Advertisement

ಮಕ್ಕಳಿಗೆ ಸದ್ಯಕ್ಕೆ ಕೊವ್ಯಾಕ್ಸಿನ್‌ ಮಾತ್ರ! ಕೇಂದ್ರದ ಮಾರ್ಗಸೂಚಿ ಪ್ರಕಟ

01:37 AM Dec 28, 2021 | Team Udayavani |

ಹೊಸದಿಲ್ಲಿ: ದೇಶಾದ್ಯಂತ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ವೇದಿಕೆ ಸಜ್ಜುಗೊಂಡಿದೆ. ಅದಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನೂ ಕೇಂದ್ರ ಸರಕಾರ ಸೋಮವಾರ ಬಿಡುಗಡೆ ಮಾಡಿದೆ.

Advertisement

ಜ.3ರಿಂದ ಲಸಿಕೆ ವಿತರಣೆ ಆರಂಭವಾಗಲಿದ್ದು, ಸದ್ಯಕ್ಕೆ ಮಕ್ಕಳಿಗೆ ಕೊವ್ಯಾಕ್ಸಿನ್‌ ಲಸಿಕೆಯನ್ನು ಮಾತ್ರವೇ ನೀಡಲು ನಿರ್ಧರಿಸಲಾಗಿದೆ. ಶನಿವಾರವಷ್ಟೇ ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಲಸಿಕೆಯನ್ನು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲು ಅನುಮತಿ ನೀಡಲಾಗಿದೆ.

ಇದೇ ವೇಳೆ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ ನೀಡುವ ಕುರಿತೂ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಅದರಂತೆ, ಎರಡನೇ ಡೋಸ್‌ ಪಡೆದು 9 ತಿಂಗಳು ಪೂರ್ಣಗೊಂಡವರಿಗೆ ಮಾತ್ರವೇ ಮುನ್ನೆಚ್ಚರಿಕಾ ಡೋಸ್‌ ನೀಡಲಾಗುತ್ತದೆ ಎಂದು ಸರಕಾರ ತಿಳಿಸಿದೆ.

ಲಸಿಕೆ ಮಿಶ್ರಣ ಇಲ್ಲ:  ಬೂಸ್ಟರ್‌ ಡೋಸ್‌ ನೀಡುವಾಗ ಲಸಿಕೆಗಳ ಮಿಶ್ರಣ ಮಾಡುವುದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಎರಡನೇ ಹಂತದಲ್ಲಿ ಯಾವ ಡೋಸ್‌ ಪಡೆಯಲಾಗಿತ್ತೋ (ಕೊವಿಶೀಲ್ಡ್‌ ಅಥವಾ ಕೊವ್ಯಾಕ್ಸಿನ್‌) ಅದನ್ನೇ ಮೂರನೇ ಹಂತದಲ್ಲಿ ನೀಡಲಾಗುತ್ತದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ಅಧ್ಯಯನದ ಪ್ರಕಾರ ಮೊದಲ ಡೋಸ್‌ನಲ್ಲಿ ಆಸ್ಟ್ರಾಜೆನೆಕಾ ಅಥವಾ ಫೈಜರ್‌-ಬಯಾನ್‌ಟೆಕ್‌ ಲಸಿಕೆ ಪಡೆದವರಿಗೆ 9 ವಾರಗಳ ಅನಂತರ ಮಾಡೆರ್ನಾ ಲಸಿಕೆ ನೀಡಿದ ಬಳಿಕ ದೇಹದಲ್ಲಿ ಕೊರೊನಾ ಎದುರಿಸುವ ಪ್ರತಿಕಾಯಗಳ ಪ್ರಮಾಣ ಹೆಚ್ಚಾಗಿತ್ತು. ಯು.ಕೆ.ಯಲ್ಲಿ ಆಸ್ಟ್ರಾಜೆನೆಕಾ ಲಸಿಕೆ (ದೇಶದಲ್ಲಿ ಕೊವಿಶೀಲ್ಡ್‌) ಯನ್ನು ನೀಡಿದಾಗ ಒಮಿಕ್ರಾನ್‌ ರೂಪಾಂತರಿ ವಿರುದ್ಧ ಶೇ.90ರಷ್ಟು ಪ್ರತಿ ಕಾಯಗಳನ್ನು ಸೃಷ್ಟಿಸುತ್ತದೆ ಎಂಬ ಅಂಶದ ಬಗ್ಗೆ ಆಕ್ಸ್‌ಫ‌ರ್ಡ್‌ ವಿವಿಯಲ್ಲಿ ನಡೆಸಿದ ಅಧ್ಯಯನಗಳಿಂದ ದೃಢಪಟ್ಟಿದೆ.

ಸ್ಥಳೀಯ ನಿರ್ಬಂಧಕ್ಕೆ ಅವಕಾಶ: ಹೆಚ್ಚುತ್ತಿರುವ ಕೊರೊನಾ, ಒಮಿಕ್ರಾನ್‌ ಪ್ರಕರಣಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತೂಮ್ಮೆ ಸುತ್ತೋಲೆ ಕಳುಹಿಸಿದೆ. ಸೋಂಕಿನ ವಿರುದ್ಧ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಭಾವನೆ ಸಲ್ಲದು. ಹೊಸ ವರ್ಷ ಸಂಭ್ರಮಾಚರಣೆ ಮತ್ತು ಇತರ ಹಬ್ಬಗಳ ಹಿನ್ನೆಲೆಯಲ್ಲಿ ಜನರು ಹೆಚ್ಚು ಸೇರಬಾರದು. ಸ್ಥಳೀಯವಾಗಿ ಅಗತ್ಯವಿದ್ದಲ್ಲಿ ನಿರ್ಬಂಧ ಕ್ರಮಗಳನ್ನು ಜಾರಿ ಮಾಡಬಹುದು ಎಂದಿದೆ.

Advertisement

ಚುನಾವಣೆ ಮುಂದೂಡಿಕೆ ಇಲ್ಲ?

ಮುಂದಿನ ವರ್ಷ ನಡೆಯಲಿರುವ ಪಂಚ ರಾಜ್ಯಗಳ ಚುನಾವಣೆಯು ಮುಂದೂಡಿಕೆಯಾಗುವ ಸಾಧ್ಯತೆಯಿಲ್ಲ. ಚುನಾವಣೆ ಮುಂದೂಡದೇ ಕೊರೊನಾ ಮಾರ್ಗಸೂಚಿಗಳ ಕಡ್ಡಾಯ ಪಾಲನೆಯಾಗುವಂತೆ ಮಾಡಲು ಚುನಾವಣ ಆಯೋಗ ನಿರ್ಧರಿಸಿದೆ. ಹೀಗಾಗಿ, ಉತ್ತರಪ್ರದೇಶ, ಪಂಜಾಬ್‌, ಗೋವಾ, ಉತ್ತರಾಖಂಡ ಮತ್ತು ಮಣಿಪುರ ವಿಧಾನಸಭೆ ಚುನಾವಣೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಯಿಲ್ಲ ಎಂದು ಮೂಲಗಳು ತಿಳಿಸಿವೆ. ಒಮಿಕ್ರಾನ್‌ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆಯನ್ನು ಒಂದು ಅಥವಾ 2 ತಿಂಗಳ ಕಾಲ ಮುಂದೂಡಿಕೆ ಮಾಡುವುದರ ಬಗ್ಗೆ ಪರಿಶೀಲಿಸಿ ಎಂದು ಅಲಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ಸಲಹೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಚು. ಆಯೋಗವು ಕೇಂದ್ರ ಆರೋಗ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ, ಲಸಿಕೆಯ ಕವರೇಜ್‌ ಮತ್ತು ಸೋಂಕಿನ ಕುರಿತು ಮಾಹಿತಿ ಪಡೆದಿದೆ. ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಲಸಿಕೆ ವಿತರಣೆಗೆ ವೇಗ ನೀಡಿ, ಆದಷ್ಟು ಬೇಗ ಎಲ್ಲರಿಗೂ ಲಸಿಕೆ ದೊರೆಯುವಂತೆ ಮಾಡಿ ಎಂದು ಕೇಂದ್ರ ಸರಕಾರಕ್ಕೆ ಆಯೋಗ ಸಲಹೆ ನೀಡಿದೆ.

ನೈಟ್‌ ಕರ್ಫ್ಯೂ: ಕೇರಳ, ಉತ್ತರಾಖಂಡದಲ್ಲಿ ಜಾರಿ

ನೈಟ್‌ ಕರ್ಫ್ಯೂ ವಿಧಿಸಿರುವ ಹಲವು ರಾಜ್ಯಗಳ ಸಾಲಿಗೆ ಈಗ ಕೇರಳ ಮತ್ತು ಉತ್ತರಾಖಂಡವೂ ಸೇರ್ಪಡೆಯಾಗಿದೆ. ಡಿ.30ರಿಂದ ಜ.2ರವರೆಗೆ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಿ ಕೇರಳ ಸರಕಾರ ಸೋಮವಾರ ಆದೇಶ ಹೊರಡಿಸಿದೆ. ಡಿ.31ರಂದು ರಾತ್ರಿ 10ರ ಬಳಿಕ ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದೂ ಸೂಚಿಸಿದೆ. ಉತ್ತರಾಖಂಡದಲ್ಲೂ ರಾತ್ರಿ 11ರಿಂದ ಬೆ.5ರವರೆಗೆ ನೈಟ್‌ ಕರ್ಫ್ಯೂ ಜಾರಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next