ಲಕ್ನೋ: ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಮೇ.24 ರಂದು) ಮಧ್ಯಾಹ್ನ ನಡೆದಿದೆ.
ಮೃತರನ್ನು ಲಕ್ನೋ ನಿವಾಸಿಗಳಾದ ಇಕ್ಬಾಲ್ (75) ಮತ್ತು ಅವರ ಪತ್ನಿ ರೆಹಾನಾ (70) ಎಂದು ಗುರುತಿಸಲಾಗಿದೆ. ಅವರ ಕುಟುಂಬಸ್ಥರಾಗಿರುವ ಅಮೇಥಿ ಜಿಲ್ಲೆಯ ಹಸೀನ್ ಅಹಮದ್ (45), ಅವರ ಪತ್ನಿ ನುಸ್ರತ್ ಜಹಾನ್ (35), ಅವರ ಮಕ್ಕಳಾದ ಲೈಬಾ (9) ಮತ್ತು ಸಹಬಾನ್ (6) ಅವರಿಗೆ ಗಾಯಗಳಾಗಿವೆ.
ಸುಲ್ತಾನ್‌ಪುರದಲ್ಲಿ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕುಟುಂಬ ಹಿಂತಿರುಗುತ್ತಿದ್ದಾಗ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ.
ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ.