ಹೊಸದಿಲ್ಲಿ: ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆ “ನಿರ್ಬಂಧಿತ ತುರ್ತು ಬಳಕೆಗೆ’ ಮಾನ್ಯತೆ ಪಡೆದುಕೊಂಡಿದೆ ಎಂದು ನೀತಿ ಆಯೋಗ ಅಧಿಕೃತವಾಗಿ ಘೋಷಿಸಿದೆ.
ಇಷ್ಟು ದಿನ ಕೊವ್ಯಾಕ್ಸಿನ್, “ಪ್ರಾಯೋಗಿಕ ಮಾದರಿ ಬಳಕೆ’ ಮಾನ್ಯತೆಯಲ್ಲಿತ್ತು. ಪ್ರಸ್ತುತ ನಿರ್ಬಂಧಿತ ತುರ್ತು ಬಳಕೆಗೆ ಮಾನ್ಯತೆ ಸಿಕ್ಕ ಹಿನ್ನೆಲೆಯಲ್ಲಿ, ಕೊವ್ಯಾಕ್ಸಿನ್ ನೀಡುವಿಕೆ ಮುನ್ನ ಲಸಿಕೆ ಪಡೆಯುವವರಿಂದ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುವ ಪ್ರಮೇಯ ಇರುವುದಿಲ್ಲ. ಈ ಮೂಲಕ ಭಾರತದಲ್ಲಿ ಕೊವಿಶೀಲ್ಡ್ ಸೇರಿ ಎರಡೂ ಲಸಿಕೆಗಳಿಗೂ ನಿರ್ಬಂಧಿತ ತುರ್ತು ಬಳಕೆ ಮಾನ್ಯತೆ ಲಭಿಸಿದಂತಾಗಿದೆ.”ಪ್ರಾಯೋಗಿಕ ಮಾದರಿ’ ಶ್ರೇಣಿಯಿಂದ ಉನ್ನತೀಕರಿಸುವ ವಿಚಾರವಾಗಿ ತಜ್ಞರ ಸಮಿತಿ, 43 ಪ್ರಕರಣಗಳಲ್ಲಿ ಕೊವ್ಯಾಕ್ಸಿನ್‌ನ ಪರಿಣಾಮಕತ್ವದ ದತ್ತಾಂಶಗಳನ್ನು ಮುಖ್ಯವಾಗಿ ಪರಿಗಣಿಸಿ, ಡಿಸಿಜಿಐಗೆ ಶಿಫಾರಸು ಮಾಡಿತ್ತು.
ಖಾಸಗಿಗೆ ಮೆಚ್ಚುಗೆ: ದೇಶದಲ್ಲಿ ಕೊರೊನಾ ಲಸಿಕೆ ವಿತರಣೆಯು ವೇಗ ಪಡೆಯಲು ಖಾಸಗಿ ಜತೆ ಸಹಭಾಗಿತ್ವ ಮಾಡಿಕೊಂಡಿದ್ದೇ ಕಾರಣ ಎಂದು ಕೇಂದ್ರ ಸರಕಾರ ಹೇಳಿದೆ. ಒಟ್ಟಾರೆ ಲಸಿಕೆ ವಿತರಣೆಯ ಪೈಕಿ ಖಾಸಗಿ ಕ್ಷೇತ್ರದ ಪಾಲು ಶೇ.23ಕ್ಕಿಂತಲೂ ಹೆಚ್ಚಿದೆ ಎಂದಿದೆ.
ಲಸಿಕೆ ಪಡೆದ ಪ್ರಧಾನಿ ತಾಯಿ :
ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ (95), ಗುರುವಾರ ಕೊರೊನಾ ಲಸಿಕೆ ಪಡೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, “”ನನ್ನ ತಾಯಿ ಇಂದು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕನೂ ಕೊರೊನಾ ಲಸಿಕೆ ಪಡೆಯುವಂತೆ ಇತರರನ್ನು ಪ್ರೇರೇಪಿಸಬೇಕೆಂದು ಈ ಮೂಲಕ ಕೋರುತ್ತೇನೆ” ಎಂದು ಮನವಿ ಮಾಡಿದ್ದಾರೆ. ಹೀರಾಬೆನ್ ಅವರು ಪ್ರಧಾನಿಯವರ ಕೊನೆಯ ತಮ್ಮ ಪಂಕಜ್ ಮೋದಿ ಜತೆ ಗುಜರಾತ್‌ನ ಗಾಂಧಿನಗರ ವ್ಯಾಪ್ತಿ ಯಲ್ಲಿರುವ ರೇಸನ್ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.