ದಾವಣಗೆರೆ: ಶೀಲ ಶಂಕಿಸಿ ಹೆಂಡತಿ ಮತ್ತು ಮಗುವನ್ನು ನೇಣು ಹಾಕಿ ಕೊಲೆ ಮಾಡಿದ್ದ ಆರೋಪಿಗೆ ದಾವಣಗೆರೆಯ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ದಾವಣಗೆರೆ ತಾಲೂಕಿನ ಮಾಯಕೊಂಡ ಗ್ರಾಮದ ನಾಗರಾಜ್ ಜೀವಾವಧಿ ಶಿಕ್ಷೆಗೆ ಒಳಪಟ್ಟವ. ಆರೋಪಿ ನಾಗರಾಜ್ ಸದಾ ತನ್ನ ಹೆಂಡತಿ ಶಿಲ್ಪಾಳ ಶೀಲದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾ ಜಗಳವಾಡುತ್ತಿದ್ದ. 2018ರ ಏ.19 ಬೆಳಗಿನ ಜಾವ 5;30 ರ ಸಮಯ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಜಗಳ ತೆಗೆದಿದ್ದಾನೆ. ಬಚ್ಚಲು ರೂಮಿನ ಕಡೆ ಹೋದ ಶಿಲ್ಪಾಳನ್ನು ಕೆಳಗೆ ಕೆಡವಿ ಹಗ್ಗವನ್ನು ಕುತ್ತಿಗೆಗೆ ಜೋರಾಗಿ ಬಿಗಿದು ಸಾಯಿಸಿ ನಂತರ ಯಾರಿಗೂ ಗೊತ್ತಾಗದಂತೆ ನೇಣು ಹಾಕಿದ್ದನು. ಈ ವೇಳೆ ತನ್ನದೇ ಎರಡು ವರ್ಷದ ಮಗಳು ಕೃತಿಕಾಳನ್ನು ಸಲಹುವ ಜವಾಬ್ದಾರಿ ನನ್ನ ಮೇಲೆ ಬೀಳುತ್ತದೆ ಎಂದು ಯೋಚಿಸಿ ಮಗಳನ್ನೂ ನೇಣು ಹಾಕಿ ಕೊಲೆ ಮಾಡಿ ಏನೂ ಗೊತ್ತಿಲ್ಲದ ಹಾಗೆ ಮನೆಯ ಹಿಂಬಾಗಿಲಿನಿಂದ ಹೊರ ಬಂದು, ಸಾಕ್ಷ್ಯ ನಾಶಪಡಿಸಿದ್ದನು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಗಂಡನೇ ಆರೋಪಿ ಎಂದು ತನಿಖೆಯಲ್ಲಿ ಕಂಡುಬಂದಿದೆ ಬಳಿಕ ನಾಗರಾಜ್ ನನ್ನು ವಿಚಾರಣೆ ನಡೆಸಿದ ವೇಳೆ ತಾನೇ ಕೊಲೆ ಮಾಡಿರುವ ವಿಚಾರ ಬಾಯಿ ಬಿಟ್ಟಿದ್ದಾನೆ.
ತನಿಖಾಧಿಕಾರಿ ಗುರುಬಸವರಾಜ್ ಆರೋಪಿತನ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಎನ್. ಪ್ರವೀಣ್ ಕುಮಾರ್, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದರು. ಸರ್ಕಾರದ ಪರವಾಗಿ ಅಭಿ ಯೋಜಕ ಕೆ.ಜಿ. ಜಯಪ್ಪ ವಾದ ಮಂಡಿಸಿದ್ದರು.
ಇದನ್ನೂ ಓದಿ: ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ