ಉಡುಪಿ: ಬದುಕಿಗೆ ಹಣ ಅತ್ಯಗತ್ಯ. ಸಂಪಾದಿಸಿದ ಹಣವನ್ನು ಐದು ಭಾಗಗಳಾಗಿ ವಿಂಗಡಿಸಿ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸ್ತ್ರಗಳು ಹೇಳುತ್ತವೆ. ಧರ್ಮ, ಅರ್ಥ, ಕಾಮ, ಯಶಸ್ಸು, ಸ್ವಜನರಿಗಾಗಿ ಬಳಸಿದಾಗ ಹಣದ ಸದ್ವಿನಿಯೋಗವಾಗಿ ದೇಶ ಶ್ರೀಮಂತವಾಗುತ್ತದೆ ಎಂದು ಅದಮಾರು ಮಠ ಶಿಕ್ಷಣ ಮಂಡಳಿ ಉಪಾಧ್ಯಕ್ಷರಾದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಹೇಳಿದರು.
ಪೂರ್ಣಪ್ರಜ್ಞ ಕಾಲೇಜು ಮತ್ತು ಮಂಗಳೂರು ವಿ.ವಿ. ಅರ್ಥಶಾಸ್ತ್ರ ಸಂಘದ ವತಿಯಿಂದ ಸಿಂಡಿಕೇಟ್ ಬ್ಯಾಂಕ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಡಾ| ಎನ್.ಕೆ. ತಿಂಗಳಾಯ ಸ್ಮಾರಕ ವಿಚಾರ ಸಂಕಿರಣ “ಬಡವರಿಗಾಗಿ ಗ್ರಾಮೀಣ ಬ್ಯಾಂಕಿಂಗ್’ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಕೋಪ, ಅಹಂಕಾರ, ಹರ್ಷ, ನಾಚಿಕೆ ಮನುಷ್ಯನ ಸಹಜ ಸ್ವಭಾವ. ಆದರೆ ಅವುಗಳನ್ನು ಅನುಕೂಲವಾಗುವಂತೆ ಬಳಸಿಕೊಳ್ಳುವ ಸಾಮರ್ಥ್ಯವನ್ನು ಪ್ರತಿಯೊಬ್ಬರೂ ಹೊಂದಿರಬೇಕು ಎಂದರು.
ಆಳ್ವಾಸ್ ತಾಂತ್ರಿಕ ವಿದ್ಯಾಲಯದ ಆಡಳಿತ ವ್ಯವಹಾರ ವಿಭಾಗದ ಪ್ರಾಧ್ಯಾಪಕ ಡಾ| ಕೆ.ಎಸ್. ಜೋಷಿ ಮಾತನಾಡಿ, ಕರಾವಳಿಯ ಆರ್ಥಿಕತೆಯ ಬಗ್ಗೆ ಡಾ| ಎನ್.ಕೆ. ತಿಂಗಳಾಯ ಅವರು ವಿಶೇಷ ಕಾಳಜಿ ವಹಿಸಿದರು. ಸರಕಾರಗಳು ಇಂದು ಕರಾವಳಿಯ ಆರ್ಥಿಕ ಅಭಿವೃದ್ಧಿಗೆ ನಿರ್ಲಕ್ಷ್ಯ ಹೊಂದಿವೆ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ಈ ಭಾಗದ ಆರ್ಥಿಕ ಅಭಿವೃದ್ಧಿ ಗೆ ಮಾರಕವಾಗಿದೆ. ಒಂದು ವೇಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತವಾಗಿ ಮುಗಿದಿದ್ದರೆ ಕರಾವಳಿಯ ಅಭಿವೃದ್ಧಿ ಗೆ ಪೂರಕವಾಗುತ್ತಿತ್ತು ಎನ್ನುವ ಭಾವನೆ ಅವರಲ್ಲಿ ಇತ್ತು ಎಂದು ಹೇಳಿದರು.
ಕರಾವಳಿಯ ಆರ್ಥಿಕತೆಯ ಬಗ್ಗೆ ದಾಖಲೀಕರಣ ಮಾಡುವ ಆಶಯವನ್ನು ಮಂಗಳೂರು ವಿ.ವಿ. ಹೊಂದಿದೆ ಎಂದು ಡಾ| ಕೆ.ಎಸ್. ಜೋಷಿ ಹೇಳಿದರು.
ಸಿಂಡಿಕೇಟ್ ಬ್ಯಾಂಕ್ ಮಹಾಪ್ರಬಂಧಕ ಭಾಸ್ಕರ್ ಹಂದೆ, ನಿವೃತ್ತ ಮಹಾಪ್ರಬಂಧಕ ಮೋಹನ್ ರೆಡ್ಡಿ, ಪಿಪಿಸಿ ಆಡಳಿತ ಸಮಿತಿಯ ಗೌರವ ಕಾರ್ಯದರ್ಶಿ ಡಾ| ಜಿ.ಎಸ್. ಚಂದ್ರಶೇಖರ್, ಪ್ರಾಂಶುಪಾಲ ಡಾ|ಎ.ಪಿ. ಭಟ್, ಕೆ.ಎಸ್. ಹೆಗ್ಡೆ ಮ್ಯಾನೇಜ್‌ಮೆಂಟ್ ಸಂಸ್ಥೆಯ ಡಾ| ಎನ್.ಎಸ್. ಶೆಟ್ಟಿ ಉಪಸ್ಥಿತರಿದ್ದರು.
ಪಿಪಿಸಿ ಅರ್ಥ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ಪ್ರಕಾಶ್ ರಾವ್ ಸ್ವಾಗತಿಸಿ ಮಂಗಳೂರು ವಿ.ವಿ. ಅರ್ಥ ಶಾಸ್ತ್ರ ಸಂಘದ ಅಧ್ಯಕ್ಷ ಡಾ| ಸುದರ್ಶನ್ ವಂದಿಸಿದರು. ಸೌಜನ್ಯಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.