Advertisement

ಮೈತ್ರಿ ಸರ್ಕಾರ ಪತನಕ್ಕೆ ಕ್ಷಣಗಣನೆ: ಈಶ್ವರಪ್ಪ

10:43 AM Jul 02, 2019 | Suhan S |

ಶಿವಮೊಗ್ಗ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಮೈತ್ರಿ ಸರ್ಕಾರ ಅಭದ್ರವಾಗಿದ್ದು, ಪಥನವಾಗುವ ಕ್ಷಣಗಣನೆ ಆರಂಭವಾಗಿದೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಜಿಲ್ಲಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆನಂದ್‌ ಸಿಂಗ್‌ ಈಗಾಗಲೇ ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಇದು ರಾಜ್ಯ ಸರ್ಕಾರ ಪಥನವಾಗುವ ಲಕ್ಷಣ ತೋರಿಸುತ್ತದೆ ಎಂದರು. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಈ ಸರ್ಕಾರ ಎಂದು ಬೀಳುತ್ತದೆ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರೇ ಕೇಳುತ್ತಿದ್ದಾರೆ. ಆ ಮಟ್ಟದಲ್ಲಿ ಸರ್ಕಾರದ ನಿಲುವುಗಳು ಶಾಸಕರನ್ನು ರೋಸಿಗೆ ಸಿಲುಕಿಸಿವೆ ಎಂದು ಹೇಳಿದರು.

ಐಎಂಎ ಹಗರಣವನ್ನು ಎಸ್‌ಐಟಿಗೆ ವಹಿಸಿದರೆ ಹೆಚ್ಚು ಪ್ರಯೋಜನವಾಗುವುದಿಲ್ಲ. ಇದರಲ್ಲಿ ಜಮೀರ್‌ ಅಹಮ್ಮದ್‌ರಂಥ ಸಚಿವರು ಸೇರಿಕೊಂಡಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆಗ ಸತ್ಯ ಹೊರಬರುತ್ತದೆ ಎಂದರು. ರಾಜ್ಯದಲ್ಲಿ ಬರಗಾಲ ವಿಪರೀತವಾಗಿದೆ. ಆದರೆ ಮುಖ್ಯಮಂತ್ರಿ ಸೇರಿದಂತೆ ಯಾವೊಬ್ಬ ಸಚಿವರು ಇದರ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ. ಬರ ಸ್ಥಿತಿಯಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೂಡಲೇ ಜನರ ನೆರವಿಗೆ ಬರಬೇಕಿದ್ದ ಸರ್ಕಾರ ನಿಷ್ಕ್ರಿಯವಾಗಿ ವರ್ತಿಸುತ್ತಿದೆ ಎಂದು ಟೀಕಿಸಿದರು.

ಆಯನೂರು ಮಂಜುನಾಥ್‌ ಮಾತನಾಡಿ, ಆನಂದ್‌ಸಿಂಗ್‌ ರಾಜೀನಾಮೆ ವಿಚಾರ ಇದೀಗ ಹೊರಬೀಳುತ್ತಿದ್ದು, ಇದು ಸರ್ಕಾರದ ಫೌಂಡೇಶನ್‌ ಅಲ್ಲಾಡುತ್ತಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಅಪವಿತ್ರ ಮೈತ್ರಿ ಮೂಲಕ ಸರ್ಕಾರ ರಚಿಸಿರುವ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನವರು ಇದೀಗ ಹೊಂದಾಣಿಕೆಯ ಕೊರತೆಯಿಂದಾಗಿ ಸರ್ಕಾರ ಅಲ್ಲಾಡುವಂತಾಗಿದೆ ಎಂದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮಾತನಾಡಿ, ಸರಕಾರ ಅಲ್ಪಮತಕ್ಕೆ ಕುಸಿದರೆ ಬಿಜೆಪಿ ಸರಕಾರ ರಚಿಸಲಿದೆ. ಬಿಜೆಪಿ ಪಕ್ಷ ಮಧ್ಯಂತರ ಚುನಾವಣೆ ಬಯಸೋದಿಲ್ಲ. ಪದೇ ಪದೇ ಚುನಾವಣೆಯಿಂದ ಸರಕಾರದ ಬೊಕ್ಕಸಕ್ಕೆ ನಷ್ಟ. ಮೊನ್ನೆ ಲೋಕಸಭಾ ಚುನಾವಣೆ ನಡೆದಿದೆ. ಶಾಸಕ ಆನಂದ್‌ ಸಿಂಗ್‌ ರಾಜೀನಾಮೆಯನ್ನು ಸ್ವಾಗತಿಸುತ್ತೇವೆ. ಯಾರೇ ಶಾಸಕರು ರಾಜೀನಾಮೆ ಕೊಟ್ಟರು ಸ್ವಾಗತ ಮಾಡುತ್ತೇವೆ ಎಂದರು.

Advertisement

ಶಾಸಕ ಕುಮಾರ್‌ ಬಂಗಾರಪ್ಪ ಮಾತನಾಡಿ, ಜೆಡಿಎಸ್‌ ಸಹವಾಸ ಮಾಡಿದವರು ಯಾರೂ ಉದ್ಧಾರ ಆಗುವುದಿಲ್ಲ. ಕಾಂತ್ರಿರಂಗದ ಕಾಲದಿಂದಲೂ ನಾವು ಇದನ್ನು ನೋಡಿದ್ದೇವೆ. ಮುಖ್ಯಮಂ ಕುಮಾರಸ್ವಾಮಿ ಒಂದು ವರ್ಷ ಅಧಿಕಾರವನ್ನು ಸ್ಟಾರ್‌ ಹೋಟೆಲ್ನಲ್ಲಿ ನಡೆಸಿದರು. ಬಳಿಕ ತೋರಿಕೆಗಾಗಿ ಒಂದು ವಾರ ಗ್ರಾಮ ವಾಸ್ತವ್ಯ ಮಾಡಿದರು. ಇದೀಗ ಪ್ಯಾಕೇಜ್‌ ಟೂರ್‌ನಲ್ಲಿ ಸಿಎಂ ವಿದೇಶಕ್ಕೆ ಹೋಗಿದ್ದಾರೆ. ಆನಂದ ಸಿಂಗ್‌ ರಾಜೀನಾಮೆಯನ್ನು ಸ್ವಾಗತಿಸುತ್ತೇನೆ ಎಂದರು.

ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಚಂದುಲಾಲ್, ಚಮನ್‌ ಲಾಲ್ ಸರಕಾರ ಇದು. ನಂಗಿಷ್ಟು ನಿಂಗಿಷ್ಟು ಎಂದು ಪಾನ್‌ ಬ್ರೋಕರ್‌ಗಳ ರೀತಿ ಅಧಿಕಾರ ನಡೆಸುತ್ತಿದ್ದಾರೆ. ನನ್ನ ಬಳಿಯೂ ಬೇರೆ ಪಕ್ಷದ ಅತೃಪ್ತ ಶಾಸಕರು ಅಸಮಾಧಾನ ಹೇಳಿಕೊಂಡಿದ್ದಾರೆ. ಸರಕಾರ ಇದೆ ಅಂತ ಯಾರಿಗೂ ಅನಿಸಿಲ್ಲ. ಸರ್ಕಾರ ವಕ್ಕಾಲಿಯಲ್ಲಿ ನಡೆಯುತ್ತಿದೆ. ತುಂಬಾ ದಿನ ಈ ಸರ್ಕಾರ ಇರಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಈಗ ಆನಂದ್‌ ಸಿಂಗ್‌ ರಾಜೀನಾಮೆ ನೀಡಿದ್ದಾರೆ. ಅಸಮಾಧಾನವಾಗಿ ಆಡಳಿತ ಪಕ್ಷದ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ ಅಷ್ಟೇ. ಸಣ್ಣಪುಟ್ಟ ತಪ್ಪುಗಳಿಗೆ ರಾಜೀನಾಮೆ ಕೊಟ್ಟಿದ್ದೇವೆ. ಬಳಿಕ ತನಿಖೆ ಎದುರಿಸಿ ನಾವು ತಪ್ಪು ಮಾಡಿಲ್ಲ ಎಂದು ನಿರೂಪಿಸಿದ್ದೇವೆ. ಐಎಂಎ ಆರೋಪದ ಹಿನ್ನೆಲೆಯಲ್ಲಿ ಸಚಿವ ಜಮೀರ್‌ ಅಹಮ್ಮದ್‌ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಆಗ್ರಹಿಸಿದರು.

ಶಾಸಕ ಅಶೋಕ್‌ ನಾಯ್ಕ, ಮಾಜಿ ಶಾಸಕರಾದ ಬಿ.ಸ್ವಾಮಿರಾವ್‌, ಭಾನುಪ್ರಕಾಶ್‌, ಆರ್‌.ಕೆ. ಸಿದ್ದರಾಮಣ್ಣ, ಭಾರತಿ ಶೆಟ್ಟಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next