ಔರಾದ: ಪಟ್ಟಣದ ತಾಲೂಕು ನ್ಯಾಯಾಲಯ ಆವರಣಕ್ಕೆ ಸೋಮವಾರ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಭೇಟಿ ನೀಡಿ, ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಸ್ಥಳ ಪರಿಶೀಲನೆ ನಡೆಸಿದರು.
ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡಲು ವಿಳಂಬ ಮಾಡುತ್ತಿರುವ ತಹಶೀಲ್ದಾರರನ್ನು ಸ್ಥಳಕ್ಕೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡರು. ಔರಾದನಲ್ಲಿ ಭವ್ಯ ನ್ಯಾಯಾಲಯಗಳ ಸಂಕೀರ್ಣ ನಿರ್ಮಾಣವಾಗಬೇಕು ಎನ್ನುವ ಉದ್ದೇಶದಿಂದ ಹಿಂದಿನ ಶಾಸಕ ಅವಧಿಯಲ್ಲಿ ಹಲವು ಬಾರಿ ಸರ್ಕಾರಕ್ಕೆ ಪತ್ರಗಳನ್ನು ಬರೆದಿದ್ದೆ. ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಬೇಗ ಮಂಜೂರಾತಿ ನೀಡುವಂತೆ ಒತ್ತಾಯಿಸಿದ್ದೆ. ಅದರ ಫಲವಾಗಿ 2017-18ನೇ ಸಾಲಿನಲ್ಲಿ ಔರಾದ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿದೆ. ಬೇಗ ನಿವೇಶನ ನೀಡುವಂತೆ ಹಲವು ಸಭೆಗಳಲ್ಲಿ ಮತ್ತು ದೂರವಾಣಿ ಮೂಲಕವು ತಿಳಿಸಲಾಗಿದೆ. ಆದರೂ ಸಹ ನಿವೇಶನ ನೀಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ತಾವು ಶಾಸಕನಾದ ನಂತರ ತಾಲೂಕಿನಲ್ಲಿ ಹಲವು ಅಭಿವೃದ್ಧಿ ಕೆಲಸಗಳಾಗಿವೆ. ಶಾಲೆ-ಕಾಲೇಜುಗಳು, ವಸತಿ ನಿಲಯಗಳು, ಆಸ್ಪತ್ರೆಗಳು ಸೇರಿದಂತೆ ಹಲವಾರು ಕಟ್ಟಡಗಳನ್ನು ನಿರ್ಮಿಸಲಾಗಿದೆ. ತಾಲೂಕಿನಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಿಸಬೇಕೆಂದು ತಾಲೂಕಿನ ವಕೀಲರು ಹಾಗೂ ನ್ಯಾಯಾಲಯಕ್ಕೆ ಸಂಬಂಧಿ ಸಿದವರ ಬಹುದಿನಗಳ ಬೇಡಿಕೆಯಾಗಿದೆ. ಕೂಡಲೇ ನಿವೇಶನ ಹಸ್ತಾಂತರಿಸಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಬೇಕೆಂದು ತಹಶೀಲ್ದಾರ್‌ಗೆ ತಾಕೀತು ಮಾಡಿದರು.
ಅಂದಾಜು 13 ಕೋಟಿ ರೂ.ಗಳ ವೆಚ್ಚದಲ್ಲಿ 1 ಎಕರೆ 15 ಗುಂಟೆ ಪ್ರದೇಶದಲ್ಲಿ ಕೋರ್ಟ್ ಸಂಕೀರ್ಣ ನಿರ್ಮಿಸಲಾಗುತ್ತಿದೆ. ನಿವೇಶನ ಪತ್ರಗಳು ಹಸ್ತಾಂತರವಾದ ಕೂಡಲೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಬೇಕೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಪಪಂ ಸದಸ್ಯ ಸಂತೋಷ ಪೊಕಲ್ವಾರ, ಕೆರಬಾ ಪವಾರ, ರಮೇಶ ದೇವಕತ್ತೆ, ಶಶಿರಾವ ಕೋಳಿ, ಪ್ರಕಾಶ ಅಲ್ಮಾಜೆ, ಶಿವಾಜಿ ಚವ್ಹಾಣ, ಶರಣಪ್ಪ ಪಂಚಾಕ್ಷರಿ, ಸಂಜೀವ ಒಡೆಯರ್, ಪ್ರಕಾಶ ಭಂಗಾರೆ, ಬಿ.ಕೆ. ನಾಯಕ್ ಇದ್ದರು.