ಹುಬ್ಬಳ್ಳಿ: ದೇಶ ಸುರಕ್ಷಿತವಾಗಿರಬೇಕಾದರೆ ಆ ದೇಶದಲ್ಲಿನ ಜನರ ಆರೋಗ್ಯ, ಮನಸ್ಥಿತಿ ಚೆನ್ನಾಗಿರಬೇಕು. ದೇಶ ಸಂಪತ್ಬರಿತವಾಗಿದ್ದು ನಾಗರಿಕರ ಆರೋಗ್ಯವೇ ಸರಿಯಿಲ್ಲವೆಂದರೆ ಅದು ದೇಶದ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಪತಂಜಲಿ ಯೋಗ ಪೀಠ ಕರ್ನಾಟಕದ ರಾಜ್ಯ ಪ್ರಭಾರಿ ಯೋಗಾಚಾರ್ಯ ಭವರಲಾಲ ಆರ್ಯ ಅಭಿಪ್ರಾಯಪಟ್ಟರು.
ಇಲ್ಲಿನ ಕೇಶ್ವಾಪುರದ ಪತಂಜಲಿ ರಾಜ್ಯ ಕಾರ್ಯಾಲಯದಲ್ಲಿ ಪತಂಜಲಿ ಯೋಗ ಸಮಿತಿ ಕರ್ನಾಟಕದ ವತಿಯಿಂದ ಸೋಮವಾರ ಆಯೋಜಿಸಿದ್ದ ಪೂರ್ಣಕಾಲಿಕ ಯೋಗ ಪ್ರಚಾರಕರ ಆವಾಸೀಯ ತರಬೇತಿ ಕಾರ್ಯಾಗಾರದ ಸಮಾರೋಪ ಮತ್ತು ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವದೇಶ ರಕ್ಷಣೆ ನಮ್ಮೆಲ್ಲರ ಮೊದಲ ಆದ್ಯತೆ ಆಗಬೇಕು. ದೇಶದ ಅಭಿವೃದ್ಧಿಯಲ್ಲಿ ಸದೃಢ ನಾಗರಿಕರ ಪಾತ್ರ ಬಹಳ ದೊಡ್ಡದು. ಪತಂಜಲಿ ಯೋಗ ಪೀಠದ ವತಿಯಿಂದ ದೇಶದ ನಾಗರಿಕರ ಆರೋಗ್ಯ ರಕ್ಷಣೆಗಾಗಿ ದೇಶಾದ್ಯಂತ ಲಕ್ಷಾಂತರ ಉಚಿತ ಯೋಗ ತರಬೇತಿ ಕೇಂದ್ರಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ.
ಪ್ರತಿ ತಾಲೂಕಿಗೂ ಒಬ್ಬರಂತೆ ಪೂರ್ಣಕಾಲಿಕ ಯೋಗ ಪ್ರಚಾರಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಕರ್ನಾಟಕದ ಯೋಗಪ್ರಚಾರಕರ ನೇಮಕಾತಿಗಾಗಿ ಮೊದಲ ಕಾರ್ಯಾಗಾರ ಆಯೋಜಿಸಿದ್ದು, ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ತರಬೇತಿ ಪಡೆದವರು ಯೋಗ ಪ್ರಚಾರಕರಾಗಿ ಸೇವೆ ಸಲ್ಲಿಸುವರು. ಇವರಿಗೆ ತಿಂಗಳಿಗೆ 15ರಿಂದ 25 ಸಾವಿರ ರೂ.ಗಳ ಗೌರವಧನವಿರುತ್ತದೆ.
ಯೋಗದ ಜ್ಞಾನವಿರುವವರು, ಅನುಭವವಿರುವವರೂ ಕೂಡ ಪತಂಜಲಿ ಯೋಗ ಪ್ರಚಾರಕರಾಗಲು ಅರ್ಜಿ ಸಲ್ಲಿಸಬಹುದು ಎಂದರು. ಪತಂಜಲಿ ರಾಜ್ಯ ಮಹಿಳಾ ಪ್ರಭಾರಿ ಸುಜಾತಾ, ಜಿಲ್ಲಾ ಪ್ರಭಾರಿ ಸಂಗಮೇಶ ನಿಂಬರಗಿ, ಬೀದರ ಜಿಲ್ಲಾ ಯೋಗ ಪ್ರಚಾರಕ ರಾಜಕುಮಾರ, ಯೋಗ ಪ್ರಚಾರಕ ನಿರೀಕ್ಷ ಅಶೋಕ ಆರ್ಯ, ಯೋಗ ಪ್ರಚಾರಕ ಶಿಬಿರಾರ್ಥಿ ಪುಟ್ಟಪ್ಪ, ಪ್ರದೀಪ ಮುಲ್ಗೆ, ಅಂಬರಾಯ, ಹೇಮಾ, ಲಲಿತ ಮುಂತಾದವರು ಈ ಸಂದರ್ಭದಲ್ಲಿದ್ದರು.