Advertisement

ಕೋರ್ಟ್‌ ಅನುಮತಿ ಸಿಕ್ಕರೆ ಸ್ಟೀಲ್‌ ಬ್ರಿಡ್ಜ್ ಪಕ್ಕಾ

11:26 AM Jan 25, 2017 | Team Udayavani |

ಬೆಂಗಳೂರು: “ಬಸವೇಶ್ವರ ವೃತ್ತದಿಂದ- ಹೆಬ್ಟಾಳ ನಡುವೆ ಉಕ್ಕಿನ ಸೇತುವೆ ನಿರ್ಮಿಸುವ ವಿಚಾರದಲ್ಲಿ ಜನರಿಗೆ ಯಾವುದೇ ಸಂಶಯ ಬೇಡ. ನ್ಯಾಯಾಲಯದ ಅನುಮತಿ ಸಿಗುತ್ತಿದ್ದಂತೆ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಲಿದೆ,” ಎಂದು ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಕೆ.ಜೆ. ಜಾರ್ಜ್‌ ಸ್ಪಷ್ಟಪಡಿಸಿದ್ದಾರೆ.

Advertisement

ನಗರದ ಹೊರವರ್ತುಲ ರಸ್ತೆಯ ನಾಗವಾರದಲ್ಲಿ ಬಿಬಿಎಂಪಿ ಹಾಗೂ ಎಂಬಸಿ ಗ್ರೂಪ್‌ ಸಹಯೋಗದಲ್ಲಿ 6.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪಾದಚಾರಿ ಮೇಲ್ಸೇತುವೆ ಉದ್ಘಾಟಿಸಿ ಮಾತನಾಡಿದ ಅವರು, “ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.

ಬೆಳೆಯುತ್ತಿರುವ ನಗರಕ್ಕೆ ಮೂಲಸೌಕರ್ಯ ಕಲ್ಪಿಸಲು ನ್ಯಾಯಾಲಯ ಕೂಡ ಸಮ್ಮತಿಸಲಿದೆ ಎಂಬ ವಿಶ್ವಾಸವಿದೆ. ನ್ಯಾಯಾಲಯದ ಒಪ್ಪಿಗೆ ದೊರೆಯುತ್ತಿದ್ದಂತೆ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿ ಶುರುವಾಗಲಿದೆ. ಈ ವಿಚಾರದಲ್ಲಿ ಯಾವುದೇ ಸಂಶಯ ಬೇಡ,” ಎಂದು ಅವರು ಸ್ಪಷ್ಟಪಡಿಸಿದರು.

“ವಿಮಾನ ನಿಲ್ದಾಣಕ್ಕೆ ಹೋಗುವವರಿಗಷ್ಟೇ ಉಕ್ಕಿನ ಸೇತುವೆ ಮಾಡುತ್ತಿದ್ದಾರೆ ಎಂದು ಕೆಲವರು ವಾದಿಸುತ್ತಿದ್ದಾರೆ. ಹೌದು, ವಿಮಾನ ನಿಲ್ದಾಣಕ್ಕೆ ಹೋಗುವವರೂ ನಮ್ಮವರೇ. ಉದ್ದೇಶಿತ ಉಕ್ಕಿನ ಸೇತುವೆ ಕೆಳಗಿನ ಸೇತುವೆಯಲ್ಲಿ ಸ್ಥಳೀಯರು ಓಡಾಡಲಿಕ್ಕೆ ಅನುಕೂಲವಾಗುತ್ತದೆ ಅಲ್ಲವೇ? ವಾಹನದಟ್ಟಣೆ ತಗ್ಗಿಸಲು ಈ ಯೋಜನೆ ಅತ್ಯವಶ್ಯಕ ಕೂಡ,” ಎಂದು ಸಮರ್ಥನೆ ನೀಡಿದರು. 

ಸಮೂಹ ಸಾರಿಗೆ ಬೇಡ, ಕಾರು ಬೇಕು!: ನಗರದ ಸಾರಿಗೆಗೆ ಸಂಬಂಧಿಸಿದ ಬೃಹತ್‌ ಯೋಜನೆಗಳನ್ನು ವಿರೋಧಿಸುವವರು ಸಾರ್ವಜನಿಕ ಸಾರಿಗೆಯನ್ನು ಬಳಸಲು ಮಾತ್ರ ತಯಾರಿಲ್ಲ. ಸ್ವಂತ ಕಾರುಗಳಲ್ಲೇ ತಾವು ಓಡಾಡಬೇಕು. ಮತ್ತೂಂದೆಡೆ ಆದಾಯವೂ ಬರುತ್ತಿರಬೇಕು.

Advertisement

ಆದರೆ, ತಾವು ಕಾರುಗಳಲ್ಲಿ ಓಡಾಡುವುದರಿಂದ ಉಂಟಾಗುವ ವಾಹನದಟ್ಟಣೆ ಸಮಸ್ಯೆಗಳ ಪರಿಹಾರಕ್ಕೆ ಬೃಹತ್‌ ಯೋಜನೆಗಳು ಮಾತ್ರ ಬೇಡ. ಈ ದ್ವಂದ್ವ ನಿಲುವು ಏಕೆ? ವಿರೋಧಿಸುವ ವರ್ಗ ಸಾರ್ವಜನಿಕ ಸಾರಿಗೆ ಉಪಯೋಗಿಸಿದರೆ ಬಹುತೇಕ ಸಮಸ್ಯೆಗಳು ಪರಿಹಾರ ಆಗಲಿವೆ,”  ಎಂದು ಉಕ್ಕಿನ ಸೇತುವೆ ವಿರೋಧಿಗಳಿಗೆ ಕೃಷಿ ಸಚಿವ ಕೃಷ್ಣ ಬೈರೇಗೌಡ ತಿರುಗೇಟು ನೀಡಿದ್ದಾರೆ. 

ಯಾರಾದ್ರೂ ಕಾರ್‌ ಪೂಲಿಂಗ್‌ ಮಾಡ್ತಿದಾರ? “ಮಾನ್ಯತಾ ಟೆಕ್‌ಪಾರ್ಕ್‌ನಲ್ಲೇ ನಿತ್ಯ 15ರಿಂದ 20 ಸಾವಿರ ನಾಲ್ಕು ಚಕ್ರದ ವಾಹನಗಳು ಬರುತ್ತವೆ. ಈ ಪೈಕಿ ಶೇ. 76ರಷ್ಟು ವಾಹನಗಳಲ್ಲಿ ತಲಾ ಒಬ್ಬರೇ ಓಡಾಡುತ್ತಾರೆ. ಅವರೆಲ್ಲರೂ ನಿತ್ಯ ಇಂದಿರಾನಗರ, ಜಯನಗರ, ವಿಜಯನಗರ ಮತ್ತಿತರ ಕಡೆಗಳಿಂದ ಬರುವವರು.

ಆದರೆ ಒಂದೇ ಕಡೆಯಿಂದ ಬರುತ್ತಿದ್ದರೂ, ಅವರ್ಯಾರೂ “ಕಾರು ಶೇರ್‌’ ಮಾಡಿಕೊಳ್ಳುವುದಿಲ್ಲ. ಇದು ಒಂದು ಉದಾಹರಣೆ ಅಷ್ಟೇ. ನಗರದ ಎಲ್ಲ ವಾಣಿಜ್ಯ ಸ್ಥಳಗಳ ಪರಿಸ್ಥಿತಿ ಇದೇ ಆಗಿದೆ. ಹೀಗಿರುವಾಗ ಸಮಸ್ಯೆ ಹೇಗೆ ಬಗೆಹರಿಯುತ್ತದೆ,” ಎಂದು ಸಚಿವ ಕೃಷ್ಣಬೈರೇಗೌಡ ಪ್ರಶ್ನೆ ಹಾಗಿದ್ದಾರೆ.

ಮೇಯರ್‌ ಜಿ.ಪದ್ಮಾವತಿ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮಹಮ್ಮದ್‌ ರಿಜ್ವಾನ್‌ ನವಾಬ್‌, ವಿ.ವಿ.ಪಾರ್ತಿಬರಾಜನ್‌, ಎಂಬಸಿ ಗ್ರೂಪ್‌ ಅಧ್ಯಕ್ಷ ಜೀತು ವೀರವಾನಿ, ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮತ್ತಿತರರು ಉಪಸ್ಥಿತರಿದ್ದರು.

70 ಕೋಟಿ ರೂ. ವೆಚ್ಚದಲ್ಲಿ ನಾಗವಾರದಿಂದ ಮಾನ್ಯತಾ ಟೆಕ್‌ಪಾರ್ಕ್‌ಗೆ ಫ್ಲೈಓವರ್‌ 
ನಾಗವಾರದಲ್ಲಿರುವ ಹೊರವರ್ತುಲ ರಸ್ತೆಯಿಂದ ಮಾನ್ಯತಾ ಟೆಕ್‌ಪಾರ್ಕ್‌ವರೆಗೆ ಎಂಬಸಿ ಗ್ರೂಪ್‌ನಿಂದ 70 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಎಂಬಸಿ ಗ್ರೂಪ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜೀತು ವೀರವಾನಿ ತಿಳಿಸಿದ್ದಾರೆ.

ಪ್ರಸ್ತುತ ಬಿಬಿಎಂಪಿ ಸಹಯೋಗದಲ್ಲಿ ನಿರ್ಮಿಸುವ ಪಾದಚಾರಿ ಮೇಲ್ಸೇತುವೆಯಿಂದ ಸ್ಥಳೀಯರಿಗೆ ಅನುಕೂಲವಾಗಲಿದೆ. ನಿತ್ಯ ಅಂದಾಜು 50 ಸಾವಿರ ಜನರಿಗೆ ಇದರಿಂದ ಉಪಯೋಗ ಆಗಲಿದೆ. ಎಸ್ಕೆಲೇಟರ್‌ ಇರುವುದರಿಂದ ವೃದ್ಧರು, ಮಹಿಳೆಯರಿಗೆ  ರಸ್ತೆ ದಾಟಲು ಅನುಕೂಲವಾಗಲಿದೆ. ಮುಂದಿನ ಹಂತದಲ್ಲಿ ಕಂಪೆನಿಯು 70 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸುವ ಗುರಿ ಹೊಂದಿದ್ದು, ಇದಕ್ಕೆ ಆರಂಭಿಕ 50 ಕೋಟಿ ರೂ. ನೀಡಲು ಸಿದ್ಧ ಎಂದು ಅವರು ಹೇಳಿದರು.

ಬೆಳೆಯುತ್ತಿರುವ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ನಗರಕ್ಕೆ ಮೂಲಸೌಕರ್ಯ ಕಲ್ಪಿಸಲು ನ್ಯಾಯಾಲಯ ಕೂಡ ಸಮ್ಮತಿಸಲಿದೆ ಎಂಬ ವಿಶ್ವಾಸವಿದೆ. ನ್ಯಾಯಾಲಯದ ಒಪ್ಪಿಗೆ ದೊರೆಯುತ್ತಿದ್ದಂತೆ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿ ಶುರುವಾಗಲಿದೆ. 
-ಕೆ.ಜೆ.ಜಾರ್ಜ್‌, ಬೆಂಗಳೂರು ಅಭಿವೃದ್ಧಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next