Advertisement

ಸೌಜನ್ಯ ಪ್ರಕರಣ: ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ

10:47 AM Apr 12, 2017 | |

ಬೆಂಗಳೂರು:ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ತನಿಖೆ ನಡೆಸುವಂತೆ ಸೂಚಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶಕ್ಕೆ ಮಂಗಳವಾರ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

Advertisement

ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಲೋಪಗಳಿವೆ ಎಂದು ಸೌಜನ್ಯ ತಂದೆ ಚಂದ್ರಪ್ಪಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ  ನಡೆಸಿದ್ದ ಸಿಬಿಐ  ವಿಶೇಷ ನ್ಯಾಯಾಲಯ ಫೆ. 7ರಂದು, ಪ್ರಕರಣ ಸಂಬಂಧ ಹೆಚ್ಚುವರಿ ತನಿಖೆ ನಡೆಸುವಂತೆ ಆದೇಶಿಸಿತ್ತು. ನ್ಯಾಯಾಲಯದ ಈ  ಆದೇಶ ರದ್ದುಪಡಿಸುವಂತೆ ಕೋರಿ ಧೀರಜ್‌ ಜೈನ್‌ಸೇರಿದಂತೆ ಮೂವರು ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಕುರಿತು ಅರ್ಜಿ ವಿಚಾರಣೆ  ನಡೆಸಿದ ನ್ಯಾಯಮೂರ್ತಿ ಆನಂದ್‌ ಭೈರಾರೆಡ್ಡಿ ಅವರಿದ್ದ ವಿಭಾಗೀಯ ಪೀಠ, ಸಿಬಿಐ ನ್ಯಾಯಾಲಯದ ಹೆಚ್ಚುವರಿ ತನಿಖೆಗೆ  ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿತು.

ಅರ್ಜಿದಾರ ವಕೀಲರಾದ ಪಿ.ಪಿ ಹೆಗಡೆ ವಾದ ಮಂಡಿಸಿ, ಸೌಜನ್ಯ  ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು, ಸಿಐಡಿ, ಸಿಬಿಐ, ಚೆನೈ ಸಿಬಿಐ ತಂಡ ತನಿಖೆ ನಡೆಸಿ ಸಂತೋಷ್‌ರಾವ್‌ ಆರೋಪಿ ಎಂದು ಚಾರ್ಜ್‌ಶೀಟ್‌ ಸಲ್ಲಿಸಿವೆ. ಅಲ್ಲದೆ ಈ ಪ್ರಕರಣದಲ್ಲಿ  19 ಮಂದಿಯ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ಜತೆಗೆ  ತಮ್ಮ ಕಕ್ಷಿದಾರರಾದ ಧೀರೇಂದ್ರ  ಜೈನ್‌ ಹಾಗೂ ಇತರರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪ್ರಕರಣದಲ್ಲಿ ಅವರ ಪಾತ್ರವಿಲ್ಲ ಎಂಬುದು ಸಾಬೀತಾಗಿದೆ.

ಹೀಗಿದ್ದರೂ ಆರೋಪಿ ಸಂತೋಷ್‌ರಾವ್‌ಗೆ ಶಿಕ್ಷೆಯಾಗುವ ಸಂಧರ್ಭದಲ್ಲಿ  ಐದನೇ ಬಾರಿ ತನಿಖೆಗೆ ಆದೇಶಿಸಿರುವ ಕ್ರಮ ಸರಿಯಿಲ್ಲ.ಯಾವುದೇ ಪ್ರಕರಣದ ಅಂತಿಮ ತನಿಖಾ ವರದಿ ಸಲ್ಲಿಸಿದ  ಬಳಿಕ ನ್ಯಾಯಾಲಯವೇ ಹೆಚ್ಚುವರಿ ತನಿಖೆಗೆ ಆದೇಶಿಸುವ ಅಧಿಕಾರವಿಲ್ಲ. ಒಂದು ವೇಳೆ ತನಿಖಾ ಸಂಸ್ಥೆ ಮನವಿ ಮಾಡಿದರೆ ಮಾತ್ರ ನ್ಯಾಯಾಲಯ ಹೆಚ್ಚುವರಿ ತನಿಖೆಗೆ ಆದೇಶಿಸಬಹುದು ಎಂದು ಸುಪ್ರೀಂಕೋರ್ಟ್‌ ಕೂಡ ಉಲ್ಲೇಖೀಸಿದೆ. ಪ್ರಕರಣದ ಆರೋಪಿ ಸಂತೋಷ್‌ರಾವ್‌ನನ್ನು ಶಿಕ್ಷೆಯಿಂದ ಪಾರು ಮಾಡಲು ಮತ್ತೂಮ್ಮೆ ತನಿಖೆಗೆ ಕೋರಲಾಗಿದೆ ಎಂದು ವಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next