Advertisement

Veerappa Moily; ದೇಶಕ್ಕೆ ಕ್ರಿಕೆಟ್‌ ಕಾಮೆಂಟ್ರಿಯನ್‌ ಬೇಕಿಲ್ಲ

12:25 AM Apr 23, 2024 | Team Udayavani |

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಘನತೆ ಕಾಪಾಡುತ್ತಿಲ್ಲ. ದೇಶ ರಕ್ಷಿಸುವ ಪ್ರಧಾನಿ ಬೇಕೇ ಹೊರತು ಕ್ರಿಕೆಟ್‌ ಕಾಮೆಂಟ್ರಿಯನ್‌ ಅಥವಾ ಇವೆಂಟ್‌ ಮ್ಯಾನೇಜರ್‌ ಬೇಕಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಕಾಂಗ್ರೆಸ್‌ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಏಕಚಕ್ರಾಧಿಪತಿಯಂತೆ ವರ್ತಿಸು ತ್ತಿದ್ದಾರೆ. ಹೀಗೆ ಮೆರೆದವರಲ್ಲಿ ಯಾರೂ ದೀರ್ಘ‌ಕಾಲ ಅಧಿಕಾರದಲ್ಲಿ ಇರಲಿಲ್ಲ. ಎನ್‌ಡಿಎ, ಬಿಜೆಪಿ ಎಲ್ಲ ಬಿಟ್ಟು ಬರೀ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಅಟಲ್‌ ಬಿಹಾರ ವಾಜಪೇಯಿ, ಅಡ್ವಾಣಿಯವರು ನೇಷನ್‌ ಫ‌ಸ್ಟ್‌, ಪಾರ್ಟಿ ನೆಕ್ಸ್ಟ್ ಆ್ಯಂಡ್‌ ಸೆಲ್ಫ್ ಲಾಸ್ಟ್‌ ಎನ್ನುತ್ತಿದ್ದರು. ಈಗ ಮೋದಿಯವರು ಅದನ್ನೆಲ್ಲ ಬದಲು ಮಾಡಿದ್ದಾರೆ. ಹಾಗಾಗಿ ಈ ಬಾರಿ ಬಿಜೆಪಿ 200 ಸೀಟು ಗೆಲ್ಲುವುದಿಲ್ಲ ಎಂದು ಹೇಳಿದರು.

ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಜಾರಿಗೆ ತರಲು ಮೋದಿಯವರು ಮುಂದಾಗಿದ್ದಾರೆ. ಲೋಕಸಭೆ ಚುನಾವಣೆ ನಡೆಸಲು ಮೂರು ತಿಂಗಳು ಬೇಕು. ಗ್ರಾ.ಪಂ., ತಾ.ಪಂ., ಜಿ.ಪಂ. ವಿಧಾನಸಭೆ, ಲೋಕಸಭೆ ಎಲ್ಲ ಒಟ್ಟಿಗೆ ನಡೆಸಲು ಒಂದು ವರ್ಷ ಬೇಕಾಗಬಹುದು. ಇದಕ್ಕಾಗಿ ಸಂವಿಧಾನ ತಿದ್ದುಪಡಿ, ಆಡಳಿತಾತ್ಮಕ ತಿದ್ದುಪಡಿ ತರಬೇಕು. ಇವೆಲ್ಲ ಸುಲಭದಲ್ಲಿ ಅನುಷ್ಠಾನವಾಗುವಂಥದ್ದಲ್ಲ ಎಂದರು.

ಈಗ ಕೇಂದ್ರದಲ್ಲಿ ನಡೆಯುತ್ತಿರುವ ಸರಕಾರದ ಬಗ್ಗೆ ಜನರಲ್ಲಿ ಹತಾಶೆ ಮೂಡಿದೆ. ಲಾವ ರಸದಂತೆ ಒಂದು ಶಕ್ತಿ ದೇಶಾದ್ಯಂತ ಗುಪ್ತವಾಗಿ ಸಂಚರಿಸುತ್ತಿದ್ದು, ಚುನಾವಣೆಯಲ್ಲಿ ಜ್ವಾಲಾಮುಖೀಯಂತೆ ಸ್ಫೋಟ ವಾಗಲಿದೆ. ಬಿಜೆಪಿ ಒಂದೊಂದು ಚುನಾವಣೆಗೂ ಒಂದೊಂದು ವಿಷಯ ತರುತ್ತದೆ. 2019ರಲ್ಲಿ ಸರ್ಜಿಲ್‌ ಸ್ಟ್ರೈಕ್‌ ಎಂದಿದ್ದರು. ಈಗ 3ನೇ ಅತಿದೊಡ್ಡ ಆರ್ಥಿಕತೆ ಎನ್ನುತ್ತಿದ್ದಾರೆ. ಆದರೆ, ಆರ್ಥಿಕವಾಗಿ ಚೀನಾ ತುಂಬಾ ಮುಂದಿದೆ ಎಂದು ವಿವರಿಸಿದರು.

ಸಮಸ್ಯೆ ಬಗೆಹರಿಸಿಲ್ಲ
ಅಡಿಕೆ ಬೆಳೆಗಾರರ ಸಮಸ್ಯೆ ಪರಿಹರಿಸಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗಿಲ್ಲ. ಅಡಿಕೆ ಬೆಲೆ ಕುಸಿತ ನಿಯಂತ್ರಣದಲ್ಲೂ ವಿಫ‌ಲವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರ ಬಂದ ಕೂಡಲೇ ಅಡಿಕೆಗೆ ಸಂಬಂಧಿಸಿದಂತೆ ಭೂತಾನ್‌ ಹಾಗೂ ಬರ್ಮಾದ ಜತೆ ಮಾಡಿಕೊಂಡ ಒಪ್ಪಂದವನ್ನು ರದ್ದು ಪಡಿಸಲಿದೆ ಎಂದರು.

Advertisement

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜಕುಮಾರ್‌, ನಟ ಶಿವರಾಜ ಕುಮಾರ್‌, ಪ್ರಮುಖರಾದ ಪ್ರಸಾದ್‌ ಕಾಂಚನ್‌, ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next