ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನಿಗೆ ಮಂಪರು ಪರೀಕ್ಷೆ ನಡೆಸಲು ಕೋರ್ಟ್ ಅನುಮತಿ ನೀಡಿದೆ.
ಎಸ್‌ಐಟಿ ವಶದಲ್ಲಿರುವ ನವೀನ್‌ಕುಮಾರ್ ತನಿಖೆಗೆ ಸಹಕಾರ ನೀಡುತ್ತಿಲ್ಲ. ಗಂಟೆಗೊಂದು ಹೇಳಿಕೆ ನೀಡುತ್ತಿದ್ದಾನೆ. ಹೀಗಾಗಿ ಮಂಪರು ಪರೀಕ್ಷೆಗೆ ಅನುಮತಿ ನೀಡಬೇಕು ಎಂದು ಮಾ.9ರಂದು ವಿಶೇಷ ತನಿಖಾ ತಂಡ 3ನೇ ಎಸಿಎಂಎಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವೆಂಕಣ್ಣ ಹೊಸಮನಿ, ಮಂಪರು ಪರೀಕ್ಷೆಗೆ ಆರೋಪಿಯ ಅನುಮತಿ ಪಡೆದರು. ಆ ವೇಳೆ ನವೀನ್ ಕುಮಾರ್, ನಾನು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಪರೀಕ್ಷೆಗೂ ಸಿದ್ಧ ಎಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ.
ಈ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಆಯೋಗ ಹಾಗೂ ಸುಪ್ರೀಂಕೋರ್ಟ್ ಮಾರ್ಗಸೂಚಿಯಂತೆ ಆರೋಪಿ ಪರ ವಕೀಲರ ಸಮ್ಮುಖದಲ್ಲಿ ಮಂಪರು ಪರೀಕ್ಷೆ ನಡೆಸಬೇಕು. ಆರೋಪಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಾರದು. ಮಂಪರು ಪರೀಕ್ಷೆ ನಡೆಸುವ ವಿಧಿವಿಜ್ಞಾನ ಪ್ರಯೋಗಾಲಯಗಳ ಅಧಿಕಾರಿಗಳ ಜತೆ ಸಂಪರ್ಕ ಮಾಡಿ ದಿನಾಂಕ ನಿಗದಿ ಮಾಡಿ ಕೋರ್ಟ್ ಗಮನಕ್ಕೆ ತರುವಂತೆ ಎಸ್‌ಐಟಿ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದರು.
ನೆರೆ ರಾಜ್ಯಗಳಲ್ಲಿ ಪರೀಕ್ಷೆ: ಹೈದರಾಬಾದ್ ಅಥವಾ ಅಹಮದಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲು ಎಸ್‌ಐಟಿ ಮುಂದಾಗಿದ್ದು, ಹಿರಿಯ ಅಧಿಕಾರಿಗಳ ಒಪ್ಪಿಗೆ ದೊರೆತ ಬಳಿಕ ದಿನಾಂಕ ಹಾಗೂ ಪ್ರಯೋಗಾಲಯದ ಹೆಸರನ್ನು ಕೋರ್ಟ್ ಗಮನಕ್ಕೆ ತರಲಾಗುವುದು ಎಂದು ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.
ಮತ್ತೆ ವಶಕ್ಕೆ: ಆರೋಪಿಯನ್ನು ಈಗಾಗಲೇ ಮಾ.13ರವೆರಗೆ ವಶಕ್ಕೆ ಪಡೆದಿದ್ದ ಎಸ್‌ಐಟಿ ಒಂದು ದಿನ ಮೊದಲೇ ಕೋರ್ಟ್‌ಗೆ ಹಾಜರು ಪಡಿಸಿ ಮತ್ತೆ ಮಾ.26ರವರೆಗೆ ವಶಕ್ಕೆ ಪಡೆದುಕೊಂಡಿದೆ. ಮಂಪರು ಪರೀಕ್ಷೆ ಹಾಗೂ ಇನ್ನು ವಿಚಾರಣೆ ಬಾಕಿ ಇರುವುದರಿಂದ 15 ದಿನ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪುರಸ್ಕರಿಸಿದ ನ್ಯಾಯಾಲಯ ಆರೋಪಿಯನ್ನು ಮಾ.26ರವರೆ ವಶಕ್ಕೆ ನೀಡಿ ಆದೇಶಿಸಿದೆ.