Advertisement

ವಿದೇಶ ತೊರೆದ ಯುವಕನಿಂದ ದೇಶಿ ಗೋವು ಸಾಕಾಣಿಕೆ!  

01:00 AM Mar 14, 2019 | Harsha Rao |

ಬ್ರಹ್ಮಾವರ: ದೇಶಿ ಗೋವುಗಳ ಹಾಲು ಆರೋಗ್ಯಕ್ಕೆ ಅತ್ಯಂತ ಉತ್ತಮ ಎನ್ನುವ ಜಾಗೃತಿ ಜನರಲ್ಲಿ ಮೂಡುತ್ತಿದೆ. ಇದಕ್ಕೆ ಪೂರಕವಾಗಿ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಬ್ರಹ್ಮಾವರದ ಯುವಕ ನಿಶಾನ್‌ ಡಿ’ಸೋಜ ಅವರು ಪಡುನೀಲಾವರದ ಬಾಯರ್‌ಬೆಟ್ಟಿನಲ್ಲಿ  ದೇಶೀಯ ಗೋವು ಸಾಕಾಣಿಕೆ ಕೇಂದ್ರ ಪ್ರಾರಂಭಿಸಿದ್ದಾರೆ.

Advertisement

ಸುಮಾರು ಒಂದು ವರ್ಷದ ಹಿಂದೆ ಪ್ರಾರಂಭಿಸಲಾದ ದೇಶಿ ತಳಿಗಳ ಕೇಂದ್ರ ಎನ್‌.ಎನ್‌. ಫಾಮ್ಸ್‌ìನಲ್ಲಿ ಪ್ರಸ್ತುತ 32 ದನಗಳು, 14 ಕರುಗಳಿವೆ.

ಗುಜರಾತ್‌ನ ಗಿರ್‌, ಪಂಜಾಬ್‌ನ ಸಾಹಿವಾಲ್‌, ರಾಜಸ್ಥಾನದ ರಾಟಿ, ಭಾರತ ಪಾಕಿಸ್ಥಾನ ಗಡಿ ಪ್ರದೇಶದ ರೆಡ್‌ಸಿಂಧಿ, ಸ್ಥಳೀಯವಾದ ಮಲೆನಾಡು ಗಿಡ್ಡ ಸೇರಿದಂತೆ ಸಂಪೂರ್ಣ ದೇಶೀ ತಳಿಯ ಹಸುಗಳು ಇಲ್ಲಿವೆ. 

ಕೃಷಿಯತ್ತ ಸೆಳೆತ 
ನಿಟ್ಟೆಯಲ್ಲಿ ಹೊಟೇಲ್‌ ಮೆನೇಜ್‌ಮೆಂಟ್‌ ಪದವಿ ಪಡೆದು ಬೆಂಗಳೂರಿನಲ್ಲಿ, ನಂತರ ಅಮೇರಿಕಾದಲ್ಲಿ 6 ವರ್ಷ ಉದ್ಯೋಗದಲ್ಲಿದ್ದರು. ಕೃಷಿ ಸೆಳೆತ ಹಾಗೂ ದೇಶೀಯ ಗೋವುಗಳ ಸಾಕಾಣಿಕೆ ಆಸಕ್ತಿಯಿಂದ ಮೂಲ ಮನೆ ಪಡು ನೀಲಾವರದಲ್ಲಿಎನ್‌.ಎನ್‌.ಫಾಮ್ಸ್‌ì ಪ್ರಾರಂಭಿಸಿದ್ದಾರೆ. ಇದಕ್ಕೂ ಮೊದಲು  ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಗೋವುಗಳನ್ನು ಖರೀದಿಸಿದರು.

ರಾಸಾಯನಿಕ ಮುಕ್ತ
ಆಧುನಿಕ ತಳಿಗಳ ಹಸುಗಳಿಗೆ ನೀಡುವ ಆಹಾರವೂ ರಾಸಾಯನಿಕ, ಸಂತಾನೋತ್ಪತ್ತಿಗೆ ನೀಡುವ ಇಂಜೆಕ್ಷನ್‌ ಕೂಡ ಅಪಾಯಕಾರಿ. ಆದರೆ ಇವರು ಬೇರೆ ಬೇರೆ ಧಾನ್ಯಗಳನ್ನು ಬಳಸಿ ತಾವೇ ತಯಾರಿಸಿದ ಆಹಾರವನ್ನು ನೀಡುತ್ತಾರೆ. ಹಸಿ ಹುಲ್ಲು ಬೆಳೆಸುತ್ತಾರೆ. ದೇಶೀ ತಳಿಯ ಹೋರಿಯನ್ನು ಸಾಕಿದ್ದಾರೆ. ಹಸುಗಳನ್ನು ಬಿಸಿಲಿಗೆ ಬಿಡುತ್ತಾರೆ. ಭುಜದಲ್ಲಿರುವ ಸೂರ್ಯಕೇತು ನಾಡಿಗೆ ಬಿದ್ದ ಬಿಸಿಲು ಶಕ್ತಿಯಾಗಿ ಪರಿವರ್ತಿತವಾಗುತ್ತದೆ. ಇದರಿಂದ ಹಾಲಿನ ಗುಣಮಟ್ಟ ಜಾಸ್ತಿಯಾಗುತ್ತದೆ ಎನ್ನುತ್ತಾರೆ. 

Advertisement

ಅಷ್ಟು ಸುಲಭವಲ್ಲ
ದೇಶಿ ತಳಿಗಳ ಹಸು ಸಾಕಾಣಿಕೆ ಅಷ್ಟು ಸುಲಭವಲ್ಲ. ಸಾಧಾರಣವಾಗಿ 70ರಿಂದ 80,000 ರೂ. ಮೌಲ್ಯವನ್ನು ಹೊಂದಿವೆ. ಗರಿಷ್ಠ 8 ಲೀ. ಹಾಲನ್ನು ಮಾತ್ರವೇ ನೀಡುತ್ತವೆ. ಜತೆಗೆ ಸಾಕಾಣಿಕೆ, ನಿರ್ವಹಣೆ ಖರ್ಚು. ಆದರೆ ಹಾಲು ಉತ್ಕೃಷ್ಟ ಗುಣಮಟ್ಟವನ್ನು ಹೊಂದಿರುವುದರಿಂದ ದರವನ್ನು ಪರಿಗಣಿಸಬಾರದು ಎನ್ನುತ್ತಾರೆ ನಿಶಾನ್‌. ಪ್ರಸ್ತುತ ಉಡುಪಿ, ಮಣಿಪಾಲದಲ್ಲಿ ಸೇರಿದಂತೆ ಸುಮಾರು 40 ಗ್ರಾಹಕರಿದ್ದಾರೆ. ಜನರಲ್ಲಿ ಆರೋಗ್ಯ ಜಾಗೃತಿ ಹೆಚ್ಚುತ್ತಿರುವುದರಿಂದ ಬೇಡಿಕೆ ಹೆಚ್ಚುತ್ತಿದೆ. ಗೋದೇಶೀ ಹೆಸರಿನಲ್ಲಿ ಹಾಲು ಪೂರೈಕೆಯಾಗುತ್ತಿದೆ.

ಯಾಕೆ ಉತ್ತಮ..?
ದೇಶೀಯ ತಳಿಗಳ ಹಾಲು ಅತ್ಯಂತ ಉತ್ಕೃಷ್ಟ ಗುಣಮಟ್ಟವನ್ನು ಹೊಂದಿದೆ. ದೇಹಕ್ಕೆ ಬೇಕಾದ ಅಂಶಗಳನ್ನು ಪೂರೈಸುವುದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೆರ್ಸಿ ದನಗಳ ಹಾಲಿನಲ್ಲಿ ದೇಹಕ್ಕೆ ಹಾನಿಕಾರಕವಾದ ಬಿಸಿಎಂ7 ಉತ್ಪತ್ತಿಯಾದರೆ, ದೇಶೀ ತಳಿಗಳಲ್ಲಿ ಆರೋಗ್ಯಕರವಾದ ಎ2 ಪ್ರೋಟೀನ್‌ ಮಾತ್ರ ಉತ್ಪತ್ತಿಯಾಗುತ್ತದೆ. ಸಾಧ್ಯವಾದಷ್ಟು ಜನರಿಗೆ ಆರೋಗ್ಯಕರವಾದ ದೇಶಿ ತಳಿಗಳ ಹಾಲನ್ನು ನೀಡಬೇಕೆನ್ನುವ ಉದ್ದೇಶದಿಂದ ಸಂಸ್ಥೆ ಪ್ರಾರಂಭಿಸಿದರು. ಇತ್ತೀಚೆಗೆ ಕೋಟ ಹಾಗೂ ಎಳ್ಳಂಪಳ್ಳಿಯಲ್ಲಿ ನಡೆದ ಜಾನುವಾರು ಪ್ರದರ್ಶನದಲ್ಲಿ ಇವರ ಗೋವುಗಳು ಹಲವು ಬಹುಮಾನಗಳನ್ನೂ ಪಡೆದುಕೊಂಡಿವೆ.

ಸರಕಾರದ ಪ್ರೋತ್ಸಾಹ ಅಗತ್ಯ
 ದೇಶೀ ತಳಿ ಗೋವುಗಳ ಸಾಕಾಣಿಕೆದಾರರಿಗೆ ಸರಕಾರದ ಪ್ರೋತ್ಸಾಹ ಅತೀ ಅವಶ್ಯ. ಸಂಘ ಸಂಸ್ಥೆಗಳಿಗಿಂತ ಮುಖ್ಯವಾಗಿ ಖಾಸಗಿ ಸಾಕಾಣಿಕೆದಾರರಿಗೆ ಮಾನ್ಯತೆ ನೀಡಬೇಕು. ಆಗ ಉತ್ಕೃಷ್ಟ ಹಾಲನ್ನು ಗ್ರಾಹಕರಿಗೆ ಎಟಕುವ ದರದಲ್ಲಿ ನೀಡಬಹುದು.  
 -ನಿಶಾನ್‌ ಡಿ’ಸೋಜ ದೇಶೀ ಗೋವು ಸಾಕಾಣಿಕೆದಾರರು

Advertisement

Udayavani is now on Telegram. Click here to join our channel and stay updated with the latest news.

Next