ನವದೆಹಲಿ: ಕಳೆದ ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ರಾಷ್ಟ್ರೀಯ ಹಿತಾಸಕ್ತಿಗಿಂತ ಕೇಜ್ರಿವಾಲ್ ಅವರಿಗೆ ಅವರ ವೈಯಕ್ತಿಕ ಹಿತಾಸಕ್ತಿ ಹೆಚ್ಚು ಮುಖ್ಯವಾಗಿದೆ, ಸರ್ಕಾರದ ಸಂಪೂರ್ಣ ಹಿತಾಸಕ್ತಿ ಅಧಿಕಾರದಲ್ಲಿದೆ ಎಂದು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಶಾಲೆಗಳಲ್ಲಿ ಪಠ್ಯಪುಸ್ತಕಗಳು ಮತ್ತು ಸಮವಸ್ತ್ರಗಳ ಲಭ್ಯತೆಯಿಲ್ಲದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ಈ ಅಭಿಪ್ರಾಯಗಳನ್ನು ನೀಡಿದೆ. ದೆಹಲಿ ನಗರಾಭಿವೃದ್ಧಿ ಸಚಿವ ಸೌರಭ್ ಭಾರದ್ವಾಜ್ ವಿದ್ಯಾರ್ಥಿಗಳ ಕಷ್ಟ ನೋಡಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ, ಕೇಜ್ರಿವಾಲ್ ನ್ಯಾಯಾಂಗ ಬಂಧನದಲ್ಲಿದ್ದುಕೊಂಡು ಆಡಳಿತ ನಡೆಸುತ್ತಿರುವುದರಿಂದ ದೆಹಲಿಯ ವಿದ್ಯಾರ್ಥಿಗಳು ಮತ್ತು ಜನರು ತೊಂದರೆ ಎದುರಿಸುತ್ತಿದ್ದಾರೆ ಎಂದು ಕೋರ್ಟ್ ಛೀಮಾರಿ ಹಾಕಿದೆ.
5 ಕೋಟಿಗೂ ಹೆಚ್ಚು ಮೌಲ್ಯದ ಸರ್ಕಾರಿ ಗುತ್ತಿಗೆಗಳನ್ನು ಹಂಚಿಕೆ ಮಾಡಲು ದೆಹಲಿ ಸರ್ಕಾರದ ಸ್ಥಾಯಿ ಸಮಿತಿಯ ಅನುಮೋದನೆ ಅಗತ್ಯವಿದೆ. ಆದರೆ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿರುವ ಕಾರಣ ಈ ಸಮಿತಿ ಸದ್ಯ ದೆಹಲಿಯಲ್ಲಿ ಸಕ್ರಿಯವಾಗಿಲ್ಲ. ಇದರಿಂದ ವಿದ್ಯಾರ್ಥಿಗಳ ಸಮವಸ್ತ್ರ, ಪುಸ್ತಕ, ಶಾಲಾ ಬ್ಯಾಗ್, ಲೇಖನ ಸಾಮಗ್ರಿಗಳಿಗೆ ಸಂಬಂಧಿಸಿದ ಗುತ್ತಿಗೆ ಹಂಚಿಕೆ ಸಕಾಲಕ್ಕೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರಕ್ಕೆ ಸೇರಿದ ಮುನ್ಸಿಪಲ್ ಶಾಲೆಗಳಲ್ಲಿ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ವಿಚಾರದಲ್ಲಿ ನೇರವಾಗಿ ಮಧ್ಯಪ್ರವೇಶಿಸುವ ಅಧಿಕಾರ ಅವರಿಗಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಸರ್ಕಾರದ ಜವಾಬ್ದಾರಿಗಳಲ್ಲಿನ ಲೋಪಗಳು ಸ್ಪಷ್ಟವಾಗಿ ಕಂಡುಬರುವುದರಿಂದ ಅವುಗಳನ್ನು ಪರಿಹರಿಸಬೇಕೆಂದು ಪೀಠವು ಹೇಳಿದೆ. ಏತನ್ಮಧ್ಯೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಬಂಧಿಸಲಾಯಿತು. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿರುವುದರಿಂದ ಸದ್ಯ ಅವರು ತಿಹಾರ್ ಜೈಲಿನಲ್ಲಿದ್ದಾರೆ.