Advertisement

ಧೈರ್ಯ, ಆತ್ಮವಿಶ್ವಾಸವೇ ದೊಡ್ಡ ಮದ್ದು; ಕೋವಿಡ್ ಮಣಿಸಿದ ಮಂಗಳೂರಿನ ಕುಟುಂಬ

11:50 AM Aug 07, 2020 | mahesh |

ಮಂಗಳೂರು: “ಕೋವಿಡ್ ವೈರಲ್‌ ಕಾಯಿಲೆಗಳಂತೆ ಸಾಮಾನ್ಯ ಸೋಂಕು. ಇದಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ. ಧೈರ್ಯ, ಆತ್ಮವಿಶ್ವಾಸವೇ ಕೋವಿಡ್ ಹೊಡೆದೋಡಿಸಲು ಇರುವ ಬಹುದೊಡ್ಡ ಮದ್ದು’. ಮೂರು ತಿಂಗಳ ಹಿಂದೆ ಕೋವಿಡ್ ದೃಢಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಇದೀಗ ಸಾಮಾನ್ಯ ಜೀವನ ನಡೆಸುತ್ತಿರುವ ಮಂಗಳೂರಿನ ಮಹಿಳೆಯೋರ್ವರ ಆಂತರ್ಯವಿದು.

Advertisement

“ನಮ್ಮ ಮನೆಯಲ್ಲಿ ಐವರಿಗೆ ಕೋವಿಡ್ ಬಾಧಿಸಿತ್ತು. ಕೊರೊನಾದಿಂದಾಗಿ ನಾವು ನಮ್ಮ ತಾಯಿಯನ್ನು ಕಳೆದುಕೊಂಡೆವು. ಆ ನೋವು ಈಗಲೂ ಕಾಡುತ್ತಿದೆ. ಉಳಿದ ನಾಲ್ವರೂ ಕೆಲವು ದಿನಗಳಲ್ಲಿ ಕೋವಿಡ್ ಮುಕ್ತರಾಗಿ ಹೊರಬಂದಿದ್ದೇವೆ. ನಾವು ಬಹುಬೇಗ ಆಸ್ಪತ್ರೆಯಿಂದ ಹೊರ ಬರಲು ಕೊರೊನಾ ಮುಕ್ತರಾಗುವೆವು ಎಂಬ ಆತ್ಮವಿಶ್ವಾಸ ಮತ್ತು ಕೊರೊನಾ ವಿರುದ್ಧ ಗೆಲ್ಲುವ ಧೈರ್ಯವೇ ಕಾರಣವಾಯಿತು’ ಎನ್ನುತ್ತಾರೆ ಅವರು.

ಕಷಾಯ ಕುಡಿಯುತ್ತಿರಿ
ರೋಗನಿರೋಧಕ ಶಕ್ತಿಯ ಮುಂದೆ ಕೋವಿಡ್ ಉಳಿಯುವುದಿಲ್ಲ. ಹಾಗಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ಕುಡಿಯುವುದನ್ನು ಜನ ರೂಢಿಸಿಕೊಳ್ಳಬೇಕು ಎನ್ನುತ್ತಾರೆ ಗುಣಮುಖರಾದ ಈ ಮಹಿಳೆ.

ಮನುಷ್ಯರಂತೆ ಕಾಣಿ
ಮಲೇರಿಯಾ, ಡೆಂಗ್ಯೂ ಮುಂತಾದ ಸಾಂಕ್ರಾಮಿಕ ಕಾಯಿಲೆಗಳಂತೆ ಕೊರೊನಾವೊಂದು ಕಾಯಿಲೆಯಷ್ಟೇ. ಯಾರೂ ಕೂಡ ಬಯಸಿ ಈ ಕಾಯಿಲೆಯನ್ನು ತರಿಸಿಕೊಳ್ಳುವುದಿಲ್ಲ. ಎಲ್ಲ ಎಚ್ಚರಿಕೆ ಹೊರತಾಗಿಯೂ ಕೋವಿಡ್ ಬಂದರೆ ಸೋಂಕಿಗೊಳಗಾದವರು ಏನೂ ಮಾಡಲಾಗುವುದಿಲ್ಲ. ಆದರೆ ಸೋಂಕಿಗೊಳಗಾಗಿ ಗುಣಮುಖರಾಗಿ ಮನೆಗೆ ತೆರಳುವವರನ್ನು ಮನುಷ್ಯರಂತೆ ಕಾಣುವುದನ್ನು ಅಕ್ಕಪಕ್ಕದವರು, ಊರಿನವರು ರೂಢಿಸಿಕೊಳ್ಳಬೇಕು. ನನ್ನ ಅನುಭವದ ಮೇರೆಗೆ ಈ ಮಾತನ್ನು ಹೇಳುತ್ತಿದ್ದೇನೆ ಎನ್ನುವುದು ಅವರ ಅಂತರಾಳ.

ಈ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ 58 ವರ್ಷದ ಮಹಿಳೆ ಕೊರೊನಾ ದೃಢಪಟ್ಟು ಬಳಿಕ ಮೃತಪಟ್ಟಿದ್ದರು. ಬಳಿಕ ಸುಮಾರು 62 ವರ್ಷದ ಅವರ ಪತಿ, 35-45ರ ಆಸುಪಾಸಿನಲ್ಲಿರುವ ಮಗಳು, ಅಳಿಯ ಮತ್ತು 11 ವರ್ಷದ ಮೊಮ್ಮಗಳಿಗೂ ಕೋವಿಡ್ ದೃಢಪಟ್ಟು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ವಿಧಿಯು ಒಬ್ಬರ ಪ್ರಾಣಕ್ಕೆ ಕುತ್ತು ತಂದಿದ್ದರೆ, ಉಳಿದ ನಾಲ್ವರು ಸೋಂಕಿನಿಂದ ಗೆದ್ದುಬಂದು ಆತ್ಮವಿಶ್ವಾಸದ ಬದುಕು ನಡೆಸುತ್ತಿರುವುದು ಗಮನಾರ್ಹ.

Advertisement

ಕೋವಿಡ್ ಎಲ್ಲರಿಗೂ ಮಾರಣಾಂತಿಕವಲ್ಲ. ಈಗಾಗಲೇ ಕೋವಿಡ್ ಸೋಂಕಿಗೊಳಗಾದ ಶೇ. 98 ಮಂದಿ ಗುಣಮುಖರಾಗಿದ್ದಾರೆ. ಕೆಲವರು ಭಯದಿಂದ ಸಾವು ತಂದುಕೊಳ್ಳುವವರಿದ್ದಾರೆ. ಅಂತಹವರಿಗೆ ನಾನು ಹೇಳುವುದಿಷ್ಟೇ. ಭಯ ಪಡಬೇಡಿ, ಧೈರ್ಯ ತಂದುಕೊಳ್ಳಿ. ಆ ಮೂಲಕ ಕೋವಿಡ್ ನ್ನು ಗೆಲ್ಲಬಹುದು.
– ಮಹಿಳೆ, ಕೋವಿಡ್ ನಿಂದ ಗುಣಮುಖರಾದವರು

Advertisement

Udayavani is now on Telegram. Click here to join our channel and stay updated with the latest news.

Next