ಕನೇರಿ (ಕೊಲ್ಲಾಪುರ): ಸಮಗ್ರ, ಸಂಪೂರ್ಣ ಸತ್ಯ ವಿಚಾರದ ಕೃಷಿ ಮಾದರಿ ಇಂದು ದೇಶಕ್ಕೆ ಅಗತ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ ಭಾಗವತ್ ಅಭಿಪ್ರಾಯಪಟ್ಟರು.
ಆರ್‌ಎಸ್‌ಎಸ್‌ನ ಅಕ್ಷಯ ಕೃಷಿ ಪರಿವಾರ ಕಾರ್ಯಾಗಾರದ ಸಮಾರೋಪದಲ್ಲಿ ಬುಧವಾರ ಮಾತನಾಡಿ, ಸಹಕಾರ ಮತ್ತು ಸಂಯೋಜನೆ, ಸಮತೋಲನ ಕೃಷಿಯಲ್ಲಿ ಅಗತ್ಯ. ಇಂದು ಕ್ರಿಮಿನಾಶಕ ಆಧಾರಿತ ಕೃಷಿಯು ಪರಿಸರಕ್ಕೆ ಮಾರಕದ ಜೊತೆಗೆ ಹಲವು ಕೃಷಿ ಸ್ನೇಹಿ ಜೀವಾಣುಗಳನ್ನು ಕೊಲ್ಲುವ ಪದ್ಧತಿಯಾಗಿದೆ. ಭಾರತೀಯ ಕೃಷಿ ಪರಂಪರೆಯಲ್ಲಿ ನಿಯಂತ್ರಣ ಪದ್ಧತಿ ಇದೆಯೇ ವಿನಃ ಕೊಲ್ಲುವ ಪದ್ಧತಿ ಇಲ್ಲ ಎಂದರು.
ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯೂಟಿಒ) ಇಡೀ ಜಗತ್ತು ತನ್ನದೇ ನಿಯಂತ್ರಣದಲ್ಲಿರಬೇಕು. ಎಷ್ಟು ಜನ ಸಮಸ್ಯೆಗೀಡಾದರೂ ಪರವಾಗಿಲ್ಲ. ತನ್ನ ಶಕ್ತಿ ಹಾಗೂ ವ್ಯಾಪಾರಕ್ಕೆ ಧಕ್ಕೆ ಆಗದಂತಹ ನಿಲುವು ತಾಳಿದೆ. ಇಂದು ಜ್ಞಾನಕ್ಕೂ ಬೆಲೆ ಕಟ್ಟುವ ಸ್ಥಿತಿ ಬಂದೊದಗಿದೆ. ಅನ್ನ ಸಹ ವ್ಯಾಪಾರದ ವಸ್ತುವಾಗಿ ಮಾರ್ಪಟ್ಟಿದೆ. ರೈತರು ‘ನಮ್ಮ ಬೀಜ-ನಮ್ಮ ಭೂಮಿ’ ಪರಿಕಲ್ಪನೆಯಿಂದ ದೂರ ಸರಿದಿದ್ದರಿಂದಲೇ ಬಹುರಾಷ್ಟ್ರೀಯ ಕಂಪನಿಗಳು ಬೀಜ ಮತ್ತು ಭೂಮಿಯ ಮೇಲೆ ತಮ್ಮ ಪ್ರಭುತ್ವ ಸಾಧಿಸತೊಡಗಿವೆ. ರೈತರಿಗೆ ಸಮಗ್ರ ಮತ್ತು ಸಂಪೂರ್ಣ ಕೃಷಿ ತಿಳಿವಳಿಕೆ ಅವಶ್ಯವಾಗಿದೆ ಎಂದರು.
ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಜಮೀನಿನ ಆರೋಗ್ಯ ಉತ್ತಮವಾಗಿದ್ದರೆ, ಯೋಗ್ಯ ಆಹಾರ ಸಿಗುತ್ತದೆ. ದೇಶದಲ್ಲಿ ಇಂದು 22 ಸಾವಿರ ಎಂಜಿನಿಯರಿಂಗ್ ಕಾಲೇಜ್ ಗಳಿವೆ. ಅಲ್ಲಿಂದ ಹೊರಬಂದ ಎಂಜಿನಿಯರ್‌ಗಳಿಗೆ ಕೆಲಸವಿಲ್ಲ. ಆದರೆ ಕೃಷಿಗೆ ಒಳ್ಳೆಯ ಎಂಜಿನಿಯರ್‌ಗಳ ಅಗತ್ಯತೆಯಿದೆ. ಆದರೆ ಅಷ್ಟು ಕೃಷಿ ಕಾಲೇಜ್‌ಗಳು ದೇಶದಲ್ಲಿಲ್ಲ. ಸಾವಯವ ಕೃಷಿಕರನ್ನು ಹುಚ್ಚರಂತೆ ಕಾಣುವ ಸ್ಥಿತಿ ನಿರ್ಮಾಣವಾಗಿದೆ. ಸಾವಯವ ಕೃಷಿ ಉಳಿಯಬೇಕಾದರೆ ದೇಶಿ ಗೋವು ಮುಖ್ಯ. ಈ ನಿಟ್ಟಿನಲ್ಲಿ ಮಠಾಧೀಶರು ಸಂಘಟಿತರಾಗಬೇಕಿದೆ ಎಂದರು.ಆರ್‌ಎಸ್‌ಎಸ್ ಸಹ ಸಹಕಾರ್ಯವಾಹ ಬಾಗಯ್ನಾಜಿ ವೇದಿಕೆಯಲ್ಲಿದ್ದರು.