Advertisement

ವಿಜೃಂಭಣೆಯ ಶ್ರೀರಂಗಪಟ್ಟಣ ದಸರೆಗೆ ಕ್ಷಣಗಣನೆ

04:44 PM Oct 16, 2018 | Team Udayavani |

ಶ್ರೀರಂಗಪಟ್ಟಣ: ಮಂಗಳವಾರದಿಂದ ಆರಂಭವಾಗಲಿರುವ ಶ್ರೀರಂಗಪಟ್ಟಣದ ದಸರಾ ಮಹೋತ್ಸವದಲ್ಲಿ ನಾಡ ದೇವತೆ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುಷ್ಪಾರ್ಚನೆ ಮಾಡಲಿದ್ದಾರೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

Advertisement

ಶ್ರೀರಂಗಪಟ್ಟಣದ ಪಾರಂಪರಿಕ ದಸರೆಗೆ ಕ್ಷಣಗಣನೆ ಶುರುವಾಗಿದೆ. ದಸರಾ ಹಿನ್ನೆಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಜಿಲ್ಲಾಡಳಿತ ಬಿರುಸಿನಿಂದ ನಡೆಸಿ ದಸರಾ ಆಚರಣೆಗೆ ಸರ್ವ ರೀತಿಯಲ್ಲೂ ಸಜ್ಜಾಗಿದೆ ಎಂದು ಪತ್ರಕರ್ತರಿಗೆ ವಿವರಿಸಿದರು. ಕಿರಂಗೂರು ಬನ್ನಿ ಮಂಟಪದ
ಬಳಿ ಮಧ್ಯಾಹ್ನ 12ರಿಂದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಹಾಗೂ ಪೂಜೆಯನ್ನು ಜ್ಯೋತಿಷಿ ಡಾ.ಭಾನುಪ್ರಕಾಶ್‌ ನೆರವೇರಿಸುವರು. ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಾಡದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿ
ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡುವರು ಎಂದರು.

ನಂತರ ಕಿರಂಗೂರು ಬನ್ನಿ ಮಂಟಪದಿಂದ ಮೈಸೂರು- ಬೆಂಗಳೂರು ಹೆದ್ದಾರಿಯ ಮೂಲಕ ದಸರಾ ಅಂಬಾರಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಚಲನಚಿತ್ರ ನಿರ್ದೇಶಕ ನಾಗಾಭರಣ ಹಾಗೂ ಹಾಸ್ಯ ಸಾಹಿತಿ ಪ್ರೊ.ಕೃಷ್ಣೇಗೌಡ ಉಪಸ್ಥಿತರಿರುವರು. ಅಂಬಾರಿ ಹೊತ್ತ ಜಂಬೂಸವಾರಿ
ಮೆರವಣಿಗೆ ಹೆದ್ದಾರಿಯಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿ ಶ್ರೀರಂಗನಾಥ ಮೈದಾನದಲ್ಲಿರುವ ವೇದಿಕೆ ತಲುಪುತ್ತದೆ ಎಂದು ಮಾಹಿತಿ ನೀಡಿದರು.

ರಸ್ತೆ ದುರಸ್ತಿ: ದಸರಾ ಮೆರವಣಿಗೆ ಸಾಗುವ ಕಿರಂಗೂರು ಗ್ರಾಮದರಸ್ತೆಯಲ್ಲಿದ್ದ ಹಳ್ಳ-ಗುಂಡಿಗಳನ್ನು ಮುಚ್ಚಿ ಕಾಯಕಲ್ಪ ನೀಡಲಾಗಿದೆ. ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಮೈಸೂರು-ಬೆಂಗಳೂರು ಹೆದ್ದಾರಿ ಸಂಪೂರ್ಣ ಶುಚಿಗೊಳಿಸಿ ಸುಣ್ಣ-ಬಣ್ಣ ಬಳಿದು ಸಿಂಗರಿಸಲಾಗಿದೆ.

ದೀಪಾಲಂಕಾರ: ಈಗಾಗಲೇ ಸೆಸ್ಕ್ ಕಿರಂಗೂರಿನ ಹೆದ್ದಾರಿ, ಪಟ್ಟಣದ ಕೋಟೆ ಪ್ರವೇಶದ್ವಾರ, ಶ್ರೀರಂಗನಾಥ ಮೈದಾನ ಸೇರಿದಂತೆ ಹಲವು ಕಡೆ ಸ್ವಾಗತ ಕಮಾನುಗಳನ್ನು ನಿರ್ಮಾಣ ಮಾಡಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ವೇಳೆ ಐತಿಹಾಸಿಕ ಪಟ್ಟಣ ಬಣ್ಣಬಣ್ಣದ ದೀಪಗಳಿಂದ ಝಗಮಗಿಸುತ್ತಿದೆ.

Advertisement

ಸ್ಥಳೀಯ ಕಲಾವಿದರು: ಈ ಬಾರಿ ನಡೆಯುವ ದಸರಾ ಕಾರ್ಯಕ್ರಮದಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸ್ಥಳೀಯ ಕಲಾವಿದರು ಸೇರಿದಂತೆ ವಿವಿಧ ಹೆಸರಾಂತ ಕಿರುತೆರೆ ನಟರು ಹಾಗೂ ಹಿರಿಯ ಕಲಾವಿದರಿಂದ
ವೇದಿಕೆಯಲ್ಲಿ ನಡೆಯುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ವೇದಿಕೆಯ ಮುಂಭಾಗದ ಆವರಣದ ಒಂದು ಭಾಗದಲ್ಲಿ ಸ್ಥಳೀಯ ಗ್ರಾಮಗಳಲ್ಲಿ ತಯಾರಿಸುವ ಸಿದ್ಧ ಉಡುಪುಗಳು, ಮೈಸೂರು ಸಿಲ್ಕ್ ಡಿಜೈನರ್‌ ಸ್ಯಾರಿ ಹಾಗೂ ಕೊಡಿಯಾಲದ ನೇಯ್ಗೆಯವರು ತಯಾರಿಸುವ ಬಟ್ಟೆಗಳ ಪ್ರದರ್ಶನ, ಸ್ಥಳೀಯರಿಂದ ತಯಾರಾಗುವ ವಿವಿಧ ಕುಲ ಕಸುಬುಗಳ
ಪ್ರದರ್ಶನಕ್ಕೆ ಅವಕಾಶ ಒದಗಿಸಿದೆ.

ಶ್ರೀರಂಗಪಟ್ಟಣ ದಸರೆಯ ಮೆರವಣಿಗೆ ಬಳಿಕ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ಆರಂಭವಾಗುವ ವೇದಿಕೆಯನ್ನು ಭರ್ಜರಿಯಾಗಿ ಸಿದ್ಧಪಡಿಸಲಾಗುತ್ತಿದೆ. ಶ್ರೀರಂಗನಾಥ ಮೈದಾನದಲ್ಲಿ ಬೃಹತ್‌ ವೇದಿಕೆ ಸಿದ್ಧಪಡಿಸುವ ಕಾರ್ಯದಲ್ಲಿ ಹಲವು ಕಾರ್ಮಿಕರು ನಿರತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next