ಪ್ರಯಾಗ್‌ರಾಜ್: ಸುಪ್ರೀಂ ಕೋರ್ಟ್ ಹಿಂದೂಗಳ ಭಾವನೆಗಳಿಗೆ ಬೆಲೆ ಕೊಡುತ್ತಿಲ್ಲ. ಶಬರಿಮಲೆ ವಿಚಾರದಲ್ಲಿ ಕೋರ್ಟ್ ತೀರ್ಪನ್ನು ಭಕ್ತಾದಿಗಳ ಮೇಲೆ ಹೇರುವ ಮೂಲಕ ಕೇರಳ ಸರಕಾರವು ಅಯ್ಯಪ್ಪ ಭಕ್ತರಿಗೆ ತೊಂದರೆ ಕೊಡುತ್ತಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕಿಡಿಕಾರಿದ್ದಾರೆ.
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಿಶ್ವ ಹಿಂದೂ ಪರಿಷತ್‌ನ ಧರ್ಮ ಸಂಸದ್‌ನಲ್ಲಿ ಮಾತನಾಡಿದ ಅವರು, “ನಾವು ಶಬರಿಮಲೆ ವಿಚಾರದಲ್ಲಿ ಹಿಂದೂಗಳ ಪ್ರತಿಭಟನೆಗೆ ಬೆಂಬಲ ನೀಡುತ್ತೇವೆ. ಏಕೆಂದರೆ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದವರು ಅಯ್ಯಪ್ಪ ಭಕ್ತರಲ್ಲ. ಯಾವ ಮಹಿಳೆಯೂ ಅಯ್ಯಪ್ಪ ದೇಗುಲಕ್ಕೆ ತೆರಳಲು ಇಚ್ಛಿಸುವುದಿಲ್ಲ. ಅದಕ್ಕಾಗಿಯೇ ಶ್ರೀಲಂಕಾದ ಮಹಿಳೆಯನ್ನು ಕರೆತಂದು, ಹಿಂಬಾಗಿಲ ಮೂಲಕ ದೇಗುಲಕ್ಕೆ ನುಗ್ಗಿಸಲಾಯಿತು. ಅಲ್ಲದೆ ಸುಪ್ರೀಂ ಕೋರ್ಟ್ ಕೂಡ ಲಕ್ಷಾಂತರ ಹಿಂದೂಗಳ ಭಾವನೆಯನ್ನು ಗೌರವಿಸಿಲ್ಲ’ ಎಂದು ಹೇಳಿದ್ದಾರೆ.
ಹಿಂದೂ ಸಮಾಜವನ್ನು ಒಡೆಯಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಧಾರ್ಮಿಕ ಸಮಾವೇಶಗಳ ಮೂಲಕ ಎಲ್ಲ ಹಿಂದೂಗಳನ್ನೂ ಒಗ್ಗಟ್ಟಾಗುವಂತೆ ಮಾಡಬೇಕಾದ ಅಗತ್ಯವಿದೆ ಎಂದೂ ಭಾಗವತ್ ಇದೇ ವೇಳೆ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಗುರು ರಾಮದೇವ್, ಸಮಾನ ನಾಗರಿಕ ಸಂಹಿತೆಗೆ ಕಾನೂನು ತರಬೇಕೆಂದು ಆಗ್ರಹಿಸಿದ್ದಾರೆ. 2 ದಿನಗಳ ಕಾಲ ಧರ್ಮ ಸಂಸದ್ ನಡೆಯಲಿದೆ.
ರಾಮಮಂದಿರ ನಿರ್ಮಾಣ ಮಾಡುವುದು ಶೇ.200ರಷ್ಟು ಖಚಿತ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಜಗತ್ತಿನ ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ.
ಗಿರಿರಾಜ್ ಸಿಂಗ್ ಕೇಂದ್ರ ಸಚಿವ
ಮಂದಿರ ವಿವಾದವು ಮತ್ತೂಂದು ಕಾಶ್ಮೀರ ವಿವಾದದಂತೆ ಆಗುವುದು ಬೇಡ. ಆರೆಸ್ಸೆಸ್ ನಾಯಕರು ದೇಗುಲ ನಿರ್ಮಾಣ ವಿಳಂಬಕ್ಕೆ ಪ್ರಧಾನಿ ಮತ್ತು ಬಿಜೆಪಿ ನಾಯಕರನ್ನು ಹೊಣೆ ಮಾಡುವ ಬದಲು, ಜಡ್ಜ್ ಗಳನ್ನು ಟೀಕಿಸುತ್ತಿರುವುದು ಅಚ್ಚರಿ ಮೂಡಿಸಿದೆ.
ಶಿವಸೇನೆ ಸಾಮ್ನಾ ಸಂಪಾದಕೀಯದಲ್ಲಿ