Advertisement

Corruption ನಿಯಂತ್ರಿಸದಿದ್ದರೆ ದೇಶದ ವಿನಾಶ: ಉಪಲೋಕಾಯುಕ್ತ ನ್ಯಾ| ಮೂ| ಬಿ. ವೀರಪ್ಪ

10:27 PM Dec 01, 2024 | Team Udayavani |

ಮಂಗಳೂರು: ಭ್ರಷ್ಟಾಚಾರ, ದುರಾಸೆಯಿಂದ ದೇಶ ವಿನಾಶದಂಚಿಗೆ ಹೋಗುತ್ತದೆ. ಇದನ್ನು ತಡೆಯಲು ನ್ಯಾಯಾಂಗ ಮತ್ತು ಪತ್ರಿಕಾರಂಗ ಇನ್ನಷ್ಟು ಬಲಿಷ್ಠವಾಗಬೇಕಿದೆ ಎಂದು ಕರ್ನಾಟಕ ಉಪಲೋಕಾಯುಕ್ತ ನ್ಯಾ| ಮೂ| ಬಿ. ವೀರಪ್ಪ ಹೇಳಿದ್ದಾರೆ.

Advertisement

ರವಿವಾರ ನಗರದಲ್ಲಿ ದ.ಕ. ಜಿಲ್ಲಾ ನ್ಯಾಯಾಲಯಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ “ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ’ ಕುರಿತಾಗಿ ಅವರು ಮಾತನಾಡಿದರು.

ಸರಕಾರಿ ಆಸ್ಪತ್ರೆಗಳನ್ನು ಕೂಡ ಭ್ರಷ್ಟಾಚಾರ ಬಿಟ್ಟಿಲ್ಲ. ಹಾಸ್ಟೆಲ್‌ಗ‌ಳಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ. ಶಾಲೆಗಳಲ್ಲಿಯೂ ಭ್ರಷ್ಟಾಚಾರವಿದೆ. ಹಣ ಪಡೆದು ಮತ ಹಾಕುವಂತಹ ಸ್ಥಿತಿ ಬಂದಿದೆ. ನಮ್ಮತನ ಮರೆತುಬಿಟ್ಟಿದ್ದೇವೆ. ಭ್ರಷ್ಟಾಚಾರ, ಸ್ವಾರ್ಥ ಹೆಚ್ಚುತ್ತಿದೆ. ಇದರಿಂದ ದೇಶ ಉದ್ದಾರವಾಗದು. ಹಣ, ಆಸ್ತಿಗಾಗಿ ತಿನ್ನುವ ಆಹಾರವನ್ನು ಸಹಿತ ವಿಷವನ್ನಾಗಿ ಮಾಡಿಕೊಳ್ಳುತ್ತಿದ್ದೇವೆ.

ಪ್ರತಿಯೊಬ್ಬರೂ ಕೂಡ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ನ್ಯಾಯಾಂಗ ಮತ್ತು ಪತ್ರಿಕಾರಂಗ ಬಲಿಷ್ಠವಾಗಿದ್ದಾಗ ಮಾತ್ರವೇ ಕಾರ್ಯಾಂಗವೂ ಸೇರಿದಂತೆ ತಪ್ಪು ಮಾಡುವವರಲ್ಲಿ ಭಯ ಮೂಡುತ್ತದೆ ಎಂದು ನ್ಯಾ| ಮೂ| ವೀರಪ್ಪ ಹೇಳಿದರು.

ಸುಳ್ಳು ಕೇಸುಗಳ ಮೇಲೆ ನಿಗಾ
ಸುಳ್ಳು ಕೇಸುಗಳನ್ನು ನೀಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಲೋಕಾಯುಕ್ತದಲ್ಲಿ ಇತ್ಯರ್ಥಕ್ಕೆ ಬಾಕಿ ಇರವ 20,100 ಪ್ರಕರಣಗಳಲ್ಲಿ ಸುಮಾರು 8,000 ಪ್ರಕರಣಗಳು ಸುಳ್ಳು ಪ್ರಕರಣಗಳಾಗಿವೆ. ಹಾಗಾಗಿ ಇಂತಹ ಪ್ರಕರಣಗಳನ್ನು ದಾಖಲಿಸುವವರ ಮೇಲೆ ನಿಗಾ ಇಟ್ಟು ಕ್ರಮ ಕೈಗೊಳ್ಳಲಾಗುವುದು. ಸುಳ್ಳು ಪ್ರಕರಣಗಳಿಂದಾಗಿ ನೈಜವಾದ ಪ್ರಕರಣಗಳ ಬಗ್ಗೆ ಗಮನ ಹರಿಸಿ ನಿಜವಾದ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಅವರು ಹೇಳಿದರು.

Advertisement

ವಿದ್ಯಾವಂತರಿಂದಲೇ ವ್ಯಾಜ್ಯ
ದೇಶದಲ್ಲಿ ಈಗ ಸಾಕ್ಷರತೆಯ ಪ್ರಮಾಣ ಶೇ. 80ರಷ್ಟಿದೆ. ಸಿವಿಲ್‌, ಪೊಕೊÕà, ಇತರ ಅಪರಾಧ ಪ್ರಕರಣಗಳಲ್ಲಿ ಶೇ.90ರಷ್ಟು ಸಾಕ್ಷರರೇ ಇದ್ದಾರೆ. ವಿದ್ಯಾವಂತರಿಗೆ ಕಾನೂನಿನ ತಿಳಿವಳಿಕೆ ಇದ್ದರೂ ಗೊತ್ತಿಲ್ಲದಂತೆ ಮಾಡುತ್ತಿದ್ದಾರೆ. ಏನು ಮಾಡಿದರೂ ಜಾಮೀನು ಸಿಗುತ್ತದೆ ಎಂಬ ಮನೋಭಾವನೆ ಅವರಲ್ಲಿದೆ. ಇಂತಹ ಸಂದರ್ಭದಲ್ಲಿ ನ್ಯಾಯಾಧೀಶರ ತೀರ್ಪು ಕಠಿನವಾಗಬೇಕು. ಆಗ ಭಯ ಮೂಡುತ್ತದೆ ಎಂದು ನ್ಯಾ| ಮೂ| ವೀರಪ್ಪ ಹೇಳಿದರು.

5 ಕೋಟಿ ಪ್ರಕರಣಗಳು ಬಾಕಿ
ಪ್ರತಿ ವರ್ಷ ಸುಪ್ರೀಂ ಕೋರ್ಟ್‌ನಲ್ಲಿ 70,000 ಕೇಸುಗಳು ಇತ್ಯರ್ಥವಾಗುತ್ತವೆ. ಹೈಕೋರ್ಟ್‌, ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು ಸುಮಾರು 20 ಲಕ್ಷ ಪ್ರಕರಣಗಳು ಇತ್ಯರ್ಥವಾಗುತ್ತವೆ. ಆದರೂ ಇನ್ನು ಕೂಡ ಒಟ್ಟಾರೆಯಾಗಿ ಸುಮಾರು 5 ಕೋಟಿ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ ಎಂದರು.

ಒಂದು ಸೆಂಟ್‌ಗೆ ಸುಪ್ರೀಂ ಕೋರ್ಟ್‌ಗೆ!
ಮಂಗಳೂರಿನ ಜನ ಒಂದು ಸೆಂಟ್‌ ಜಾಗಕ್ಕಾಗಿ ಸುಪ್ರೀಂಕೋರ್ಟ್‌ಗೂ ಹೋಗುತ್ತಾರೆ. ಇಂತಹ ನಡವಳಿಕೆ ಸಡಿಲ ಮಾಡಿಕೊಂಡರೆ ಒಳ್ಳೆಯದು ಎಂದು ಉಪಲೋಕಾಯುಕ್ತರು ಹೇಳಿದರು. ನಗರದ ಸ್ವಚ್ಛತೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಎಲ್ಲ ಸರಕಾರಿ ಕಚೇರಿಗಳಲ್ಲಿಯೂ ಲೋಕಾಯುಕ್ತದ ಕುರಿತು ಮಾಹಿತಿ ಫ‌ಲಕಗಳನ್ನು ಅಳವಡಿಸುವಂತೆ ಉಪಲೋಕಾಯುಕ್ತರು ಸೂಚನೆ ನೀಡಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಎಂ.ಜೋಷಿ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕ ಕೆ.ಎಂ.ರಾಜಶೇಖರ್‌, ಉಪನಿಬಂಧಕರಾದ ಕೆ.ಎಂ.ಬಸವರಾಜಪ್ಪ, ಅರವಿಂದ ಎನ್‌.ವಿ., ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಶೋಭಾ ಬಿ.ಜಿ., ಲೋಕಾಯುಕ್ತ ಎಸ್‌ಪಿ ನಟರಾಜ್‌ ಎಂ.ಎ. ಉಪಸ್ಥಿತರಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ಸ್ವಾಗತಿಸಿದರು.

ಉಪಲೋಕಾಯುಕ್ತರ ಮಿಂಚಿನ ಸಂಚಾರ
ಮಂಗಳೂರು: ಕರ್ನಾಟಕ ಉಪಲೋಕಾ ಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ರವಿವಾರ ನಗರದ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಗ್ಗೆ ಪಚ್ಚನಾಡಿಯ ತ್ಯಾಜ್ಯ ನಿರ್ವಹಣ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು.

ಬಳಿಕ ಪಿವಿಎಸ್‌ ಬಳಿಯ ಡಾ| ಬಿ.ಆರ್‌. ಅಂಬೇಡ್ಕರ್‌, ಕುದು¾ಲ್‌ ರಂಗರಾವ್‌ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿನಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ, ಕುಂದುಕೊರತೆ ಆಲಿಸಿದರು. ಮಧ್ಯಾಹ್ನ ನ್ಯಾಯಾಲಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಳಿಕ ಹಳೆಯಂಗಡಿ ಪಂಚಾಯತ್‌ಗೆ ಭೇಟಿ ನೀಡಿದರು. ಸಂಜೆ ಮಂಗಳೂರಿನ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಗೆ ಭೇಟಿ, ರೋಗಿಗಳ ಅಹವಾಲು ಆಲಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next