Advertisement
ಸಾಮರ್ಥ್ಯ ವಿಸ್ತರಣೆ :
Related Articles
Advertisement
ಪ್ರಾಥಮಿಕ ಆರೋಗ್ಯ ಕೇಂದ್ರ :
ಆಸ್ಪತ್ರೆಗಳು ಸುಧಾರಿತ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳನ್ನು ನೀಡಿದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೂಲಭೂತ ಆರೋಗ್ಯ ಸೇವೆಗಳನ್ನು ನೀಡುತ್ತವೆ. ದೇಶದಲ್ಲಿ 2.5 ಲಕ್ಷ ಮಂದಿ ಜನಸಂಖ್ಯೆ ಇರುವ ಸರಿ ಸಮಾರು 5,600 ತಾಲೂಕುಗಳಿವೆ. ಪೂರ್ಣ ಪ್ರಮಾಣದಲ್ಲಿ ಜನರಿಗೆ ಆರೋಗ್ಯ ಸೇವೆ ನೀಡುವಂತಾಗಲು ಪ್ರತಿ ತಾಲೂಕಿಗೆ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಗತ್ಯವಿದೆ. ತಾಲೂಕುಗಳಲ್ಲಿರುವ ಜನರ ಪ್ರಮಾಣ ತೆಗೆದುಕೊಂಡರೆ, ಶೇ.60 ಮಂದಿ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಅವರಿಗೆ ಅನುಕೂಲವಾಗುವಂತೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು 1 ಕೋಟಿ ರೂಪಾಯಿ ಎಂದು ಲೆಕ್ಕ ತೆಗೆದುಕೊಂಡರೂ 16,800 ಕೋಟಿ ರೂ. ಬೇಕಾಗುತ್ತದೆ. ಅವುಗಳನ್ನು ಬೇಕಿದ್ದರೆ ವೈದ್ಯಕೀಯ ಕಾಲೇಜುಗಳಿಗೆ ಕೂಡ ಸೇರ್ಪಡೆಗೊಳಿಸಬೇಕು. ಇದರಿಂದಾಗಿ ಅವುಗಳಿಗೆ ಸಿಬಂದಿಯ ಕೊರತೆಯೂ ತಪ್ಪುತ್ತದೆ. ಉದಾಹರಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಐವತ್ತು ವರ್ಷಗಳ ಅವಧಿಯಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ. ಇದರಿಂದಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಹೆಚ್ಚು ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್‌ಡಿಐ) ಈ 2 ಜಿಲ್ಲೆಗಳಲ್ಲಿವೆ.
ವೈದ್ಯ ಸ್ನಾತಕೋತ್ತರ ಪದವಿ :
ದೇಶದಲ್ಲಿ ಸದ್ಯ 54 ಸಾವಿರ ಸ್ನಾತಕೋತ್ತರ ಪದವಿ ಸೀಟುಗಳಿಗೆ. ಐದು ವರ್ಷಗಳಿಂದೀಚೆಗೆ ಅವುಗಳ ಸಂಖ್ಯೆ 24 ಸಾವಿರದಷ್ಟು ಹೆಚ್ಚಾಗಿದೆ. ಆ ಸೀಟುಗಳನ್ನು ಪ್ರತಿ ವರ್ಷಕ್ಕೆ 1 ಲಕ್ಷದ ವರೆಗೆ ಹೆಚ್ಚಿಸಬೇಕೆಂಬ ಸಲಹೆ ಮಾಡಲಾಗಿದೆ. ಅವರಿಗೆ ಬೋಧನಾ ವ್ಯವಸ್ಥೆ ಮತ್ತು ಪ್ರಾಯೋಗಿಕ ಅನುಭವ ಪಡೆದುಕೊಳ್ಳಲು ಕಾರ್ಪೊರೇಟ್ ಆಸ್ಪತ್ರೆಗಳನ್ನು ಬಳಕೆ ಮಾಡಿಕೊಳ್ಳಬಹುದು. ಇದರ ಜತೆಗೆ ವೈದ್ಯ ವಿಜ್ಞಾನ, ತುರ್ತು ವೈದ್ಯಕೀಯ, ಅರವಳಿಕೆ, ವಿಕಿರಣ ವಿಜ್ಞಾನಕ್ಕಾಗಿ ಇರುವ ಎಂ.ಡಿ ಮತ್ತು ಡಿ.ಎನ್.ಬಿ. ಪದವಿ ಸೀಟುಗಳನ್ನೂ ಹೆಚ್ಚಿಸಬಹುದು. ವ್ಯವಸ್ಥೆಯಲ್ಲಿ ಸುಧಾರಣೆ ತರುವುದರಿಂದ ದೇಶದ ವೈದ್ಯಕೀಯ ಕ್ಷೇತ್ರದ ಪ್ರತಿಭೆಗಳು ಇತರ ದೇಶಕ್ಕೆ ತೆರಳುವುದನ್ನು ತಡೆಯಬಹುದು.
ನರ್ಸಿಂಗ್ ಕಾಲೇಜುಗಳು :
ದೇಶದಲ್ಲಿ ಸದ್ಯ ಇರುವ ನರ್ಸಿಂಗ್ ಕಾಲೇಜುಗಳಲ್ಲಿ ದಾದಿಯರಿಗೆ ನೀಡಲಾಗುತ್ತಿರುವ ತರಬೇತಿಯಿಂದಾಗಿ ವೃತ್ತಿಪರರ ಸೃಷ್ಟಿಯಾಗು ತ್ತಿಲ್ಲ. ಪ್ರತಿ ವೈದ್ಯಕೀಯ ಕಾಲೇಜು ಕೂಡ ಅದರ ಜತೆಗೇ ನರ್ಸಿಂಗ್ ಕಾಲೇಜು ಶುರು ಮಾಡುವಂತೆ ಪ್ರೋತ್ಸಾಹ ನೀಡಬೇಕು. ಈ ಮೂಲಕ ಪ್ರತಿ ವರ್ಷ 500 ಮಂದಿ ದಾದಿಯರಿಗೆ ತರಬೇತಿ ನೀಡುವಂತೆ ಇರಬೇಕು. ಇಂಥ ವ್ಯವಸ್ಥೆಯಿಂದ ಅತ್ಯುತ್ತಮ ವೃತ್ತಿಪರ ದಾದಿಯರು ಆರೋಗ್ಯ ಕ್ಷೇತ್ರದ ಸೇವೆಗೆ ಲಭ್ಯವಾಗಲಿದ್ದಾರೆ.
ನಮ್ಮಲ್ಲಿ ಪ್ರತಿ ವರ್ಷ 1.2 ಲಕ್ಷ ನರ್ಸ್‌ಗಳು ವೃತ್ತಿಪರ ರೀತಿಯಲ್ಲಿ ತರಬೇತಿ ಪಡೆಯುವಂಥ ವ್ಯವಸ್ಥೆ ನಿರ್ಮಾಣವಾಗಬೇಕು. 600 ವೈದ್ಯಕೀಯ ಕಾಲೇಜುಗಳು ಶೇ.50ರಷ್ಟು ನರ್ಸಿಂಗ್ ಕಾಲೇಜುಗಳನ್ನು ಆರಂಭಿಸಿದರೆ ದೇಶದಲ್ಲಿ ಪ್ರತಿ ವರ್ಷ 1.5 ಲಕ್ಷ ನರ್ಸ್‌ಗಳಿಗೆ ತರಬೇತಿ ನೀಡಿದಂತಾಗುತ್ತದೆ. ಸದ್ಯ ಪ್ರತಿ ವರ್ಷ 88 ಸಾವಿರ ನರ್ಸ್‌ಗಳು ಪದವಿ ಪೂರೈಸುತ್ತಿದ್ದಾರೆ. ವೈದ್ಯಕೀಯ ಕಾಲೇಜುಗಳು ನರ್ಸಿಂಗ್ ಕಾಲೇಜು ಆರಂಭಿಸಿದರೆ ವರ್ಷಕ್ಕೆ 2.3 ಲಕ್ಷ ಮಂದಿ ದಾದಿಯರು ವೃತ್ತಿಪರವಾಗಿ ತರಬೇತಿಗೊಳ್ಳಲಿದ್ದಾರೆ.
ತುರ್ತು ಔಷಧಗಳ ಪೂರೈಕೆ :
ವಿಶ್ವ ಶ್ರೇಷ್ಠ ಔಷಧ ಮತ್ತು ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದರೂ, ಸೋಂಕಿನ ಪರಿಸ್ಥಿತಿಯಲ್ಲಿ ದೇಶದಲ್ಲಿ ಶೇ.70ರಷ್ಟು ಔಷಧಗಳನ್ನು ಉತ್ಪಾದಿಸಲು ಬೇಕಾಗಿರುವ ಕಚ್ಚಾ ವಸ್ತುಗಳ (ಆ್ಯಕ್ಟಿವ್ ಫಾರ್ಮಾಸುÂಟಿಕಲ್ ಇಂಗ್ರೆಡಿಯೆಂಟ್ಸ್- ಎಪಿಐ)ಕೊರತೆಯ ಅನುಭವ ಉಂಟಾಗಿದೆ. ಏಕೆಂದರೆ ಅವೆಲ್ಲವೂ ಚೀನದಿಂದ ಬರ ಬೇಕಾಗಿದೆ. ಔಷಧ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳು ಚೀನ ಮತ್ತು ಇತರ ದೇಶಗಳಿಂದ ಆಮದು ಮಾಡಿಕೊಳ್ಳಬೇಕು ಎಂಬ ಪರಿಸ್ಥಿತಿ ಉಂಟಾದರೆ ಕಷ್ಟವಾದೀತು. ಹೀಗಾಗಿ, ಬೇಕಾಗುವ ಕಚ್ಚಾ ವಸ್ತುಗಳನ್ನು ದೇಶದಲ್ಲಿ ಉತ್ಪಾದಿಸುವ ಬಗ್ಗೆ ವ್ಯೂಹಾತ್ಮಕವಾಗಿ ಯೋಚನೆ ಮಾಡಲೇಬೇಕು. ಕೇಂದ್ರ ಸರಕಾರ ಈಗಾಗಲೇ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ ಯೋಜನೆ ನೀಡುವ ಕ್ರಮ ಜಾರಿ ಮಾಡಿರುವುದರಿಂದ ಔಷಧೋದ್ಯಮ ಕ್ಷೇತ್ರಕ್ಕೆ ಇದು ನೆರವು ನೀಡುವ ಸಾಧ್ಯತೆಗಳಿವೆ ಮತ್ತು ಸ್ವಾವಲಂಬನೆ ಸಾಧಿಸಲು ಅನುಕೂಲವಾಗಲಿದೆ.
ಸಂಶೋಧನೆ ಮತ್ತು ಆಡಳಿತಾತ್ಮಕ ದೃಢತೆ :
ಅಮೆರಿಕದಲ್ಲಿ ಇರುವಂತೆ ರೋಗಗಳ ನಿಯಂತ್ರಣ ಮತ್ತು ತಡೆ (ಸಿಡಿಸಿ) ಕೇಂದ್ರವನ್ನು ದೇಶದಲ್ಲಿ ಸ್ಥಾಪಿಸುವ ಅಗತ್ಯವಿದೆ. ಹೊಸದಿಲ್ಲಿಯಲ್ಲಿ ಅದರ ಕೇಂದ್ರ ಕಚೇರಿ ಇದ್ದು, ಪ್ರತಿಯೊಂದು ರಾಜ್ಯದ ರಾಜಧಾನಿಯಲ್ಲಿ ಆಯಾ ರಾಜ್ಯಗಳ ಪ್ರಧಾನ ಕೇಂದ್ರ ಇರುವಂತೆ ಮಾಡಬೇಕು. ಪ್ರತಿ ಜಿಲ್ಲೆಯಲ್ಲಿ ಕೂಡ ಅದರ ಉಪ ಕೇಂದ್ರಗಳು ಇರಬೇಕು. ಇಂಥ ವ್ಯವಸ್ಥೆ ಮೂಲಕ ದೇಶಕ್ಕೆ ಒದಗಬಹುದಾದ ಆರೋಗ್ಯ ತುರ್ತಿನ ಮೇಲೆ ನಿಗಾ ಇರಿಸಲು ಸಾಧ್ಯವಾಗಲಿದೆ. ಜತೆಗೆ ಸದ್ಯ ಉಂಟಾಗಿರುವ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸೂಕ್ತ ಕಾರ್ಯತಂತ್ರವನ್ನೂ ಹೊಂದಬಹುದಾಗಿದೆ. ಸದೃಢವಾಗಿರುವ ಇಂಥ ಒಂದು ವ್ಯವಸ್ಥೆಯನ್ನು ಹೊಂದಬೇಕಾದರೆ ಮಾನವ ಸಂಪನ್ಮೂಲ, ಮೂಲಸೌಕರ್ಯ ಮತ್ತು ಆಡಳಿತಾತ್ಮಕ ದೃಢತೆ ಬೇಕಾಗುತ್ತದೆ. ಅದು ವಿವಿಧ ಮಾರಕ ರೋಗ, ಆರೋಗ್ಯ ಕ್ಷೇತ್ರಗಳಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳನ್ನು ಅಧ್ಯಯನ ನಡೆಸಬೇಕಾಗುತ್ತದೆ. ಹೊಸ ಸೋಂಕು ಸಮಸ್ಯೆ ಉಂಟಾದಲ್ಲಿ ಅದನ್ನು ಪತ್ತೆ ಹಚ್ಚುವ ಪರೀಕ್ಷಾ ವಿಧಾನ, ಚಿಕಿತ್ಸೆ ಮತ್ತು ಔಷಧ, ಲಸಿಕೆಗಳ ಬಗ್ಗೆ ಸಂಶೋಧನೆಯನ್ನೂ ಅದು ಕೈಗೊಳ್ಳಬೇಕು. ಇದರ ಜತೆಗೆ ವೈರಾಣು ವಿಜ್ಞಾನ ಕ್ಷೇತ್ರದಲ್ಲಿ ಭಾರತ ಜಗತ್ತಿನ ಅತ್ಯಂತ ಶ್ರೇಷ್ಠ ಸಂಶೋಧನಾ ವ್ಯವಸ್ಥೆಗಳನ್ನು ಹೊಂದುವ ಅಗತ್ಯ ಈಗ ಬಂದಿದೆ. ಸರಕಾರ ಈ ಕ್ಷೇತ್ರದ ಮೇಲೆ ಆದ್ಯತೆಯಲ್ಲಿ ಬಂಡವಾಳ ಹೂಡಿ, ಅದಕ್ಕೆ ಸಂಬಂಧಿಸಿದ ಸೌಕರ್ಯ ನೀಡುವ ಬಗ್ಗೆ ಯೋಚಿಸಬೇಕು.
ಸಾಂಕ್ರಾಮಿಕ ರೋಗ ನಿಯಂತ್ರಣ ಯೋಜನೆ :
ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ)ವನ್ನೂ ಸೇರಿಸಿಕೊಳ್ಳಬೇಕು. ಅಗತ್ಯ ಇರುವ ಸ್ಥಳಗಳಿಗೆ ವೈದ್ಯಕೀಯ ಸಲಕರಣೆ, ಔಷಧ ಪೂರೈಕೆ ಮಾಡುವ ಹೊಣೆಯನ್ನು ಪ್ರಾಧಿಕಾರಕ್ಕೆ ವಹಿಸಬಹುದು. ಇದರ ಜತೆಗೆ ವಿವಿಧ ರಾಜ್ಯಗಳಲ್ಲಿ ಮತ್ತು ದೇಶ ವ್ಯಾಪಿ ಲಭ್ಯ ಇರುವ ಔಷಧ, ವೈದ್ಯಕೀಯ ಪರಿಕರಗಳು ಮತ್ತು ಇತರ ವ್ಯವಸ್ಥೆಯ ಬಗ್ಗೆ ಮಾಹಿತಿ ಕೋಶ ಹೊಂದುವುದು ಉತ್ತಮ. ಸಶಸ್ತ್ರ ಸೇನಾಪಡೆಗಳ ವ್ಯಾಪ್ತಿಯಲ್ಲಿಯೂ ತುರ್ತು ಅಗತ್ಯದ ಬಳಕೆಗೆ ಎಂದು ಮೀಸಲಾಗಿ ಇರಿಸಿದ ಔಷಧ ಮತ್ತು ಇತರ ವೈದ್ಯಕೀಯ ವ್ಯವಸ್ಥೆಗಳು ಇರಬೇಕು. ಸರಕಾರಿ ಹಸ್ತಕ್ಷೇಪವಿಲ್ಲದೆ ಅಗತ್ಯವಾಗಿರುವ ವೈದ್ಯಕೀಯ ವ್ಯವಸ್ಥೆ, ಸಲಕರಣೆ, ಔಷಧಗಳನ್ನು ಖರೀದಿ ಮಾಡಿ ಇರಿಸುವ ವ್ಯವಸ್ಥೆ ಜಾರಿಯಲ್ಲಿರಬೇಕು.
ಮೂಲ ಸೌಕರ್ಯ ನಿರ್ವಹಣೆಗೆ ಅನುದಾನ :ವರ್ಷಗಳ ಕಾಲ ರಾಜ್ಯಗಳಿಗೆ ಆರೋಗ್ಯ ಕ್ಷೇತ್ರದಲ್ಲಿ ಹೊಸತಾಗಿ ಒದಗಿಸಲಾಗಿರುವ ಮೂಲ ಸೌಕರ್ಯಗಳ ನಿರ್ವಹಣೆಗಾಗಿ ಕೇಂದ್ರ ಸರಕಾರ ಅನುದಾನ ಕೊಡಬಹುದು. ಆರೋಗ್ಯ ಕ್ಷೇತ್ರ ಸುಧಾರಿಸುವ ವರೆಗೆ ಈ ವ್ಯವಸ್ಥೆ ಮುಂದುವರಿಸಬಹುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆಗಾಗಿ ತಾಲೂಕುಗಳಿಗೆ ಪ್ರತಿ ವರ್ಷ 50 ಲಕ್ಷ ರೂ. ವಿತ್ತೀಯ ಸಹಾಯ ಕೊಡಬಹುದು. ಈ ಮೂಲಕ ಅಗತ್ಯ ಔಷಧ, ವೈದ್ಯಕೀಯ ಸಲಕರಣೆಗಳನ್ನು ಹೊಂದುವ ಮೂಲಕ ಸ್ಥಳೀಯ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ನೀಡಬಹುದು. ಜಿಲ್ಲಾ ಆಸ್ಪತ್ರೆಗಳಿಗಾಗಿ 25 ಸಾವಿರ ಕೋಟಿ ರೂ., ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಾಗಿ 1,680 ಕೋಟಿ ರೂ. – ಹೀಗೆ, ಒಟ್ಟು 26, 680 ಕೋಟಿ ರೂ.ಗಳನ್ನು ಪ್ರತಿ ವರ್ಷ ಎಂಬಂತೆ ಐದು ವರ್ಷಗಳ ಕಾಲ ಕೇಂದ್ರ ಸರಕಾರ ರಾಜ್ಯಗಳಿಗೆ ನೀಡಬಹುದು.
ಆರೋಗ್ಯವ್ಯವಸ್ಥೆ ಕಡ್ಡಾಯವಾಗಿ ಸುಧಾರಣೆಯಾಗಲೇಬೇಕು :
ಕೊರೊನಾ ಅಥವಾ ಇನ್ನು ಯಾವುದೇ ಸಾಂಕ್ರಾಮಿಕ ರೋಗದಂಥ ಸಮಸ್ಯೆಯಿಂದ ಆರೋಗ್ಯ ಮೂಲ ಸೌಕರ್ಯ ಕೊರತೆ, ವೈದ್ಯಕೀಯ ವ್ಯವಸ್ಥೆ ಮೇಲ್ದರ್ಜೆಗೆ ಏರಿಸದೇ ಇದ್ದ ಕಾರಣದಿಂದಾಗಿ ಭಾರತದಲ್ಲಿ ಜನರ ಸಾವು ಸಂಭವಿಸಲೇಬಾರದು. ಇದು ಸೋಂಕಿನ ಪರಿಸ್ಥಿತಿಯಿಂದ ಎಲ್ಲರಿಗೂ ದೊರೆತ ಪಾಠವೇ ಆಗಿದೆ. ದೇಶದ ವೈದ್ಯಕೀಯ ವ್ಯವಸ್ಥೆ ಮೇಲ್ದರ್ಜೆಗೆ ಏರಿಸುವಿಕೆ, ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರರಿಗೆ ಸೂಕ್ತ ತರಬೇತಿ, ರೋಗಗಳ ತಡೆ ಮತ್ತು ನಿಯಂತ್ರಣ ಕೇಂದ್ರ ಸ್ಥಾಪನೆ ಸೇರಿದಂತೆ ಮೂರು ವರ್ಷಗಳಿಗೆ 3 ಲಕ್ಷ ಕೋಟಿ ರೂ.ಗಳನ್ನು ಕೇಂದ್ರ ಸರಕಾರ ವೆಚ್ಚ ಮಾಡಬೇಕಾಗಿ ಬರಬಹುದು. ಪ್ರತಿ ವರ್ಷ ಕೇಂದ್ರ ಸರಕಾರ 75 ಸಾವಿರ ಕೋಟಿ ರೂ.ಗಳಂತೆ ಮೂರು ವರ್ಷ 2.5 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಬೇಕು. ಉಳಿದ ಮೊತ್ತ ರಾಜ್ಯ ಸರಕಾರಗಳ ದೇಣಿಗೆಯಿಂದ ಬರಲಿದೆ. ದೇಶದ 138 ಕೋಟಿ ಜನರಿಗೆ ಜಗತ್ತಿನ ಅತ್ಯುತ್ಕೃಷ್ಟ ಆರೋಗ್ಯ ವ್ಯವಸ್ಥೆ ಕಲ್ಪಿಸಬೇಕು ಎಂಬ ಪಾಠವನ್ನು ಕಲಿತಿದ್ದೇವೆ. ಮುಂದಿನ ದಿನಗಳಲ್ಲಿ ಇಂಥ ಸಾಂಕ್ರಾಮಿಕ ರೋಗಗಳು ಬಂದರೂ, ಜನರಿಗೆ ಕಷ್ಟ ಬರುವಂಥ ಸ್ಥಿತಿ ಬರುವುದು ಬೇಡ ಮತ್ತು ಅದನ್ನು ಎದುರಿಸುವ ಪೂರ್ಣ ವ್ಯವಸ್ಥೆ ನಮ್ಮಲ್ಲಿರಬೇಕು.
– ಟಿ.ವಿ.ಮೋಹನ್‌ದಾಸ್ ಪೈ ,ನಿಶಾ ಹೊಳ್ಳ