ಬೆಂಗಳೂರು: ಇತ್ತೀಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರಿಗೆ ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ಬುಧವಾರ
ಅಭಿನಂದನೆ ಸಲ್ಲಿಸಲಾಯಿತು.
ಬನಶಂಕರಿಯಲ್ಲಿರುವ ಕಂಬಾರರ ನಿವಾಸಕ್ಕೆ ತೆರಳಿದ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ನೇತೃತ್ವದ ತಂಡ ಶಾಲು ಹೊದಿಸಿ ಸನ್ಮಾನಿಸಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ ಕಂಬಾರ, ನಮ್ಮ ಸ್ಥಳೀಯ ಭಾಷೆಯೊಳಗೆ ಹಲವು ಭಿನ್ನಾಭಿಪ್ರಾಯಗಳಿವೆ. ಇವುಗಳನ್ನೆಲ್ಲಾ ಬಗೆಹರಿಸಿ ನಾವು ನಮ್ಮ ಸಾಹಿತ್ಯಕ್ಕೆ ಒಂದು ಅಸ್ಮಿತೆಯನ್ನು ಕೊಡಬೇಕಾದ ಅಗತ್ಯ ಇದೆ. ನಮ್ಮಲ್ಲಿರುವ ಸ್ಥಳೀಯ ಭಾಷೆಗಳ ಮೇಲೆ ಆಂಗ್ಲಭಾಷೆ ಅಡ್ಡಿಯಾಗುತ್ತಿದ್ದು ಈ ಬಗ್ಗೆ ಎಚ್ಚರವಹಿಸಿ ಕೆಲಸ ಮಾಡಬೇಕಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ಸನ್ಮಾನಿಸಿರುವುದು ಖುಷಿ ತಂದಿತೆ. ಸನ್ಮಾನ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.
ಕವಿ ಸಿದ್ದಲಿಂಗಯ್ಯ ಮಾತನಾಡಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಡಾ.ಚಂದ್ರಶೇಖರ ಕಂಬಾರರು
ಆಯ್ಕೆಯಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಕಂಬಾರರಿಗೆ ಸಿಕ್ಕಿ ಗೆಲುವು ಕನ್ನಡಿಗರ ಗೆಲುವಾಗಿದೆ. ಕನ್ನಡ ಸೇರಿ ಎಲ್ಲಾ ಭಾಷೆಗಳ ರಕ್ಷಣೆ ಆಗಬೇಕಾಗಿದೆ ಎಂದರು.
ದೇಶಿ ಚಿಂತನೆಯ ಹರಿಕಾರರಾಗಿರುವ ಡಾ.ಚಂದ್ರಶೇಖರ ಕಂಬಾರ ಅವರು ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ
ಛಾಪನ್ನು ಮೂಡಿಸಿದ್ದಾರೆ. ಕಂಬಾರರ ಮಾರ್ಗದರ್ಶನ ಪಡೆದು ಕನ್ನಡ ಸಾಹಿತ್ಯ ಪರಿಷತ್ ಮತ್ತಷ್ಟು ಕೆಲಸ ಮಾಡಲಿದೆ.
ಮನು ಬಳಿಗಾರ್,ಕಸಾಪ ಅಧ್ಯಕ್ಷ