Advertisement

Fraud: ವಿಮೆ ಕಂಪನಿ ಹೆಸರಿನಲ್ಲಿ ನೂರಾರು ಜನರಿಗೆ ದಂಪತಿ ಟೋಪಿ

03:29 PM Dec 13, 2023 | Team Udayavani |

ಬೆಂಗಳೂರು: ಪ್ರತಿಷ್ಠಿತ ಇನ್ಶೂರೆನ್ಸ್‌ ಕಂಪನಿಗಳ ಹೆಸರಿನಲ್ಲಿ ಅವಧಿ ಪೂರ್ವ ಪಾಲಿಸಿಗಳನ್ನು ಹಿರಿಯ ನಾಗರಿಕರಿಗೆ ನೀಡುವುದಾಗಿ ನಂಬಿಸಿ ವಂಚಿಸುತ್ತಿದ್ದ ದಂಪತಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಥಣಿಸಂದ್ರ ನಿವಾಸಿಗಳಾದ ಉದಯ್‌ (36) ಹಾಗೂ ಆತನ ಪತ್ನಿ ತೀರ್ಥಗೌಡ(34) ಬಂಧಿತರು. ಬಂಧಿತರ ಎಂಟು ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ವಿಜಯನಗರ ನಿವಾಸಿ, ನಿವೃತ್ತ ಸರ್ಕಾರಿ ನೌಕರ ವಿ.ಗೋವಿಂದ ರಾಜು ಅವರಿಗೆ 27 ಲಕ್ಷ ರೂ. ವಂಚಿಸಿದ್ದರು ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆರೋಪಿತ ದಂಪತಿ ಈ ಹಿಂದೆ ಖಾಸಗಿ ಇನ್ಶೂರೆನ್ಸ್‌ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಪ್ರೀತಿಸಿ ನಾಲ್ಕೈದು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ದಂಪತಿಗೆ ಒಬ್ಬ ಮಗಳು ಇದ್ದಾಳೆ. ಕೊರೊನಾ ಬಳಿಕ ಆರೋಪಿಗಳು ಇಂದಿರಾನಗರದಲ್ಲಿ ಕಾಲ್‌ ಸೆಂಟರ್‌ ಮಾದರಿಯಲ್ಲಿ ಸ್ವಂತ ಕಚೇರಿ ತೆರೆದಿದ್ದು, ಅದರಲ್ಲಿ ನಾಲ್ಕೈದು ಯುವತಿಯರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರು.

ಈ ಕಚೇರಿಗೆ ತೀರ್ಥಗೌಡಳನ್ನು ಮುಖ್ಯಸ್ಥಳನ್ನಾಗಿ ಮಾಡಿದ್ದ ಉದಯ್‌, ಈ ಹಿಂದೆ ವಿಮೆ ಮಾಡಿಸಿದ್ದ ಹಿರಿಯ ನಾಗರಿಕರು ಹಾಗೂ ವಿಮೆ ಲ್ಯಾಪ್ಸ್‌ ಆಗಿರುವ ಪಾಲಿಸಿದಾರರ ಮೊಬೈಲ್‌ ನಂಬರ್‌ಗಳ ಪಟ್ಟಿ ಕೊಟ್ಟಿದ್ದ. ತೀರ್ಥಗೌಡ, ಅವುಗಳನ್ನು ತನ್ನ ಕಚೇರಿಯ ಸಿಬ್ಬಂದಿಗೆ ಕೊಟ್ಟು, ಭಾರತೀಯ ಆಕ್ಸಾ, ಕೋಟೆಕ್‌ ಮಹೇಂದ್ರ, ಇಂಡಿಯಾ ಫ‌ಸ್ಟ್‌ ಮತ್ತು ರಿಲೆಯನ್ಸ್‌ ನಿಪ್ಪೋನ್‌, ಬಜಾಜ್‌ ಅಲೆಯನ್ಸ್‌ ಇನ್ಶೂರೆನ್ಸ್‌, ಎಚ್‌ಡಿಎಫ್ಸಿ, ರಿಲೆಯನ್ಸ್‌ ಕಂಪನಿಗಳ ಹೆಸರನ್ನು ಉಲ್ಲೇಖೀಸಿ ಗ್ರಾಹಕರಿಗೆ ಕರೆ ಮಾಡಿ ವಿಮೆ ಮಾಡಿಸುವಂತೆ ಕೋರುತ್ತಿದ್ದರು.

Advertisement

ಲ್ಯಾಪ್ಸ್‌ ಆಗಿರುವ ಪಾಲಿಸಿದಾರರಿಗೆ ಕರೆ ಮಾಡಿ, ಪಾಲಿಸಿ ಹಣ ಕಟ್ಟಿದಲ್ಲಿ ಬಡ್ಡಿ ಸಮೇತ ವಿಮಾ ಹಣ ದೊರೆಯುತ್ತದೆ. ಹಾಗೆಯೇ ಐದು ಅಥವಾ ಹತ್ತು ವರ್ಷಗಳ ಪಾಲಿಸಿಗಳನ್ನು ಕೇವಲ ಒಂದು ವರ್ಷದಲ್ಲಿ ಮುಕ್ತಾಯಗೊಂಡು ಹಣ ಬರುತ್ತದೆ ಎಂದು ನಂಬಿಸುತ್ತಿದ್ದರು. ಅದನ್ನು ನಂಬಿದ ಗ್ರಾಹಕರು, ಲಕ್ಷಾಂತರ ರೂ.ಹೂಡಿದ್ದಾರೆ. ಒಂದು ವರ್ಷದ ಬಳಿಕ ಪಾಲಿಸಿದಾರ, ವಿಮಾ ಕಂಪನಿಗೆ ಕರೆ ಮಾಡಿ, ವಿಮೆ ಮುಕ್ತಾಯಗೊಂಡಿದ್ದು, ಹಣ ವಾಪಸ್‌ ಕೊಡುವಂತೆ ಕೇಳಿದಾಗ, ಕಂಪನಿ ಸಿಬ್ಬಂದಿ, 10 ವರ್ಷದ ಪಾಲಿಸಿ ಇದಾಗಿದ್ದು, 1 ವರ್ಷಕ್ಕೆ ಹಣ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಬಳಿಕ ಪಾಲಿಸಿದಾರರು, ಆರೋಪಿಗಳ ಕಾಲ್‌ ಸೆಂಟರ್‌ಗೆ ಕರೆ ಮಾಡಿದಾಗ, ಇಲ್ಲದ ಸಬೂಬು ಹೇಳಿ ಕರೆ ಸ್ಥಗಿತಗೊಳಿಸುತ್ತಿದ್ದರು ಎಂದು ಪೊಲೀಸ್‌ ಆಯುಕ್ತರು ಹೇಳಿದರು.

100 ವಿಮೆ ಮಾಡಿಸಿದ್ದ ದೂರುದಾರ!: ಹಿರಿಯ ನಾಗರಿಕರ ಅಥವಾ ನಿವೃತ್ತ ನೌಕರರನ್ನು ಗುರಿಯಾಗಿ ಸಿಕೊಂಡಿದ್ದ ಆರೋಪಿಗಳು ಒಂದು ವರ್ಷಕ್ಕೆ ಒಂದು ಕೋಟಿ ರೂ. ಹೂಡಿದರೆ, 5 ಕೋಟಿ ರೂ. ಬರುತ್ತದೆ ಎಂದು ನಂಬಿಸಿದ್ದರು. ಅದನ್ನು ನಂಬಿದ ಹತ್ತಾರು ಮಂದಿ ತಮ್ಮ ಸಂಬಂಧಿಕರು, ಸ್ನೇಹಿತರ ಹೆಸರಿನಲ್ಲಿ ಹೆಚ್ಚಿನ ಪಾಲಿಸಿಗಳನ್ನು ಮಾಡಿಸುವಂತೆ ಆಮಿಷವೊಡುತ್ತಿದ್ದರು. ಇದೇ ರೀತಿ ಅಂದಾಜು 200 ರಿಂದ 300 ಮಂದಿಗೆ ಪಾಲಿಸಿ ಮಾಡಿಸಿ ವಂಚಿಸಿದ್ದಾರೆ. ಪಾಲಿಸಿ ಹೆಸರಿನಲ್ಲಿ ವಂಚಿಸಿದ ಹಣವನ್ನು ಬಂಧಿತರು ತಮ್ಮ ಸ್ವಂತ ಖಾತೆ ಹಾಗೂ ತಮ್ಮ ಹೆಸರಿನಲ್ಲಿ ಪಾಲಿಸಿಗಳನ್ನು ಮಾಡಿಸಿಕೊಂಡಿರುವುದು ಗೊತ್ತಾಗಿದೆ.

ಮತ್ತೂಂದೆಡೆ ಪ್ರತಿ ಪಾಲಿಸಿಗೆ ಆರೋಪಿಗಳ ಖಾತೆಗೆ ಇನ್ಶೂರೆನ್ಸ್‌ ಕಂಪನಿಗಳು ಶೇ.20-25ರಷ್ಟು ಕಮಿಷನ್‌ ನೀಡುತ್ತಿದ್ದವು ಎಂಬುದು ಪತ್ತೆಯಾಗಿದೆ.

ದೂರುದಾರ ಗೋವಿಂದರಾಜು ಅವರು ತಮ್ಮ ನಿವೃತ್ತಿ ಹಣ, ಮನೆ ಮಾರಾಟದ ಹಣ ಸೇರಿ ವಿವಿಧ ರೀತಿಯಲ್ಲಿ ಕೂಡಿ ಇಟ್ಟಿದ್ದ ಹಣವನ್ನು ಆರೋಪಿಗಳು ಹೇಳಿದಂತೆ 100ಕ್ಕೂ ಹೆಚ್ಚು ಪಾಲಿಸಿ ಮಾಡಿಸಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ: ನೂರಾರು ಮಂದಿಗೆ ವಂಚಿಸಿದ ಹಣವನ್ನು ಉದಯ್‌ ದಂಪತಿ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಹೂಡಿಸಿದ್ದಾರೆ ಎಂಬ ಮಾಹಿತಿಯಿದೆ. ಸದ್ಯ ಆರೋಪಿಗಳ ಎಂಟು ಬ್ಯಾಂಕ್‌ಗಳ ಖಾತೆಯನ್ನು ಜಪ್ತಿ ಮಾಡಲಾಗಿದೆ. ಹಾಗೆಯೇ ಪಾಲಿಸಿ ಹಣ ಕೊಡಿಸಲು ಮುಂಗಡವಾಗಿ ಅಮಾಯಕರಿಂದ ಬರೋಬ್ಬರಿ 1.80 ಕೋಟಿ ರೂ. ಸಂಗ್ರಹಿಸಿದ್ದರು. ಈ ಪೈಕಿ 40 ಲಕ್ಷ ರೂ. ಅನ್ನು ತಮ್ಮ ಸ್ವಂತ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next