ಮಲೇಬೆನ್ನೂರು: ಭಾರತ ಸೇರಿದಂತೆ ಇಡೀ ಜಗತ್ತಿಗೆ ಆವರಿಸಿರುವ ಕೋವಿಡ್ ಸೋಂಕಿನಿಂದ ಜನಜೀವನ ತತ್ತರಿಸಿದೆ. ನಾಗರಿಕರು ಧೈರ್ಯ, ತಾಳ್ಮೆ ಕಳೆದುಕೊಳ್ಳಬಾರದು. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರಿಂದ ಕೋವಿಡ್ ನಿಯಂತ್ರಣ ಸಾಧ್ಯವಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ| ಪ್ರಸನ್ನರೇಣುಕ ವೀರಸೋಮೇಶ್ವರ ಭಗವತ್ಪಾದರು ಹೇಳಿದರು.
ಭಾನುವಾರ ಪಟ್ಟಣದ ಶ್ರೀ ಗುರುರೇಣುಕಾ ರೈಸ್ ಇಂಡಸ್ಟ್ರೀಸ್ ಆವರಣದಲ್ಲಿ ದೀಪಾವಳಿ ಅಮವಾಸ್ಯೆ ನಿಮಿತ್ತ ಹಮ್ಮಿಕೊಂಡಿದ್ದ 29ನೇ ವರ್ಷದ ಇಷ್ಟಲಿಂಗ ಮಹಾಪೂಜೆಯ ನಂತರ ಶ್ರೀಗಳು ಆಶೀರ್ವಚನ ನೀಡಿದರು. ಜನರು ಎರಡು ತಿಂಗಳು ಜಾಗರೂಕರಾಗಿದ್ದರೆ ಕೋವಿಡ್ ಸೋಂಕು ನಿವಾರಿಸಬಹುದು ಎಂದರು.
ರಂಭಾಪುರಿ ಪೀಠ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಪ್ರತಿನಿತ್ಯ ಅನ್ನ ದಾಸೋಹ ನಡೆಸಲು ಮಲೇಬೆನ್ನೂರಿನ ರೇಣುಕಾ ರೈಸ್ ಇಂಡಸ್ಟ್ರೀಸ್‌ನ ಸೇವೆ ಅನನ್ಯ. ಪ್ರತಿ ವರ್ಷ ವರ್ತಕ ಬಿ.ಎಂ. ನಂಜಯ್ಯ ಮತ್ತು ಅವರ ಕುಟುಂಬದವರು ಪೀಠಕ್ಕೆ ಅನ್ನ ದಾಸೋಹಕ್ಕಾಗಿ 51 ಸಾವಿರ ರೂ. ದೇಣಿಗೆನೀಡಿ ಧರ್ಮನಿಷ್ಠೆ ತೋರುತ್ತಿದ್ದಾರೆ. ಮಠದಲ್ಲಿ ಪ್ರತಿ ನಿತ್ಯ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ಭಕ್ತಾದಿಗಳ ಅನ್ನ ದಾಸೋಹಕ್ಕೆ ಕಳೆದ ವರ್ಷದಿಂದ ಮಲೇಬೆನ್ನೂರಿನ ಎಲ್ಲಾ ರೈಸ್ ಮಿಲ್‌ಗಳ ಮಾಲೀಕರು ಒಂದು ಲೋಡ್ ಅಕ್ಕಿಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ವರ್ತಕ ಬಿ.ಎಂ. ನಂಜಯ್ಯ, ಗುತ್ತಿಗೆದಾರ ಬಿ.ಎಂ. ಜಗದೀಶಸ್ವಾಮಿ, ಜಿಪಂ ಸದಸ್ಯ ಬಿ.ಎಂ. ವಾಗೀಶಸ್ವಾಮಿ, ಪುರಸಭೆ ಸದಸ್ಯ ಬಿ.ಎಂ. ಚನ್ನೇಶಸ್ವಾಮಿ, ಹಾಲಸ್ವಾಮಿ, ಪಿಎಸ್‌ಐ ವೀರಬಸಪ್ಪ ಕುಸಲಾಪುರ್ ಮತ್ತಿತರರು ಇದ್ದರು.