ಭೋಪಾಲ್: ವಿಧಾನಸಭಾ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಪಕ್ಷದ ‘ಮೇರಾ ಬೂತ್ ಸಬ್ಸೆ ಮಜ್‌ಬೂತ್’ ಅಭಿಯಾನದ ಅಡಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಸ್ಲಾಂನಲ್ಲಿ ‘ತ್ರಿವಳಿ ತಲಾಖ್’ ವಿಲಕ್ಷಣವಾಗಿದ್ದರೆ, ಅದನ್ನು ಮುಸ್ಲಿಮರೇ ಹೆಚ್ಚಿರುವ ಈಜಿಪ್ಟ್, ಇಂಡೋನೇಷಿಯಾ, ಕತಾರ್, ಜೋರ್ಡಾನ್, ಸಿರಿಯಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ದೇಶಗಳಲ್ಲಿ ಏಕೆ ಆಚರಣೆಯಲ್ಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಭಾಗವಾಗಿರುವ ಏಕರೂಪ ನಾಗರಿಕ ಸಂಹಿತೆ ಪರವಾಗಿ ಬ್ಯಾಟ್ ಬೀಸಿದ ಅವರು, “ಒಂದು ಕುಟುಂಬದ ವಿವಿಧ ಸದಸ್ಯರಿಗೆ ವಿಭಿನ್ನ ನಿಯಮಗಳು ಕೆಲಸ ಮಾಡುವುದಿಲ್ಲ. ಹಾಗೆ ದೇಶವು ಎರಡು ಕಾನೂನುಗಳ ಮೇಲೆ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಶೇ 90 ರಷ್ಟು ಸುನ್ನಿ ಮುಸ್ಲಿಮರಿರುವ ಈಜಿಪ್ಟ್ 80 ರಿಂದ 90 ವರ್ಷಗಳ ಹಿಂದೆ ತ್ರಿವಳಿ ತಲಾಖ್ ರದ್ದುಗೊಳಿಸಿದೆ ಎಂದು ಅವರು ಗಮನಸೆಳೆದರು.
ತ್ರಿವಳಿ ತಲಾಖ್ ಪರವಾಗಿ ಮಾತನಾಡುವವರು ವೋಟ್ ಬ್ಯಾಂಕ್ ಗಾಗಿ ಮಾಡುತ್ತಿದ್ದಾರೆ. ಆದರೆ ಅವರು ಮುಸ್ಲಿಂ ಸಹೋದರಿಯರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ:Mangaluru: ಜನರ ಭಾವನೆಗಳಿಗೆ ವಿರುದ್ಧವಾಗಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ: ಕಟೀಲ್
ತ್ರಿವಳಿ ತಲಾಖ್ ಮಹಿಳೆಯರಿಗೆ ಮಾತ್ರವಲ್ಲ, ಇಡೀ ಕುಟುಂಬವನ್ನು ನಾಶಪಡಿಸುತ್ತದೆ ಎಂದು ಅವರು ಹೇಳಿದರು. ಕುಟುಂಬದವರು ಬಹಳ ಭರವಸೆಯಿಂದ ಯುವತಿಗೆ ಮದುವೆ ಮಾಡಿ ಕಳುಹಿಸುತ್ತಾರೆ, ಆದರೆ ತ್ರಿವಳಿ ತಲಾಖ್ ನಂತರ ವಾಪಸ್ ಕಳುಹಿಸಿದರೆ, ಪೋಷಕರು ಮತ್ತು ಸಹೋದರರು ಮಹಿಳೆಯ ಬಗ್ಗೆ ಕಾಳಜಿಯಿಂದ ನೋವು ಅನುಭವಿಸುತ್ತಾರೆ ಎಂದರು.
“ಕೆಲವರು ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ತ್ರಿವಳಿ ತಲಾಖ್ ಅನ್ನು ನೇತುಹಾಕಲು ಬಯಸುತ್ತಾರೆ, ಅವರನ್ನು ದಬ್ಬಾಳಿಕೆ ಮಾಡಲು ಮುಕ್ತ ಅವಕಾಶವನ್ನು ಹೊಂದಲು ಬಯಸುತ್ತಾರೆ. ಈ ಜನರು ತ್ರಿವಳಿ ತಲಾಖ್ ಅನ್ನು ಬೆಂಬಲಿಸುತ್ತಾರೆ” ಎಂದು ಪ್ರಧಾನಿ ಮೋದಿ ಹೇಳಿದರು.
ಅದಕ್ಕಾಗಿಯೇ ಮುಸ್ಲಿಂ ಸಹೋದರಿಯರು ಮತ್ತು ಹೆಣ್ಣುಮಕ್ಕಳು, ನಾನು ಎಲ್ಲಿಗೆ ಹೋದರೂ ಬಿಜೆಪಿ ಮತ್ತು ಮೋದಿಯೊಂದಿಗೆ ನಿಲ್ಲುತ್ತಾರೆ ಎಂದು ಅವರು ಹೇಳಿದರು.