ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು, ಬುಧವಾರ ಎರಡೂ ಕಡೆಗಳ ಯುದ್ಧ ವಿಮಾನಗಳ ನಡುವೆ ತೀವ್ರ ಘರ್ಷಣೆ ಸಂಭವಿಸಿದೆ. ಮಂಗಳವಾರದ ಸರ್ಜಿಕಲ್ ದಾಳಿಗೆ ಪ್ರತಿಯಾಗಿ ಭಾರತದ ವಾಯುನೆಲೆಗೆ ಪ್ರವೇಶಿಸಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ವಾಪಸ್ ಕಳುಹಿಸುವಲ್ಲಿ ಯಶಸ್ವಿಯಾಗಿರುವ ಭಾರತೀಯ ವಾಯು ಸೇನೆ, ಆ ದೇಶದ ಎಫ್ 16 ಯುದ್ಧ ವಿಮಾನವನ್ನೂ ಹೊಡೆದುರುಳಿಸಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಭಾರತದ ಮಿಗ್ 21 ಯುದ್ಧ ವಿಮಾನ ಹೊಡೆದುರುಳಿಸಿದ್ದು, ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಬಂಧಿಸಿ ಕರೆದೊಯ್ದಿದೆ. ಇಡೀ ದೇಶವೇ ಇವರ ಬಿಡುಗಡೆಗಾಗಿ ಪ್ರಾರ್ಥಿಸುತ್ತಿದ್ದು, ಅವರೊಟ್ಟಿಗಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಸ್ಥಳೀಯರು ನಮ್ಮ ಪೈಲಟ್‌ಗೆ ಥಳಿಸಿರುವ ವಿಡಿಯೋವನ್ನು ಪಾಕಿಸ್ತಾನವೇ ಬಿಡುಗಡೆ ಮಾಡಿದೆ. ಈ ವೇಳೆ ಪಾಕ್ ಸೇನೆಯ ಸೈನಿಕರು ಇದ್ದರೂ, ಅವರು ವರ್ಧಮಾನ್ ಮೇಲೆ ಸ್ಥಳೀಯರಿಂದ ಹಲ್ಲೆಯಾಗುತ್ತಿದ್ದರೂ ಬಿಡಿಸುವ ಯತ್ನ ಮಾಡದೇ ಇರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಅಂತಾರಾಷ್ಟ್ರೀಯ ಮಿಲಿಟರಿ ನಿಯಮದ ಪ್ರಕಾರ, ಇದು ಅಕ್ಷಮ್ಯ ನಡೆಯಾಗಿದ್ದು, ಈ ಬಗ್ಗೆ ಭಾರತವೂ ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇನ್ನೊಂದು ದೇಶದ ಯೋಧರು ಸೆರೆಸಿಕ್ಕಲ್ಲಿ, ಅವರನ್ನು ಉತ್ತಮವಾಗಿ ನಡೆಸಿಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವನ್ನೂ ಪಾಕಿಸ್ತಾನ ಹೊಂದದೇ ಇರುವುದು ಈ ವಿಡಿಯೋ ಮೂಲಕ ಗೊತ್ತಾಗಿದೆ.
ಇದಷ್ಟೇ ಅಲ್ಲ, ಬುಧವಾರ ಬೆಳಗ್ಗೆಯಿಂದಲೂ ಸುಳ್ಳುಗಳ ಸರಮಾಲೆಯನ್ನೇ ಪೊಣಿಸಿದ್ದ ಪಾಕಿಸ್ತಾನ, ತನ್ನದೇ ಹೇಳಿಕೆಗಳನ್ನು ಹಿಂಪಡೆದು ಮುಜುಗರಕ್ಕೀಡಾದ ಪ್ರಸಂಗವೂ ಜರುಗಿದೆ. ಕಾಶ್ಮೀರದ ಬುದ್ವಾಮ್‌ನಲ್ಲಿ ಮಿಗ್ ಹೆಲಿಕಾಪ್ಟರ್ ಪತನಗೊಂಡ ದೃಶ್ಯಾವಳಿಗಳನ್ನು ಪ್ರಕಟಿಸಿದ್ದ ಪಾಕಿಸ್ತಾನ ಮಾಧ್ಯಮಗಳು ನಾವೇ ಇದನ್ನು ಹೊಡೆದುಹಾಕಿದ್ದೆವು ಎಂದಿದ್ದವು. ನಂತರ, ಈ ಘಟನೆಗೂ ನಮಗೂ ಸಂಬಂಧವೇ ಇಲ್ಲ ಎಂದು ಅಲ್ಲಿನ ಸೇನಾ ವಕ್ತಾರರೇ ಹೇಳಿದರು.
ಇನ್ನು ಇಬ್ಬರು ಪೈಲಟ್‌ಗಳನ್ನು ಬಂಧಿಸಿದ್ದೇವೆ ಎಂದು ಘಂಟಾಘೋಷವಾಗಿ ಹೇಳಿದ್ದ ಪಾಕಿಸ್ತಾನ, ರಾತ್ರಿ ವೇಳೆಗೆ ಈ ಹೇಳಿಕೆಯನ್ನೂ ವಾಪಸ್ ಪಡೆಯಿತು. ಪಾಕ್ ಸೇನೆಯ ವಕ್ತಾರರು, ನಾವು ಭಾರತದ ಎರಡು ಯುದ್ಧ ವಿಮಾನ ಹೊಡೆದಿದ್ದೇವೆ, ಆದರೆ, ಒಬ್ಬ ಪೈಲಟ್‌ನನ್ನು ಮಾತ್ರ ಸೆರೆಹಿಡಿದಿದ್ದೇವೆ. ಇದಷ್ಟೇ ಅಲ್ಲ, ನಮ್ಮ ಜತೆಯಲ್ಲಿ ಇರುವ ಅಭಿನಂದನ್ ವರ್ಧಮಾನ್ ಅವರಿಗೆ ಯಾವುದೇ ಹಿಂಸೆಯನ್ನೂ ಕೊಟ್ಟಿಲ್ಲ. ಅಂತಾರಾಷ್ಟ್ರೀಯ ಮಿಲಿಟರಿ ನಿಯಮದ ಪ್ರಕಾರವೇ ನಡೆಸಿಕೊಳ್ಳುತ್ತಿದ್ದೇವೆ ಎಂದು ಹೇಳಿ ಸ್ಪಷ್ಟನೆ ಕೊಟ್ಟರು.
ಇದಕ್ಕೆ ಕಾರಣವೂ ಇದೆ. ವರ್ಧಮಾನ್ ಅವರನ್ನು ಬಂಧಿಸಿದ ಕೂಡಲೇ ಈ ಸಂಗತಿಯನ್ನು ಇಡೀ ಜಗತ್ತಿಗೆ ಹೇಳಬೇಕಿತ್ತು. ಈ ನಿಟ್ಟಿನಲ್ಲಿ ಅಲ್ಲಿ ಏನಾಗುತ್ತಿದೆ ಎಂಬುದನ್ನು ಅವಲೋಕಿಸದೇ, ವರ್ಧಮಾನ್ ಅವರಿಗೆ ಹಿಂಸೆ ನೀಡುತ್ತಿರುವ ವಿಡಿಯೋ ದೃಶ್ಯಾವಳಿಗಳನ್ನು ಪಾಕಿಸ್ತಾನ ಮಾಧ್ಯಮಗಳ ಮೂಲಕ ಪ್ರಸಾರ ಮಾಡಿಸಿತು. ಕೇವಲ ಅರ್ಧಗಂಟೆಯಲ್ಲೇ ಈ ವಿಡಿಯೋ ಇಡೀ ಜಗತ್ತಿಗೆ ತಲುಪಿ, ಪಾಕಿಸ್ತಾನದ ವರ್ತನೆಗೆ ಛೀ ಥೂ ಎಂದು ಹೇಳಲು ಶುರು ಮಾಡಿದರು. ಇದರಿಂದ ಆತಂಕಗೊಂಡ ಪಾಕ್ ಸೇನೆ, ನಾವು ಅಭಿನಂದನ್ ವರ್ಧಮಾನ್ ಅವರನ್ನು ಉತ್ತಮವಾಗಿ ನಡೆಸಿಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟನೆ ಕೊಟ್ಟಿತು.
ಇವತ್ತಿನ ಸಾಮಾಜಿಕ ಮಾಧ್ಯಮಗಳ ಭರಾಟೆಯಲ್ಲಿ ಯಾವುದೇ ಸುದ್ದಿಯನ್ನು ಹಿಂದೆ ಮುಂದೆ ನೋಡದೇ ಪ್ರಕಟ ಮಾಡಬಾರದು ಎಂಬುದಕ್ಕೆ ಪಾಕಿಸ್ತಾನದ ಈ ಸುದ್ದಿಗಳೇ ಸಾಕ್ಷಿ. ನಮಗೆ ಹಿನ್ನಡೆಯಾಗುತ್ತಿಲ್ಲ ಎಂದು ಹೇಳುವ ಸಲುವಾಗಿ ಸುಳ್ಳು ಸುದ್ದಿಗಳನ್ನು ಪ್ರಕಟ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡಾಗುತ್ತಿರುವ ಪಾಕಿಸ್ತಾನ ಇನ್ನಾದರೂ ಬುದ್ಧಿ ಕಲಿಯಬೇಕು.
ಎಲ್ಲದಕ್ಕೂ ಯುದ್ಧವೇ ಪರಿಹಾರವಲ್ಲ ಎಂಬುದು ಇತಿಹಾಸ ನೋಡಿದ ಎಲ್ಲರಿಗೂ ಗೊತ್ತು. ಅದರಲ್ಲೂ ಮಹಾಭಾರತ, ರಾಮಾಯಣ ಓದಿರುವ ಭಾರತದಂಥ ದೇಶದಲ್ಲಿ ಯುದ್ಧದಿಂದ ಏನಾಗುತ್ತದೆ ಎಂಬುದು ಚೆನ್ನಾಗಿಯೇ ಅರಿವಿದೆ. ಆದರೆ, ಉಗ್ರರಿಗೆ ಆಶ್ರಯ ಕೊಟ್ಟು, ಅವರ ಕಡೆಯಿಂದ ಪರೋಕ್ಷ ಸಮರ ನಡೆಸುತ್ತಿರುವ ಪಾಕಿಸ್ತಾನ ಆಡಳಿತ, ಅಲ್ಲಿನ ಸೇನೆ, ಐಎಸ್‌ಐ ತಮ್ಮ ವರ್ತನೆ ಬದಲಾವಣೆ ಮಾಡಿಕೊಳ್ಳದಿದ್ದರೆ, ಕೆಲವೊಂದು ಕಠಿಣ ಕ್ರಮಗಳು ಅನಿವಾರ್ಯವಾಗುತ್ತವೆ. ಇಂದು ಭಾರತವೇನೂ ಯುದ್ಧ ಮಾಡಲೇಬೇಕು ಎಂದು ಹೊರಟಿಲ್ಲ. ಆದರೆ, ಪುಲ್ವಾಮಾದಂಥ ದಾಳಿಗೆ ಉಗ್ರರು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಾಲಕೋಟ್‌ನ ಉಗ್ರ ಶಿಬಿರಗಳ ಮೇಲೆ ದಾಳಿ ಮಾಡಿದ್ದು. ಇದನ್ನು ಅರಿತುಕೊಳ್ಳದೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ನಮಗೆ ಯುದ್ಧ ಬೇಕಿಲ್ಲ, ಶಾಂತಿಯ ಪ್ರತಿಪಾದಕರು ಎಂದು ಹೇಳಲು ಹೊರಟಿರುವುದು ಕೇವಲ ಹಾಸ್ಯಾಸ್ಪದವಷ್ಟೇ. ಮೊದಲು ಉಗ್ರರಿಗೆ ಅನ್ನ ನೀರು ಕೊಡುವುದನ್ನು ನಿಲ್ಲಿಸಿ, ನಂತರ ಶಾಂತಿ ಸಾಮರಸ್ಯದಿಂದ ಬಾಳ್ಳೋಣ ಎಂದರೆ ಆ ಮಾತಿಗೆ ಒಂದು ಅರ್ಥವಾದರೂ ಬಂದೀತು.