Advertisement

ಕೋವಿಡ್ 19 ಭೀತಿ: ಗುಳೆ ಹೋದ ಕಾರ್ಮಿಕರು ವಾಪಸ್‌

03:29 PM Mar 29, 2020 | Suhan S |

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆ ಸೇರಿದಂತೆ ಹೈಕ ಭಾಗದ ವಿವಿಧ ಜಿಲ್ಲೆಗಳಿಂದ ದುಡಿಯಲು ಬೆಂಗಳೂರು ಸೇರಿ ಇತರೆ ಜಿಲ್ಲೆಗಳಿಗೆ ವಲಸೆ ಹೋಗಿದ್ದ ನೂರಾರು ಜನರು ವೈರಸ್‌ ಭೀತಿಯಿಂದಾಗಿ ಕ್ರೂಸರ್‌, ಟ್ರಾಕ್ಟರ್‌ ವಾಹನಗಳಲ್ಲಿ ತಮ್ಮ ತಮ್ಮ ಗ್ರಾಮಗಳಿಗೆ ವಾಪಸ್‌ ಬರುತ್ತಿರುವ ದೃಶ್ಯ ನಿರಂತರವಾಗಿ ಸಾಗಿದೆ.

Advertisement

ಹೈಕ ಭಾಗದ ಬಳ್ಳಾರಿ ಜಿಲ್ಲೆ ಸೇರಿ ಬೀದರ್‌, ಕಲ್ಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ವಿವಿಧ ಗ್ರಾಮಗಳಲ್ಲಿನ ಜನರು ದುಡಿಯುವ ಸಲುವಾಗಿ ಬೆಂಗಳೂರು, ಮೈಸೂರು, ಮಂಗಳೂರು ಸೇರಿ ಇನ್ನಿತರೆ ಜಿಲ್ಲೆಗಳಲ್ಲಿ ಗಾರೆ ಕೆಲಸ, ಕಂಪನಿಗಳಲ್ಲಿ ವಾಹನ ಚಾಲಕ ಸೇರಿ ಇತರೆ ಕೆಲಸಗಳನ್ನು ಮಾಡಲು ತೆರಳಿದ್ದಾರೆ. ತಮ್ಮ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಕುಟುಂಬ ಸಮೇತ ದೂರದೂರುಗಳಿಗೆ ವಲಸೆ ಹೋಗಿದ್ದಾರೆ. ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿ ಕೋವಿಡ್ 19 ವೈರಸ್‌ ಪ್ರಕರಣಗಳು ದೃಢಪಟ್ಟಿರುವುದು ವಲಸೆ ಹೋದ ಕೂಲಿಕಾರ್ಮಿಕರಲ್ಲಿ ಆತಂಕ ಹೆಚ್ಚಿಸಿದೆ.

ಮೇಲಾಗಿ ರಾಜ್ಯ ಸೇರಿ ದೇಶಾದ್ಯಂತ ಲಾಕ್‌ಡೌನ್‌ ಆದೇಶ ಇರುವ ಕಾರಣ, ಎಲ್ಲೆಡೆ ಕೆಲಸ, ಕಾಮಗಾರಿಗಳು ಬಂದ್‌ ಆಗಿದ್ದು, ವಲಸೆ ಹೋಗಿರುವ ಕೂಲಿ ಕಾರ್ಮಿಕರು ತಮ್ಮ ತಮ್ಮ ಗ್ರಾಮಗಳನ್ನು ಸೇರಿಕೊಳ್ಳಲು ಸಾರಿಗೆ ವಾಹನಗಳು ಇಲ್ಲದ ಕಾರಣ ಖಾಸಗಿ ವಾಹನಗಳ ಮೊರೆಹೋಗಿದ್ದು, ಬಿರುಬಿಸಿಲನ್ನೂ ಲೆಕ್ಕಿಸದೆ ಟ್ರ್ಯಾಕ್ಟರ್‌, ಟ್ಯಾಕ್ಸಿ ಸೇರಿ ಇನ್ನಿತರೆ ವಾಹನಗಳಲ್ಲಿ ಮೇಲ್ಛಾವಣಿ ಮೇಲೆಲ್ಲಾ ಕೂತು ಪ್ರಯಾಣಿತಿ ತಮ್ಮ ಊರುಗಳನ್ನು ಸೇರಿಕೊಳ್ಳುತ್ತಿದ್ದಾರೆ.

ಹೈಕ ಭಾಗದ ಬೀದರ್‌, ಕಲುºರ್ಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಿಂದ ವಲಸೆ ಹೋದವರು ಬಳ್ಳಾರಿ ನಗರ ಮೂಲಕವೇ ಹಾದು ಹೋಗಬೇಕಿದ್ದು, ಶನಿವಾರ ಬೆಳಗ್ಗೆಯಿಂದ ಮಧ್ಯಾಹ್ನದ ವೇಳೆಗೆ ಟ್ಯಾಕ್ಸಿ, ಬೈಕ್‌, ಬೊಲೆರೊ ಮೊದಲಾದ ವಾಹನಗಳಲ್ಲಿ ಬೆಂಗಳೂರಿನಿಂದ ತಮ್ಮ ಸರಕು, ಸರಂಜಾಮುಗಳನ್ನು ಕಟ್ಟಿಕೊಂಡು ಮಕ್ಕಳೊಂದಿಗೆ ತಮ್ಮ ತಮ್ಮ ಗ್ರಾಮಗಳಿಗೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಬಿರುಬಿಸಿಲು ಎನ್ನದೇ ಬೆಂಗಳೂರಿನಿಂದ ಯಾದಗಿರಿ, ಸುರಪುರ, ದೇವದುರ್ಗ ಸೇರಿ ಇನ್ನಿತರೆ ಜಿಲ್ಲೆ, ತಾಲೂಕುಗಳಿಗೆ ಟ್ರಾಕ್ಟರ್‌ಗಳಲ್ಲಿ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಕಳೆದ ಮೂರು ನಾಲ್ಕು ದಿನಗಳಿಂದ ಪ್ರತಿದಿನ ಕನಿಷ್ಠವೆಂದರೂ 50ಕ್ಕೂ ಹೆಚ್ಚು ವಾಹನಗಳಲ್ಲಿ ಕೂಲಿ ಕಾರ್ಮಿಕರು ವಾಪಸ್‌ ಬರುತ್ತಿದ್ದಾರೆ. ಇವರಿಗೆ ಕೋವಿಡ್ 1 9 ಸೋಂಕು ಆವರಿಸಿಲ್ಲ ಎಂಬುದರ ಬಗ್ಗೆ ಖಚಿತತೆಯಿಲ್ಲ. ಕಾರಣ ಇವರನ್ನು ಎಲ್ಲಿಯೂ ತಪಾಸಣೆಗೆ ಒಳಪಡಿಸಿಲ್ಲ. ಅಂತರಾಜ್ಯ ಗಡಿಭಾಗದಲ್ಲಿ ತೆರೆಯಲಾಗಿರುವ ಚೆಕ್‌ಪೋಸ್ಟ್‌ನಲ್ಲಿ ಇವರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಹೊರತು, ವೈದ್ಯಕೀಯ ತಂಡದಿಂದ ತಪಾಸಣೆ ಮಾಡಿಸುತ್ತಿಲ್ಲ. ತಮ್ಮಊರುಗಳಿಗೆ ಹೋದಮೇಲಾದರೂ ಇವರನ್ನು ತಪಾಸಣೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಇವರಲ್ಲಿ ಕನಿಷ್ಠ ಒಬ್ಬರಿಗೆ ಕೊರೊನಾ ವೈರಸ್‌ ಸೋಕಿದರೂ, ಇತರರಿಗೆ ಹರಡುವುದರಲ್ಲಿ ಅನುಮಾನವಿಲ್ಲ.

Advertisement

ಬೆಂಗಳೂರಿನಲ್ಲಿ ಕೋವಿಡ್ 19 ವೈರಸ್‌ ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವ ಕಾರಣ ವಲಸೆ ಹೋಗಿ ಬಂದಿರುವ ಕೂಲಿ ಕಾರ್ಮಿಕರಿಗೂ ತಪಾಸಣೆ ಅಗತ್ಯವಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

 

-ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next