ಲಕ್ನೋ: ಹೋಳಿಯ ಬಣ್ಣದಲ್ಲಿ ಆಡಿ ಬಂದ ದಂಪತಿಗಳು ಮನೆಯ ಬಾತ್ ರೂಮ್ ನಲ್ಲಿ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಬುಧವಾರ ( ಮಾ. 8 ರಂದು ) ನಡೆದಿದೆ.
ದೀಪಕ್ ಗೋಯಲ್ (40) ಮತ್ತು ಅವರ ಪತ್ನಿ ಶಿಲ್ಪಿ (36) ಮೃತ ದಂಪತಿ.
ದೀಪಕ್ ಹಾಗೂ ಪತ್ನಿ ಶಿಲ್ಫಿ ಬುಧವಾರ ಹೋಳಿ ಬಣ್ಣದಲ್ಲಿ ಕುಣಿದು, ಕುಪ್ಪಳಿಸಿ ಸಂಜೆ 3:30ರ ವೇಳೆ ಬಣ್ಣವನ್ನು ತೊಳೆಯಲು ಇಬ್ಬರು ಜೊತೆಯಾಗಿ ಬಾತ್ ರೂಮ್ ಗೆ ತೆರಳಿದ್ದಾರೆ. ಹೋಳಿ ಬಣ್ಣವನ್ನು ನೀರಿನಲ್ಲಿ ತೊಳೆಯುವಾಗ ಬಚ್ಚಲು ಮನೆಯಲ್ಲಿದ್ದ ಗೀಸರ್ ಗೆ ಆಳವಡಿಸಿದ್ದ ಅನಿಲ ಸೋರಿಕೆ ಆಗಿದೆ. ತುಂಬಾ ಸಮಯದಿಂದ ವಾಶ್ ರೂಮ್ ನಲ್ಲೇ ಇದ್ದ ದಂಪತಿಗಳನ್ನು ಮಕ್ಕಳು ಹೊರಗೆ ಕರೆದಿದ್ದಾರೆ. ಈ ವೇಳೆ ಮಕ್ಕಳ ಕರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಮನೆಯ ಇತರ ಸದಸ್ಯರುಗಳು ಬಂದು ಕರೆದು ಬಾಗಿಲು ಬಡಿದಿದ್ದಾರೆ. ಆದರೆ ಅದಕ್ಕೂ ಪ್ರತಿಕ್ರಿಯೆ ನೀಡದ ಕಾರಣ ಬಾಗಿಲು ಒಡೆದಿದ್ದಾರೆ. ನೋಡುವಾಗ ದಂಪತಿಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಆದರೆ ಉಸಿರುಗಟ್ಟಿ ಆದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅನಿಲ ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ದಂಪತಿಗಳು ಮೃತಪಟ್ಟಿದ್ದು, ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.