ಅಜೆಕಾರು: ಕೋವಿಡ್ 19 ವೈರಸ್ ವಿರುದ್ಧ ಹೋರಾಡಲು ತಾಲೂಕಿನ ವರಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ತ್ರಿವೇಣಿ ಸಂಜೀವಿನಿ ಒಕ್ಕೂಟದ ಸ್ವ ಸಹಾಯ ಸಂಘಗಳ ಮಹಿಳೆಯರು ಕೈ ಜೋಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಬಳಕೆಯಾಗುವ ಸುರಕ್ಷತಾ ಗೌನ್‌ಗಳನ್ನು ತಯಾರಿಸಿ ನೀಡುವ ಮೂಲಕ ಕೊರೊನಾ ವಿರುದ್ಧ ಹೋರಾಡಲು ತಮ್ಮದೆ ಆದ ಕೊಡುಗೆ ನೀಡುತ್ತಿದ್ದಾರೆ.
ಗೌನ್ ತಯಾರಿಯ ಕಚ್ಚಾ ವಸ್ತುಗಳನ್ನು ಪಡೆದುಕೊಂಡು ಇದೀಗ 15 ಮಂದಿ ಮಹಿಳೆಯರು ಮನೆಗಳಲ್ಲೇ ಗೌನ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮಣಿಪಾಲ ಇವರ ಮುಖಾಂತರ 10 ಕರಕುಶಲ ವಸ್ತುಗಳ ತಯಾರಿ ತರಬೇತಿಯನ್ನು ಪಡೆದಿರುವ ಸಂಜೀವಿನಿ ತಂಡ ಪ್ರಾರಂಭದಲ್ಲಿ ಮುನಿಯಾಲ್‌ನ ಉದ್ಯಮಿ ನಯನ್ ಜೋಗಿ ಅವರ ಮಾರ್ಗದರ್ಶನದಲ್ಲಿ ಕರಕುಶಲ ವಸ್ತುಗಳನ್ನು ತಯಾರಿಸುತ್ತಿತ್ತು.
ಇದರ ಜತೆಗೆ ಫಿನಾಯಲ್ ತಯಾರಿ, ಹಪ್ಪಳ, ಸಂಡಿಗೆ, ಮಸಾಲಾ ಪೌಡರ್‌ಗಳ ತಯಾರಿ, ಟೈಲರಿಂಗ್ ಹೀಗೆ ಬೇರೆ ಬೇರೆ ಸ್ವ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ತಂಡದ ಆಸಕ್ತಿಗೆ ಪೂರಕವಾಗಿ ವರಂಗ ಗ್ರಾಮ ಪಂಚಾಯತ್ ನಿರಂತರವಾಗಿ ತರಬೇತಿ ನೀಡಿ ಪ್ರೋತ್ಸಾಹಿಸಿದೆ.