Advertisement

ಮೋಜಿನ ಜೀವನಕ್ಕಾಗಿ ಟ್ರಾಫಿಕ್‌ ಸಿಗ್ನಲ್‌ ನಲ್ಲಿ ಬ್ಯಾಟರಿ ಕದಿಯುತ್ತಿದ್ದ ದಂಪತಿ ಬಂಧನ

12:53 PM Feb 16, 2022 | Team Udayavani |

ಬೆಂಗಳೂರು: ಮೋಜಿನ ಜೀವನಕ್ಕಾಗಿ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಅಳವಡಿಸಿದ್ದ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ದಂಪತಿ ಅಶೋಕನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಚಿಕ್ಕಬಾಣವಾರ ನಿವಾಸಿ ಸಿಕಂದರ್‌(30) ಮತ್ತು ಆತನ ಪತ್ನಿ ನಜ್ಮಾ(29) ಬಂಧಿತರು. ಅವರಿಂದ 20 ಲಕ್ಷ ರೂ. ಮೌಲ್ಯದ 230 ಬ್ಯಾಟರಿಗಳನ್ನು ವಶಕ್ಕೆ ಪಡೆಯಲಾಗಿದೆ.ಅಲ್ಲದೆ, ಕಳೆದ ಆರೇಳು ತಿಂಗಳಿಂದ ನಗರದ 17 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ 68ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ಸಿಕಂದರ್‌ ಟೀ ಮಾರಾಟ ಮಾಡುತ್ತಿದ್ದು, ಜತೆಗೆ ಸಿಟಿ ಮಾರುಕಟ್ಟೆಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಆದರೆ, ಕುಟುಂಬ ನಿರ್ವಹಣೆ ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಆರೇಳು ತಿಂಗಳ ಹಿಂದೆ ನಾಯಂಡಹಳ್ಳಿ ಜಂಕ್ಷನ್‌ ಸಿಗ್ನಲ್‌ ಬಳಿ ಮೊದಲ ಬಾರಿಗೆ ಬ್ಯಾಟರಿ ಕದ್ದು ಸಮೀಪದ ಚಂದ್ರಶೇಖರ್‌ ಎಂಬವರ ಗುಜರಿಗೆ 600 ರೂ.ಗೆ ಮಾರಾಟ ಮಾಡಿದ್ದ. ಅದರಿಂದ ಲಾಭ ಬರುತ್ತದೆ ಎಂದು ತಿಳಿಯುತ್ತಿದ್ದಂತೆ, ಪತ್ನಿ ನಜ್ಮಾಗೆ ತಿಳಿಸಿ ಆಕೆಯನ್ನು ಜತೆಗೆ ಕರೆದೊಯ್ದು ಮುಂಜಾನೆ ಮೂರು ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನಗರದ ವಿವಿಧೆಡೆ ಸುತ್ತಾಡಿ ಕೃತ್ಯ ಎಸಗುತ್ತಿದ್ದರು. ಅದೇ ದಿನ ಅವುಗಳನ್ನು ವಿವಿಧ ಗುಜರಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಮಕ್ಕಳ ಜತೆ ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ಸಿಕ್ಕಿದ್ದು ಹೇಗೆ?: ಆರೋಪಿಗಳ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದರೂ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಒಂದೆರಡು ಬಾರಿ ಅನುಮಾನಗೊಂಡ ಪರಿಶೀಲಿಸಿದಾಗ ಪತ್ನಿ ಜತೆ ಸಂಬಂಧಿಕರ ಮನೆಗೆ ಹೋಗುತ್ತಿರುವುದಾಗಿ ಹೇಳಿ ತಪ್ಪಿಸಿಕೊಂಡಿದ್ದ. ಈ ಮಧ್ಯೆ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಬ್ಯಾಟರಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಬ್ಯಾಟರಿ ಕಳ್ಳತನದಿಂದ ಸಿಗ್ನಲ್‌ ದೀಪಗಳು ಸ್ಥಗಿತಗೊಳ್ಳುತ್ತಿದ್ದವು. ಅದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗ ಡಿಸಿಪಿ ಎಂ.ಎನ್‌ ಅನುಚೇತ್‌, ಇನ್‌ಸ್ಪೆಕ್ಟರ್‌ ಎಂ.ಎಸ್‌.ಬೋಳೆತ್ತಿನ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಮಾಹಿತಿ ಸಂಗ್ರಹಿಸಿದ್ದರು.

ನಗರದ ಯಾವೆಲ್ಲ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದನ್ನು ಪರಿಶೀಲಿಸಿ ಎಲ್ಲೆಡೆ ಸಿಸಿ ಕ್ಯಾಮೆರಾ ಶೋಧಿಸಲಾಗಿತ್ತು. ನಂತರ ಟ್ರಿನಿಟಿ ವೃತ್ತದ ಬಳಿ ದ್ವಿಚಕ್ರ ವಾಹನದಲ್ಲಿ ದಂಪತಿ ಹೋಗುತ್ತಿರುವ ದೃಶ್ಯ ಪರಿಶೀಲಿಸಿದಾಗ ನಂಬರ್‌ ಪ್ಲೇಟ್‌ ಕಾಣಬಾರದು ಎಂದು ಹಿಂಭಾಗದ ಬ್ರೇಕ್‌ಲೈಟ್‌ ಅನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಆದರೆ, ಬೈಕ್‌ ಮಾದರಿಯನ್ನು ಪತ್ತೆ ಹಚ್ಚಿ ವಿವಿಧ ಆಯಾಮಗಳಲ್ಲಿ ಸುಮಾರು 15 ದಿನಗಳ ಕಾಲ ವಿಚಾರಣೆ ನಡೆಸಿದಾಗ ಮಾಹಿತಿ ಲಭ್ಯವಾಗಿತ್ತು. ಬಳಿಕ ಗೋರಗುಂಟೆಪಾಳ್ಯ ಕಡೆ ಹೋಗುತ್ತಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ದಂಪತಿಯನ್ನು ಬಂಧಿಸಲಾಗಿದೆ.

Advertisement

ಪ್ರತಿ ಬ್ಯಾಟರಿಗೆ 1000 ರೂ.: ಒಂದೇ ಗುಜರಿಗೆ ಮಾರಾಟ ಮಾಡಿದರೆ ಅನುಮಾನ ಬರಬಹುದು ಎಂದು ಭಾವಿಸಿ ನಗರದ ವಿವಿಧೆಡೆ ಇರುವ ಗುಜರಿಗೆ ಹೋಗಿ ದಂಪತಿ ಮಾರಾಟ ಮಾಡುತ್ತಿದ್ದರು. ಪ್ರತಿ ಬ್ಯಾಟರಿಗೆ 1 ಸಾವಿರ ರೂ. ಬೇಡಿಕೆ ಇಟ್ಟು ಮಾರಾಟ ಮಾಡುತ್ತಿದ್ದರು. ಇದೀಗ ಆರೋಪಿಗಳಿಂದ ಖರೀದಿಸಿ ಗುಜರಿ ಮಾಲೀಕರಿಂದ ಎಲ್ಲ ಬ್ಯಾಟರಿಗಳನ್ನು ವಶಕ್ಕೆ ಪಡೆದುಕೊಂಡು ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next