Advertisement

ಸಾಫ್ಟ್ವೇರ್‌ ಬಿಟ್ಟವನನ್ನು ಸೌತೆ ಕೈಹಿಡಿಯಿತು!

11:59 AM Jun 25, 2018 | Harsha Rao |

ಸೌತೆ ಬಳ್ಳಿಯ ಒಂದು ಗಂಟಿನಲ್ಲಿ ಎರಡು ಕಾಯಿಗಳು ಬಿಡುತ್ತವೆ. ಗೆಣ್ಣುಗಳು ಬಳ್ಳಿಯಲ್ಲಿ ಬಹಳ ಅಗಲವಾಗಿ ಬಿಡದಂತೆ ಗಮನ ವಹಿಸಬೇಕು. ಬಿಸಿಲು ಕಡಿಮೆಯಾದರೆ ಗೆಣ್ಣಿನ ನಡುವಿನ ಅಂತರ ಜಾಸ್ತಿಯಾಗುತ್ತದೆ. ಆಗ ಸಹಜವಾಗಿಯೇ ಬಳ್ಳಿಯ ಉದ್ದ ಜಾಸ್ತಿಯಾಗುತ್ತದೆ.

Advertisement

ಇತ್ತೀಚೆಗೆ ದೊಡ್ಡ ಸಂಬಳದವರೂ ಕೂಡ ಕೃಷಿಯ ಕಡೆ ಕಣ್ಣು ನೆಡುತ್ತಿದ್ದಾರೆ. ಇಂಥವರಲ್ಲಿ ಬಹುತೇಕರು ನಗರವಾಸಿಗಳು. ಟ್ರಾಫಿಕ್‌ನಲ್ಲೇ ಬದುಕು ಸವೆಸುವವವರು. ಈ ನಗರದ ಗಜಿಬಿಜಿಯ ಬದುಕು ಸಾಕಪ್ಪಾ ಸಾಕು ಅಂತ ಕೃಷಿಗೆ ಬರುವವರು. ಇಂಥವರ ಪಟ್ಟಿಯಲ್ಲಿ ಬಳ್ಳಾರಿಯ ಸಂಡೂರಿನ ನರಸನಗೌಡ ವೀರಾಪುರ ಕೂಡ ಒಬ್ಬರು.

ಇವರು, ಎರಡು ದಶಕಗಳ ಕಾಲ ಬೆಂಗಳೂರಿನಲ್ಲಿ ವಾಸವಿದ್ದರು. ಪ್ರತಿಷ್ಟಿತ ಕಂಪನಿಯಲ್ಲಿ ಸಾಫ್ಟವೇರ್‌ ಎಂಜಿನಿಯರ್‌ ಆಗಿದ್ದರು. ಇವರ ಮನಸ್ಸಿನಲ್ಲಿ ಹುದುಗಿದ್ದ ಕೃಷಿ ತುಡಿತ ತಾನು ಗಳಿಸಿದ್ದನ್ನೆಲ್ಲ ಖರ್ಚು ಮಾಡಿ ಕೃಷಿ ಭೂಮಿ ಖರೀದಿಸಲು ಪ್ರೇರೇಪಿಸುತ್ತಿತ್ತು. ಧಾರವಾಡ ಸಮೀಪದ ಕಲಗೇರಿ ಗ್ರಾಮದಲ್ಲಿ ಐದು ಎಕರೆ ಜಮೀನನ್ನು ಖರೀದಿಸಿದರು. ಇದ್ದ ಕೆಲಸವನ್ನು ಬಿಟ್ಟು ಕೃಷಿಗೆ ಮರಳುತ್ತೇನೆ ಎಂದಾಗ ಹಂಗಿಸುವವರು ಎಲ್ಲ ದಿಕ್ಕಿನಿಂದ ಕಾಣಿಸಿಕೊಂಡರು. ಆದರೆ ನರಸಗೌಡ ಯಾವ ಮಾತುಗಳಿಗೂ ಕಿವಿ ಕೊಡಲಿಲ್ಲ.

ಕೃಷಿಗಿಳಿದ ಪರಿ
ಭೂಮಿ ಕೊಂಡದ್ದಾಯಿತು. ಮುಂದೇನು? ಶೂನ್ಯ. ಕೃಷಿ ಕುರಿತು ಇವರಿಗಿದ್ದ ತಿಳಿವಳಿಕೆ, ಬೆಳೆಗಳ ಕುರಿತು ಇದ್ದ ಮಾಹಿತಿ ಅಷ್ಟಕ್ಕಷ್ಟೇ. ಯಾವ ಬೆಳೆ ಬೆಳೆದರೆ ಉತ್ತಮ, ಅದರ ಮಾಹಿತಿ ಸಂಗ್ರಹಿಸುವುದು ಹೇಗೆ? ಒಣ ಭೂಮಿಯಲ್ಲಿ ಯಾವ ಬೆಳೆ ಸೂಕ್ತವಾಗಬಲ್ಲದು? ಹೀಗೆ ಪ್ರಶ್ನೆಗಳ ಗೂಡು ಇವರಲ್ಲಿ ಮನೆ ಮಾಡಿತ್ತು.  ರಾಜ್ಯ ಸುತ್ತಿದರು, ರೈತರ ಹೊಲಕ್ಕೆ ನುಗ್ಗಿದರು, ವಿದ್ಯಾರ್ಥಿಯಂತೆ ಕೈಕಟ್ಟಿಕೊಂಡು ಅನುಭವಿ ಕೃಷಿಕರ ಮಾತುಗಳನ್ನು ಆಲಿಸಿದರು.

ನಂತರದ ದಿನಗಳಲ್ಲಿ ಪುಣೆಗೆ ತೆರಳಿ ಏಳು ದಿನಗಳ ಕಾಲ ಪಾಲಿಹೌಸ್‌ ತಂತ್ರಜಾnನ ತರಬೇತಿಯಲ್ಲಿ ಪಾಲ್ಗೊಂಡರು. ಅಲ್ಲಿಂದ ಬಂದವರೇ ಹದಿನಾರು ಗುಂಟೆಯಲ್ಲಿ ಪಾಲಿಹೌಸ್‌ ನಿರ್ಮಿಸಿದರು.

Advertisement

ಕೃಷಿ ಏನಿದೆ?
 ಈಗ ಸೌತೆ ಕೃಷಿ ಮಾಡುತ್ತಿದ್ದಾರೆ. ಇದಕ್ಕಾಗಿ ಪಾಲಿಹೌಸ್‌ನಲ್ಲಿ ಕೆರೆ ಮಣ್ಣನ್ನು ಬಳಸಿ ಎರಡು ಅಡಿ ಅಗಲದ ಬದು ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಮಣ್ಣು ಹಾಗೂ ನೀರಿನ ಪರೀಕ್ಷೆ ಮಾಡಿಸಿದ್ದಾರೆ. ಹೀಗೆ ಮಾಡದೇ ಇದ್ದರೆ ಇಳುವರಿ ಹೆಚ್ಚಾಗುವುದಿಲ್ಲ. ನಷ್ಟ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ನರಸನಗೌಡ.

3,500 ಸೌತೆ ಸಸಿಗಳನ್ನು ನಾಟಿ ಮಾಡಿದ್ದಾರೆ. ಗಿಡ ಹಾಗೂ ಸಾಲಿನ ನಡುವೆ 40 ಸೆಂ.ಮೀ. ಅಂತರ ಕಾಯ್ದುಕೊಂಡಿದ್ದಾರೆ. ಒಂದು ಬದುವಿನಲ್ಲಿ ಎರಡು ಸಾಲು ಸೌತೆ ಬಳ್ಳಿಗಳಿವೆ. ಬದುಗಳ ನಡುವೆ ಒಂದು ಅಡಿಗಳಷ್ಟು ಅಂತರವಿದೆ. ಒಂದೂವರೆ ಅಡಿಗಳಷ್ಟು ಎತ್ತರದ ಬದುಗಳು ಸೌತೆ ಬಳ್ಳಿಗಳಿಗೆ ಉತ್ತಮ ಕಸುವು ಒದಗಿಸುತ್ತಿವೆ.
ಡಿಸೆಂಬರ್‌ ಮೂರನೆಯ ವಾರ ನಾಟಿ ಮಾಡಿದ್ದಾರೆ. ಕೇವಲ 90 ದಿನಕ್ಕೆ 10 ಟನ್‌ ಗಳಷ್ಟು ಇಳುವರಿ ಪಡೆದಿದ್ದಾರೆ. ಬೆಳೆ ಅವಧಿಯಲ್ಲಿ ಹದಿನಾಲ್ಕು ಟನ್‌ಗಳಷ್ಟು ಸೌತೆ ದೊರೆತದ್ದೂ ಉಂಟು. ಗುಂಟೆಗೆ ಒಂದು ಟನ್‌ ಸೌತೆ ಇಳುವರಿ ಸಿಕ್ಕಂತಾಗಿದೆ. ರಿಜಾÌನ್‌ ಕಂಪನಿಯ ಸೌತೆ ಬೀಜಗಳನ್ನು ಬಳಸಿದ್ದಾರೆ.

ಪಾಲಿಹೌಸ್‌ನಲ್ಲಿ ವಾತಾವರಣದ ಉಷ್ಣತೆ ಸಮತೋಲನ ಕಾಪಾಡುವುದು ಮುಖ್ಯ. ಒಂದು ವೇಳೆ ಬಿಸಿಲು ಕಡಿಮೆ ಇದ್ದಲ್ಲಿ ಸಿಗುವ ಫ‌ಸಲಿನಲ್ಲಿಯೂ ಅಸಮತೋಲನ ಉಂಟಾಗುತ್ತದೆ. ಸೌತೆ ಬಳ್ಳಿಯ ಒಂದು ಗಂಟಿನಲ್ಲಿ ಎರಡು ಕಾಯಿಗಳು ಬಿಡುತ್ತವೆ. ಗೆಣ್ಣುಗಳು ಬಳ್ಳಿಯಲ್ಲಿ ಬಹಳ ಅಗಲವಾಗಿ ಬಿಡದಂತೆ ಗಮನ ವಹಿಸಬೇಕು. ಬಿಸಿಲು ಕಡಿಮೆಯಾದರೆ ಗೆಣ್ಣಿನ ನಡುವಿನ ಅಂತರ ಜಾಸ್ತಿಯಾಗುತ್ತದೆ. ಆಗ ಸಹಜವಾಗಿಯೇ ಬಳ್ಳಿಯ ಉದ್ದ ಜಾಸ್ತಿಯಾಗುತ್ತದೆ. ಬಳ್ಳಿಯಲ್ಲಿ ಗೆಣ್ಣಿನ ನಡುವಿನ ಅಂತರ ಜಾಸ್ತಿಯಾದಂತೆ ಗಿಡದಲ್ಲಿ ಬಿಡುವ ಫ‌ಸಲಿನ ಪ್ರಮಾಣವೂ ಕಡಿಮೆಯಾಗುತ್ತದೆ ಎನ್ನುವ ಅಭಿಪ್ರಾಯ ಇವರದು.

ಬಳ್ಳಿಗಳಲ್ಲಿ ಕಾಯಿಗಳ ಸಂಖ್ಯೆ ಜಾಸ್ತಿ ಇದ್ದರೆ ಸಣ್ಣದಿರುವಾಗಲೇ ಕೆಲವು ಕಾಯಿಗಳನ್ನು ಚಿವುಟುವುದು ಉತ್ತಮ. ಚಿವುಟದಿದ್ದಲ್ಲಿ ಕಾಯಿಗಳ ಗಾತ್ರದಲ್ಲಿ ಅಸಮತೋಲನ ಉಂಟಾಗುತ್ತದೆ. ದೊಡ್ಡ ಕಾಯಿಗಳು ದೊಡ್ಡದಾಗುತ್ತಲೇ ಹೋಗುತ್ತವೆ. ಸಣ್ಣ ಕಾಯಿಗಳು ಸಣ್ಣದಾಗಿಯೇ ಇದ್ದುಬಿಡುತ್ತದೆ. ಇವುಗಳ ಗಾತ್ರದಲ್ಲಿ ಅಸಮತೋಲನ ಉಂಟಾದರೆ ಸಿಗುವ ದರದಲ್ಲಿಯೂ ವ್ಯತ್ಯಾಸವಾಗುತ್ತದೆ. ಹಾಗಾಗಿ ಬಳ್ಳಿಗಳಲ್ಲಿ ಬಹಳ ಕಾಯಿಗಳು ಕಾಣಿಸಿಕೊಂಡಾಗ ಕೆಲವನ್ನು ಚಿವುಟುವುದು ಉತ್ತಮವಂತೆ.

ಮಾರಾಟ
ತೆರೆದ ಸ್ಥಳದಲ್ಲಿನ ಕೃಷಿಯಲ್ಲಿ ಸಿಗುವ ಇಳುವರಿಗಿಂತ ಪಾಲಿಹೌಸ್‌ನಲ್ಲಿ ದೊರೆಯುವ ಇಳುವರಿಯ ಪ್ರಮಾಣ ಜಾಸ್ತಿ. ಕಾಯಿಗಳು ಒಂದೇ ಗಾತ್ರದಲ್ಲಿರುತ್ತದೆ. ನೈಸರ್ಗಿಕ ಹೊಳಪು. ರುಚಿಯಲ್ಲಿಯೂ ಭಿನ್ನ. ತೂಕದಲ್ಲಿಯೂ ಭಾರ. ಕಿಲೋಗ್ರಾಂ ಸೌತೆಗೆ ಸಾಮಾನ್ಯ ಸೌತೆಗಿಂತ ಐದು ರೂ. ಹೆಚ್ಚು ದರ ಸಿಗುತ್ತದೆ.

ಮೋರ್‌, ರಿಲಾಯನ್ಸ್‌, ಬಿಗ್‌ಬಜಾರ್‌ ನಂಥ ಮಾಲ್‌ಗ‌ಳಲ್ಲಿಯೂ ತಾವು ಬೆಳೆದ ಸೌತೆ ಇರುವಂತೆ ನೋಡಿಕೊಂಡಿದ್ದಾರೆ. ಪರಿಣಾಮ ಮಾರುಕಟ್ಟೆಯಲ್ಲಿ ಇವರು ಬೆಳೆದ ಸೌತೆ ಉತ್ತಮ ದರವನ್ನೇ ಪಡೆದುಕೊಂಡಿದೆ. ಒಂದು ಕಿ.ಲೋ ಸೌತೆ ಮಾಲ್‌ಗ‌ಳಲ್ಲೂ ಕೂಡ 20 ರೂ. ದರ ಸಿಗುತ್ತಿದೆಯಂತೆ.

ನೀರುಳಿಸುವಲ್ಲಿ ಜಾಣ್ಮೆ
ಗೌಡರು ಕೃಷಿಗೆ ಬೋರ್‌ ವೆಲ್‌ ನೀರನ್ನು ಅವಲಂಬಿಸಿದ್ದಾರೆ. ನೀರು ಸಂಗ್ರಹಿಸಲೆಂದೇ ಕೃಷಿ ಹೊಂಡ ರಚನೆ ಮಾಡಿಕೊಂಡಿದ್ದಾರೆ. ಪಾಲಿಹೌಸ್‌ ಮೇಲೆ ಬೀಳುವ ಮಳೆ ನೀರು ಕೃಷಿ ಹೊಂಡ ತಲುಪುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇವರ ಜಮೀನಿನಲ್ಲೊಂದು ಹಳೆಯ ಬಾವಿ ಇದೆ. ನೀರು ಬತ್ತಿಸಿಕೊಂಡ ಬಾವಿಯದು. ನೀರು ಸಿಗಬಹುದೆಂಬ ಭರವಸೆಯಿಂದ ಬಾವಿಯನ್ನು ಇನ್ನಷ್ಟು ಆಳಗೊಳಿಸಿದ್ದರು. ನೀರು ಬಂದಿರಲಿಲ್ಲ. ಅದೇ ಬಾವಿಯನ್ನು ನೀರು ಸಂಗ್ರಹಗಾರವನ್ನಾಗಿ ಮಾಡಿಕೊಂಡಿದ್ದಾರೆ. ಬಾವಿಯ ತಳಕ್ಕೆ ಕಾಂಕ್ರೀಟ್‌ ಬೆಡ್‌ ಹಾಕಿ ನೀರು ಇಂಗದಂತೆ ನೋಡಿಕೊಂಡಿದ್ದಾರೆ. ಬೋರ್‌ವೆಲ್‌ನಿಂದ ನೀರೆತ್ತಿ ಬಾವಿಗೆ ನೀರು ತುಂಬಿಸಿಕೊಳ್ಳುತ್ತಾರೆ. ಅದರಲ್ಲಿ ಸಂಗ್ರಹವಾದ ನೀರನ್ನು ಮೋಟರ್‌ ಸಹಾಯದಿಂದ ಮೇಲೆತ್ತಿ ಕೃಷಿಗೆ  ಬಳಸಿಕೊಳ್ಳುತ್ತಿದ್ದಾರೆ.

ನೀರು, ಸಂಗ್ರಹಿಸುವುದು, ಅದನ್ನು ಉಳಿಸುವುದು, ಬೆಳೆ ತೆಗೆಯುವುದು ಹಾಗೂ ಮಾರುಕಟ್ಟೆ ಹೀಗೆ ಎಲ್ಲವನ್ನೂ ಅಧ್ಯಯನ ಮಾಡಿ ಕೃಷಿ ಲಾಭದಾಯಕವಾಗಿರಿಸಿಕೊಂಡಿರುವ ಗೌಡರ ಹೆಜ್ಜೆ ಎಲ್ಲರಿಗೂ ಮಾದರಿ.

– ಕೋಡಕಣಿ ಜೈವಂತ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next