Advertisement

ದೇಶ ಜಾಗತಿಕ ಉತ್ಪಾದಕ ಕೇಂದ್ರ: ರಾಷ್ಟ್ರಪತಿ ಬಣ್ಣನೆ

02:10 AM Feb 06, 2021 | Team Udayavani |

ಬೆಂಗಳೂರು: ಭಾರತ ಇಂದು ವೈಮಾನಿಕ ಮತ್ತು ರಕ್ಷಣ ಕ್ಷೇತ್ರದಲ್ಲಿ ಸ್ವಾವಲಂಬಿ ಮಾತ್ರವಲ್ಲ: ಜಾಗತಿಕವಾಗಿ “ಉತ್ಪಾದಕ ಕೇಂದ್ರ’ವಾಗುತ್ತಿದೆ. “ಏರೋ ಇಂಡಿಯಾ ಶೋ’ದ ಅಭೂತಪೂರ್ವ ಯಶಸ್ಸು ಇದಕ್ಕೆ ಸಾಕ್ಷಿ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ವಿಶ್ಲೇಷಿಸಿದರು.

Advertisement

ಯಲಹಂಕ ವಾಯುನೆಲೆಯಲ್ಲಿ ನಡೆದ ಮೂರು ದಿನಗಳ “ಏರೋ ಇಂಡಿಯಾ ಶೋ-2021’ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಶುಕ್ರವಾರ ಅವರು ಮಾತನಾಡಿದರು. ಭಾರತವು ವೈಮಾಂತರಿಕ್ಷ ಮತ್ತು ರಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿದ ಮಾರುಕಟ್ಟೆಗೆ ಸೀಮಿತವಾಗಿಲ್ಲ. ವಿಪುಲ ಅವಕಾಶಗಳ ತವರು ಕೂಡ ಆಗಿದೆ. ಹಾಗಾಗಿ ಕೊರೊನಾ ನಡುವೆಯೂ ಈ ಅಭೂತಪೂರ್ವ ಯಶಸ್ಸು ಸಾಧ್ಯವಾಗಿದೆ ಎಂದು ಬಣ್ಣಿಸಿದರು.

5 ವರ್ಷಗಳಲ್ಲಿ ದುಪ್ಪಟ್ಟು ವಿದೇಶಿ ಹೂಡಿಕೆ
ಆರು ವರ್ಷಗಳಿಂದ ಈಚೆಗೆ ಭಾರತವು ವ್ಯಾಪಾರ-ವಹಿವಾಟು ಸರಳಗೊಳಿಸುವುದಕ್ಕಾಗಿ ಸಾಕಷ್ಟು ನೀತಿ ಸುಧಾರಣೆ ಮತ್ತು ಬದಲಾವಣೆಗಳನ್ನು ತಂದಿದೆ. ರಕ್ಷಣ ಕ್ಷೇತ್ರದ ಉತ್ಪನ್ನಗಳ ತಯಾರಿಕೆ ಕೇಂದ್ರವನ್ನಾಗಿ ಭಾರತವನ್ನು ರೂಪಿಸಲು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಶೇ. 74ರಿಂದ ಶೇ. 100ರಷ್ಟು ಅವಕಾಶ ಕಲ್ಪಿಸಲಾಗಿದೆ. ರಫ್ತು ನೀತಿಗಳನ್ನು ಸರಳಗೊಳಿಸಲಾಗಿದೆ. ಉತ್ಪನ್ನಗಳ ತಯಾರಿಕೆಗೆ ಆದ್ಯತೆ ನೀಡಲಾಗಿದೆ. ಇವೆಲ್ಲದರ ಪರಿಣಾಮವಾಗಿ ಐದು ವರ್ಷಗಳಲ್ಲಿ ರಕ್ಷಣ ಮತ್ತು ವೈಮಾಂತರಿಕ್ಷ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣದಲ್ಲಿ ಶೇ. 200ರಷ್ಟು ಏರಿಕೆ ಕಂಡುಬಂದಿದೆ. ಜತೆಗೆ ಉದ್ಯೋಗ ಸೃಷ್ಟಿಯೂ ಆಗಿದೆ ಎಂದರು.

ವಿಶ್ವ ಶಾಂತಿ ಮತ್ತು ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲು ಭಾರತವು ಯಾವಾಗಲೂ ಸಿದ್ಧ. ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರಗಳಿಗಾಗಿ ಈಚೆಗೆ “ಸಾಗರ್‌’ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಇದರಡಿ ತಂತ್ರಜ್ಞಾನಗಳು, ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಶಾಂತಿ, ಭದ್ರತೆ ಮತ್ತು ಸಹಕಾರ ವೃದ್ಧಿಯೇ ಇದರ ಉದ್ದೇಶವಾಗಿದೆ ಎಂದು ರಾಷ್ಟ್ರಪತಿ ಹೇಳಿದರು.

ಮೂರು ದಿನಗಳಲ್ಲಿ ಸಾವಿರಾರು ಕೋಟಿ ರೂ. ಮೊತ್ತದ ನೂರಾರು ಒಡಂಬಡಿಕೆಗಳು ಆಗಿವೆ. ಇದರಲ್ಲಿ ನವೋದ್ಯಮ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 203 ಕೋಟಿ ಮೊತ್ತದ ಒಪ್ಪಂದಗಳು ಏರ್ಪಟ್ಟಿವೆ. 19 ತಂತ್ರಜ್ಞಾನಗಳ ವಿನಿಮಯ ಆಗಿವೆ. 18 ಉತ್ಪನ್ನಗಳು ಹಸ್ತಾಂತರಗೊಂಡಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಪ್ರದರ್ಶನ ಯಶಸ್ವಿಯಾಗಿದೆ.
– ರಾಜನಾಥ್‌ ಸಿಂಗ್‌, ರಕ್ಷಣ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next