ಹಳೆಯಂಗಡಿ: ತುಳುನಾಡು ದೇಶದ ದೇವರ ಕೋಣೆಯಂತೆ ಜಗತ್ತಿಗೆ ಮಾದರಿಯಾಗಿದೆ, ಪ್ರಕೃತಿಯಲ್ಲಿ ದೇವರನ್ನು ಕಾಣುವ ಏಕೈಕ ಸಂಪ್ರದಾಯ ನಮ್ಮದಾಗಿದೆ. ದೇವರ ನಂಬಿಕೆಯನ್ನು ವಿಶ್ವಾಸದಿಂದ ಕಾಣುವ ನಮ್ಮ ಪರಂಪರೆಯನ್ನು ಅನುಸರಿಸುವುದನ್ನು ಶ್ರೇಷ್ಠತೆಯಂತೆ ಬಿಂಬಿಸಲಾಗುತ್ತಿದೆ ಇಂತಹ ವಾತಾವರಣದಲ್ಲಿ ನಾವಿರುವುದು ನಮ್ಮ ಹೆಮ್ಮೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಧಾರ್ಮಿಕ ಉಪನ್ಯಾಸ ವೇ| ಮೂ| ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯ ಪೊಳಲಿ ವಿಶೇಷ ಧಾರ್ಮಿಕ ಉಪನ್ಯಾಸ ನೀಡಿ, ಪಂಚ ತತ್ವಗಳಲ್ಲಿ ಶಿವ ಚಿಂತನೆಯ ಬಗ್ಗೆ ಮಾತನಾಡಿದರು. ಮೂಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ ಸಾವಂತರು, ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್., ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು, ಧಾರ್ಮಿಕ ಪರಿಷತ್‌ನ ಸದಸ್ಯ ಭುವನಾಭಿರಾಮ ಉಡುಪ ಶುಭಹಾರೈಸಿದರು.
ಕ್ಷೇತ್ರದ ತಂತ್ರಿ ಉಡುಪಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಕೆಮ್ರಾಲ್ ಗ್ರಾ.ಪಂ. ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಿ. ಸೂರ್ಯಕುಮಾರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ್ ಎನ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನಾನಿಲ್, ದಾನಿಗಳಾದ ರತ್ನಾ ಜಿ. ಕಿರೋಡಿಯನ್, ಎಚ್. ಶಿವರಾಯ ಭಟ್ ಪಾವಂಜೆ, ಶಾಂತಾ ರಾಮ ಅಮೀನ್ ನಾನಿಲ್, ಲಕ್ಷ್ಮಣ ದೇವಾಡಿಗ ಪಡುಮನೆ ಉಪಸ್ಥಿತರಿದ್ದರು.
ಜತೆ ಕಾರ್ಯದರ್ಶಿ ರಾಮದಾಸ್ ಪಾವಂಜೆ ಸ್ವಾಗತಿಸಿದರು. ಸುಧಾಕರ ಆರ್. ಅಮೀನ್ ವಂದಿಸಿದರು. ಯಾದವ ದೇವಾಡಿಗ, ಎಚ್. ಭಾಸ್ಕರ ಸಾಲ್ಯಾನ್, ಜನಾರ್ದನ ಪಡು ಪಣಂಬೂರು, ಜಗದೀಶ್ ಫಲಿಮಾರ್, ಯೋಗೀಶ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.
ಭಕ್ತಿಧಾಮ ಕೇಂದ್ರಗಳಾಗಲಿ
ತೀರ್ಥಹಳ್ಳಿ ಬಾಳೆಗಾರು ಮಠದ ರಘುಭೂಷಣತೀರ್ಥ ಸ್ವಾಮೀಜಿ ಉದ್ಘಾಟಿಸಿ, ಮನುಷ್ಯತ್ವ ಇಲ್ಲದವ ಮನುಷ್ಯನೇ ಅಲ್ಲ, ಧಾರ್ಮಿಕ ಕ್ಷೇತ್ರಗಳು ಭಕ್ತಿಧಾಮ ಕೇಂದ್ರಗಳಾಗಲಿ ಎಂದರು.