಗಳ ನೋವೇ ಜಾಸ್ತಿ

07:41 PM Apr 16, 2020 | sudhir |

ಬೆಳ್ತಂಗಡಿ: ಕುಟುಂಬ ನಿರ್ವಹಣೆಗೆ ಉದ್ಯೋಗ ಅರಸಿ ದೂರದೂರಿಗೆ ಹೋಗಿದ್ದ ಯುವಕ ಕೋವಿಡ್‌-19 ವೈರಸ್‌ಗೆ
ತುತ್ತಾಗಿರುವ ವರದಿ ಬರುತ್ತಲೇ ಬಂಧುಗಳು ಮತ್ತು ಗೆಳೆಯರಿಂದ ದೂರವುಳಿದು ಗೃಹಬಂಧನದ ಯಾತನೆ
ಅನುಭವಿಸಿ, ಕೊನೆಗೂ ಮಹಾಮಾರಿಯನ್ನು ಗೆದ್ದು ಬಂದಿರುವ ಕಲ್ಲೇರಿಯ ಯುವಕ,  ಕೋವಿಡ್‌ಗಿಂತಲೂ ಕೆಲವರ ಚುಚ್ಚು ಮಾತುಗಳಿಂದಲೇ ಜಾಸ್ತಿ ನೋವಾಗಿದೆ ಎಂದು ಹೇಳಿ ಕೊಂಡಿದ್ದಾರೆ.

Advertisement

“ಉದಯವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿರುವ ಅವರು, ಐದು ತಿಂಗಳ ಹಿಂದೆ ವೀಸಾ ನವೀಕರಣಕ್ಕೆ ಬಂದು ಹೋಗಿದ್ದೆ. ದುಬಾೖಯಲ್ಲಿ  ಕೋವಿಡ್‌ ಆತಂಕದಿಂದಾಗಿ ಗೃಹಬಂಧನ ಅನುಭವಿಸಿದ್ದೆ. ಪರಿಸ್ಥಿತಿ ಕೈಮೀರುತ್ತಿದೆ ಅನ್ನಿಸಿದಾಗ, ಮಾ. 21ರಂದು ಊರಿಗೆ ಮರುಪ್ರಯಾಣ ಬೆಳೆಸಿದೆ. ವಿಮಾನ ನಿಲ್ದಾಣಕ್ಕೆ ಕಾಲಿಡುತ್ತಲೇ ಮೂರು ಗಂಟೆಗಳ ಸಂಪೂರ್ಣ  ಕೋವಿಡ್‌ ಟೆಸ್ಟ್‌ಗೆ ಒಳಗಾದೆ. ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿ, ಕ್ವಾರಂಟೈನ್‌ ಸೀಲ್‌ ಹಾಕಿ, ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಉಪ್ಪಿನಂಗಡಿ ಮಾರ್ಗವಾಗಿ ರಾತ್ರಿ 1.30ರ ಸುಮಾರಿಗೆ ಮನೆ ತಲುಪಿದೆ ಎಂದರು.

ಮುಂದಿನ ದಿನಗಳನ್ನೆಲ್ಲ ನೋವಿನಲ್ಲೇ ಕಳೆದೆ. ಕೋವಿಡ್‌ ಗಂಭೀರತೆ ಅರ್ಥವಾಗಿದ್ದರಿಂದ ಮನೆಮಂದಿ, ಗೆಳೆಯರನ್ನೂ ಮಾತನಾಡಿಸಲೂ ಹಿಂಜರಿಕೆ. ನನಗೆ ಸಣ್ಣಂದಿನಿಂದಲೇ ಕೆಮ್ಮು, ಎದೆನೋವು ಇತ್ತು. ಊಟದ ಬಳಿಕ ಕೆಮ್ಮು ಬರುತ್ತಿತ್ತು. ಅಧಿಕಾರಿಗಳು, ಪೊಲೀಸರ ಸೂಚನೆಯಂತೆ ಮಾ. 24ರಂದು ಪುತ್ತೂರು ಆಸ್ಪತ್ರೆಗೆ ದಾಖಲಾದೆ. ಗಂಟಲು ದ್ರವವನ್ನು ಪರೀಕ್ಷೆಗಾಗಿ ತೆಗೆದರು. ವರದಿ ಪಾಸಿಟಿವ್‌ ಬಂದಿದ್ದರಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದರು. ಮನೆಯಲ್ಲಿ ವಯಸ್ಸಾದ ತಂದೆ, ತಾಯಿಯನ್ನೂ ನಿಗಾದಲ್ಲಿರಿಸಬೇಕಾಯಿತು ಎಂದರು.

ಆದರೆ ನಾನು ಮನಬಂದಂತೆ ಸುತ್ತಾಡಿದೆ ಎನ್ನುವ ಆರೋಪ ಬಂತು. ಒಂದು ಬಾರಿ ಯಾರೂ ಇಲ್ಲದ ವೇಳೆ ಮಸೀದಿಗೆ ಹೋಗಿದ್ದೆ. ಕ್ರಿಕೆಟ್‌ ಆಡುವುದನ್ನು ದೂರದಲ್ಲೇ ಕುಳಿತು ನೋಡಿದ್ದೇನೆ. ಆದರೆ, ಯಾರೊಂದಿಗೂ ಬೆರೆತಿಲ್ಲ. ದುಬಾೖಯಲ್ಲಿ ಕೆಲಸ ಮಾಡುವಾಗಲೇ ಮಾಸ್ಕ್, ಗ್ಲೌಸ್‌ ಕಡ್ಡಾಯವಾಗಿತ್ತು. ಕೋವಿಡ್‌ ಅಪಾಯಗಳ ಅರಿವಿದ್ದು ಸಾಮಾಜಿಕ ಅಂತರ ಕಾಪಾಡಿದ್ದರೂ ನನ್ನ ಮೇಲೆ ಪ್ರಕರಣ ದಾಖಲಾಯಿತು ಎಂದು ಬೇಸರಿಸಿಕೊಂಡರು.

ಸದ್ಯ ಒಂದು ತಿಂಗಳು ಹೊರಗೆ ಕಾಲಿಡದಂತೆ ವೈದ್ಯರು ಸೂಚಿಸಿದ್ದಾರೆ. ನಾನು, ತಂದೆ ಹಾಗೂ ತಾಯಿ ವೈದ್ಯರ ಸೂಚನೆ ಪಾಲಿಸುತ್ತಿದ್ದೇವೆ ಎಂದು ತಿಳಿಸಿದರು.

Advertisement

ದಿನಸಿ ಕೊರತೆ ಇದೆ
ನಮಗೆ ಪಡಿತರ ಅಕ್ಕಿ ಬಂದಿದೆ. ಆದರೆ ಅಡುಗೆಗೆ ಉಳಿದ ಸಾಮಗ್ರಿ ಕೊರತೆ ಇದೆ. ನಮ್ಮ ಮನೆಗೆ ಯಾರೂ ಬರುವಂತಿಲ್ಲ. ನಾವೂ ಹೊರಗೆ ಹೋಗುವಂತಿಲ್ಲ. ಸಂಬಂಧಪಟ್ಟವರು ಅಗತ್ಯ ಸಾಮಗ್ರಿ ಒದಗಿಸಬಹುದೇ ಎಂದು ಕಾಯುತ್ತಿದ್ದೇವೆ.
– ಸೋಂಕಿತ, ಕರಾಯ ಜನತಾ ಕಾಲನಿ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next