Advertisement

ವಿದ್ಯಾರ್ಥಿಗೆ ಲೈಂಗಿಕ ದೌರ್ಜನ್ಯ: ಉಪನ್ಯಾಸಕನಿಗೆ ಜೀವಾವಧಿ ಶಿಕ್ಷೆ

09:14 PM Jul 26, 2023 | Team Udayavani |

ಮಂಗಳೂರು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಂದಿಗೆ ಅನೈಸರ್ಗಿಕ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯ ಎಸಗಿದ ಅಪರಾಧಿ ಉಪನ್ಯಾಸಕನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಎಫ್ಟಿಎಸ್‌ಸಿ-1) ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Advertisement

ಕುಳಾಯಿಯ ಪೃಥ್ವಿರಾಜ್‌ (33) ಶಿಕ್ಷೆಗೊಳಗಾದವ. ಈತ ಎಸೆಸ್ಸೆಲ್ಸಿ ವಿದ್ಯಾರ್ಥಿಯೋರ್ವನಿಗೆ 2014ರ ಆ. 1ರಿಂದ 2016ರ ಸೆ. 2ರ ವರೆಗೆ ಅನೈಸರ್ಗಿಕ ರೀತಿಯ ಲೈಂಗಿಕ ಕ್ರಿಯೆ ಮೂಲಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಸುರತ್ಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂಕ ಕಡಿತ ಬೆದರಿಕೆ
ಅಪರಾಧಿ ಪೃಥ್ವಿರಾಜ್‌ ವಿದ್ಯಾರ್ಥಿಯನ್ನು ತನ್ನ ಮನೆಗೆ ಕರೆಯಿಸಿ ನಿರಂತರವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಯಾರಿಗಾದರೂ ಹೇಳಿದರೆ ಬಿಡುವುದಿಲ್ಲ, ಪರೀಕ್ಷೆಯಲ್ಲಿ ಅಂಕ ಕಡಿತ ಮಾಡುತ್ತೇನೆ. ಹಾಜರಾತಿ ಕಡಿತ ಮಾಡುತ್ತೇನೆ ಎಂದು ಹೆದರಿಸಿದ್ದ. ಬಾಲಕನ ಜನನಾಂಗದಲ್ಲಿ ಹುಣ್ಣಾಗಿ ಗಾಯವಾಗಿ ವೈದ್ಯರಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ಪಡೆಯುವ ವೇಳೆ ಬಾಲಕ ತನ್ನ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಮನೆಯವರು ಮತ್ತು ವೈದ್ಯರಿಗೆ ತಿಳಿಸಿದ್ದ. ಸುರತ್ಕಲ್‌ ಇನ್‌ಸ್ಪೆಕ್ಟರ್‌ ಆಗಿದ್ದ ಚೆಲುವರಾಜ್‌ ಬಿ. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಆರೋಪಿಯ ಅಪರಾಧ ದೃಢಪಟ್ಟಿರುವುದರಿಂದ ಆರೋಪಿ ತಪ್ಪಿತಸ್ಥನೆಂದು ತೀರ್ಪು ನೀಡಿ ಬುಧವಾರದಂದು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಅಪರಾಧಿಗೆ ಪೋಕೊÕ ಕಾಯ್ದೆ ಸೆಕ್ಷನ್‌ 6ರಡಿ ಜೀವಾವಧಿ ಶಿಕ್ಷೆ ಮತ್ತು 25,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಕಠಿನ ಸಜೆ, ಪೋಕೊÕ ಸೆಕ್ಷನ್‌ 10ರಂತೆ 5 ವರ್ಷ ಸಾದಾ ಸಜೆ, 5,000 ರೂ. ದಂಡ ಮತ್ತು ದಂಡ ಪಾವತಿಸಲು ತಪ್ಪಿದರೆ 3 ತಿಂಗಳ ಸಾದಾ ಸಜೆ, ಐಪಿಸಿ ಸೆಕ್ಷನ್‌ 377ರಡಿ 10 ವರ್ಷ ಕಠಿನ ಸಜೆ, 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಕಠಿನ ಸಜೆ, ಐಪಿಸಿ 506ರಡಿ 1 ವರ್ಷ ಸಾದಾ ಸಜೆ, 1,000 ರೂ.ದಂಡ, ಒಂದು ವೇಳೆ ದಂಡ ಪಾವತಿಸದಿದ್ದರೆ ಹೆಚ್ಚುವರಿ 1 ತಿಂಗಳು ಹೆಚ್ಚುವರಿ ಸಾದಾ ಸಜೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಅಲ್ಲದೆ ಸಂತ್ರಸ್ತ ಬಾಲಕನಿಗೆ ರಾಜ್ಯ ಸರಕಾರ 1 ಲ.ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ಅವರು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next