ಚಿಕ್ಕಮಗಳೂರು: ದೇಶಕ್ಕೆ ಒಬ್ಬ ವ್ಯಕ್ತಿಯಿಂದ ಸ್ವಾತಂತ್ರ್ಯ ಬಂದಿದೆ ಎಂದರೆ ತಪ್ಪಾಗುತ್ತದೆ. ಅಹಿಂಸೆ ಮತ್ತು ಕ್ರಾಂತಿಕಾರಿಗಳ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ನಗರದ ಸುಭಾಷ್‌ಚಂದ್ರ ಬೋಸ್ ಆಟದ ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್‌ಚಂದ್ರ ಬೋಸ್ ಬ್ರಿಟಿಷ್ ಸೈನ್ಯಕ್ಕೆ ಸಿಂಹಸ್ವಪ್ನವಾಗಿದ್ದರು. ಕೆಲವರು ಮುಂಚೂಣಿಯಲ್ಲಿ ಹೋರಾಟ ಮಾಡಿದರೆ ಕೆಲವರು ತೆರೆಮರೆಯಲ್ಲಿ ಹೋರಾಟ ಮಾಡಿದ್ದಾರೆ. ಅಹಿಂಸೆಯಿಂದ ಮಾತ್ರ ಸ್ವಾತಂತ್ರ್ಯ ಬಂದಿದೆ ಎಂದರೆ ಕ್ರಾಂತಿಕಾರಿಗಳ ಹೋರಾಟಕ್ಕೆ ಅವಮಾನವಾಗುತ್ತದೆ. ಇತಿಹಾಸವನ್ನು ಏಕಮುಖ ದಲ್ಲಿ ನೋಡದೆ ಸಮಗ್ರವಾಗಿ ನೋಡ ಬೇಕು. ಏಕವ್ಯಕ್ತಿಯಿಂದ ಸ್ವಾತಂತ್ರ್ಯ ಹೋರಾಟವಾಗಿದೆ ಎಂದರೆ ಸ್ವಾತಂತ್ರ್ಯ ಹೋರಾಟ
ಗಾರರಿಗೆ ಮಾಡುವ ಅಪಮಾನವಾ ಗುತ್ತದೆ. ಸಿದ್ದರಾಮಯ್ಯ ಸಂಕುಚಿತ ಮನೋಭಾವನೆ ಬಿಡಬೇಕು ಎಂದರು.
ಸಾವರ್ಕರ್ ಅವರು ಸೈನ್ಯಕ್ಕೆ ಸೇರುವಂತೆ ಭಾರತೀಯರಿಗೆ ಕರೆ ನೀಡಿದರು. ಅವರ ಪ್ರೇರಣೆಯಿಂದ ಸ್ವಾತಂತ್ರ್ಯದ ಬಳಿಕ ಪಾಕಿಸ್ಥಾನದ ಆಕ್ರಮಣವನ್ನು ಎದುರಿಸಲು ಮತ್ತು ಮೊದಲ ವಿಶ್ವಯುದ್ಧದಲ್ಲಿ ಭಾರತವನ್ನು ರಕ್ಷಿಸಲು ಸಾಧ್ಯವಾಯಿತು. ಸಾವರ್ಕರ್ ಬಗ್ಗೆ ಬ್ರಿಟಿಷರು ದಾಖಲಿಸಿರುವುದನ್ನು ಸಿದ್ದರಾಮಯ್ಯ ಅಧ್ಯಯನ ಮಾಡಲಿ. ಸಾವರ್ಕರ್ ಎರಡು ಕರಿನೀರಿನ ಶಿಕ್ಷೆಗೆ ಒಳಗಾದ ಏಕೈಕ ವ್ಯಕ್ತಿ. ಕರಿನೀರಿನ ಶಿಕ್ಷೆಗೂ ಸಾಧಾರಣ ಶಿಕ್ಷೆಗೂ ಇರುವ ವ್ಯತ್ಯಾಸ ಏನೆಂದು ಅನುಭವಿಸಿದವರಿಗೆ ಮಾತ್ರ ಗೊತ್ತು. ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಮೊದಲ ಮಹಾಯುದ್ಧ ಸಂದರ್ಭದಲ್ಲಿ ಬ್ರಿಟಿಷರಿಗೆ ಕಾಂಗ್ರೆಸ್ ಬೆಂಬಲ ನೀಡಿತು. ಹಾಗೆಂದು ಕಾಂಗ್ರೆಸ್ ದೇಶದ್ರೋಹಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ಹೇಳಿದರು.