ಬಳ್ಳಾರಿ: ಮದ್ಯ ಸೇವನೆಗೆ ಹಣ ನೀಡಿಲ್ಲವೆಂದು ಕೊಡಲಿಯಿಂದ ಕೊಲೆ ಮಾಡಿದ್ದ ಆರೋಪಿ ಎಸ್.ಜಡೆಪ್ಪನಿಗೆ ಇಲ್ಲಿನ ಎರಡನೇ ಮತ್ತು ಸತ್ರ ನ್ಯಾಯಾಧೀಶ ಬಿ.ಜಿ.ಪ್ರಮೋದ್ ಅವರು ಕಠಿಣ ಜೀವಾವಧಿ ಶಿಕ್ಷೆಯೊಂದಿಗೆ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ತಾಲೂಕಿನ ಹಳೆಮೋಕ ಗ್ರಾಮದ ತಿಮ್ಮಪ್ಪನ ಗುಡಿ ಬಳಿಯ ನಿವಾಸಿ ಆರೋಪಿ ಎಸ್.ಜಡೆಪ್ಪ, ಮದ್ಯ ವ್ಯಸನಿಯಾಗಿದ್ದು, ಮದ್ಯ ಸೇವಿಸಲು ತನ್ನ ಪತ್ನಿ ರಂಗಮ್ಮಳಿಗೆ ಹಣ ಕೇಳಿದ್ದಾನೆ. ಕೊಡದ ಹಿನ್ನೆಲೆಯಲ್ಲಿ ವಿನಾಕಾರಣ ಆಕೆಯ ಶೀಲ ಶಂಕಿಸಿ, ಹೊಡೆಬಡೆ ಮಾಡುತ್ತಿದ್ದನು. ಹೀಗೆ ಕಳೆದ 2022 ಜು.5 ರಂದು ರಾತ್ರಿ 8 ಗಂಟೆ ಸುಮಾರಿಗೆ ಮದ್ಯ ಸೇವಿಸಲು ಹಣ ನೀಡುವಂತೆ ಪತ್ನಿ ರಂಗಮ್ಮಳನ್ನು ಪೀಡಿಸಿದ್ದಾನೆ. ಹಣ ಇಲ್ಲ ಎಂದಿದ್ದಕ್ಕೆ ಆಕೆಯ ಶೀಲ ಶಂಕಿಸಿದ್ದಾನೆ. ಯಾರೊಂದಿಗೊ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದೆಲ್ಲ ಬಾಯಿಗೆ ಬಂದಂತೆ ಬೈಯ್ದು, ಏಕಾಏಕಿ ಕೊಡಲಿಯಿಂದ ಮನಸೋ ಇಚ್ಛೆ ರಂಗಮ್ಮಳ ಮೇಲೆ ಹಲ್ಲೆ ನಡೆಸಿದ್ದಾನೆ.
ಗಂಭೀರ ಗಾಯಗೊಂಡಿದ್ದ ರಂಗಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಘಟನೆ ನಡೆದ ಬಳಿಕ ಆರೋಪಿ ಜಡೆಪ್ಪ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಮೋಕಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾಕ್ಷ್ಯಾಧಾರಗಳಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಿಡಿಹಳ್ಳಿ ಠಾಣೆ ಸಿಪಿಐ ಉಮೇಶ್ ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಜಿ.ಪ್ರಮೋದ್ ಅವರು, ಆರೋಪಿ ಎಸ್.ಜಡೆಪ್ಪನಿಗೆ ಕಠಿಣ ಜೀವಾವಧಿ ಸಜೆ, ಮತ್ತು 10 ಸಾವಿರ ರೂ ದಂಡ ತಪ್ಪಿದಲ್ಲಿ ಎರಡು ತಿಂಗಳು ಸಾದಾ ಸಜೆ ಅನುಭವಿಸಬೇಕೆಂದು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಲಕ್ಷ್ಮಿದೇವಿ ಪಾಟೀಲ್ ಅವರು ವಾದ ಮಂಡಿಸಿದ್ದಾರೆ.
ಇದನ್ನೂ ಓದಿ: Cauvery Water; ಒಂದೇ ದಿನ ತಮಿಳುನಾಡಿಗೆ 2.25 ಲಕ್ಷ ಕ್ಯುಸೆಕ್ ನೀರು: ಡಿಕೆಶಿ