Advertisement
ಚುನಾವಣೆಗೂ ಹಿಂದಿನ ತಿಂಗಳಾನುಗಟ್ಟಲೆಯ ಪಕ್ಷಗಳ ಸೋಲು-ಗೆಲುವಿನ ಲೆಕ್ಕಾ ಚಾರ, ಮತದಾನ ಮುಗಿದ ಬಳಿಕದ ಸುದೀರ್ಘ 35 ದಿನಗಳ ಕಾತರ, ಕುತೂಹಲಕ್ಕೆ ತೆರೆ ಬೀಳಲು ಕ್ಷಣಗಣನೆ ಶುರುವಾಗಿದೆ. ಸುರತ್ಕಲ್‌ನ ಎನ್‌ಐಟಿಕೆ ಮತ್ತು ಉಡುಪಿ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಗೊಳ್ಳಲಿದೆ.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಈ ಬಾರಿ 13,43,378 ಮಂದಿ ಮತ ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ 17,24,460 ಮತದಾರರಿದ್ದು, ಶೇ.77.90 ಮತದಾನವಾಗಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಶೇ.77.19 ಮತ್ತು 2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು ಶೇ.77.63 ಮತದಾನವಾಗಿತ್ತು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 15,13,940 ಮಂದಿ ಮತದಾರರಿದ್ದು, ಶೇ. 75.8 ಮತದಾನವಾಗಿತ್ತು. 2014ರಲ್ಲಿ ಶೇ. 74.46 ಮತದಾನವಾಗಿತ್ತು.
Related Articles
ದ.ಕ.ದಲ್ಲಿ ಬಿಜೆಪಿ, ಕಾಂಗ್ರೆಸ್, ಎಸ್‌ಡಿಪಿಐ, ಬಿಎಸ್‌ಪಿ, ಉತ್ತಮ ಪ್ರಜಾಕೀಯ ಪಾರ್ಟಿ, ಹಿಂದೂಸ್ತಾನ್ ಜನತಾ ಪಾರ್ಟಿ ಮತ್ತು 7 ಮಂದಿ ಪಕ್ಷೇತರರು ಸೇರಿದಂತೆ ಒಟ್ಟು 13 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಇವರಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲು ಮತ್ತು ಕಾಂಗ್ರೆಸ್‌ನ ಮಿಥುನ್ ಎಂ. ರೈ ನಡುವೆ ನಿಕಟ ಹಣಾಹಣಿ ನಿರೀಕ್ಷಿತ.
Advertisement
12 ಅಭ್ಯರ್ಥಿಗಳ ಭವಿಷ್ಯಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರಮೋದ್ ಮಧ್ವರಾಜ್, ಬಿಜೆಪಿಯ ಶೋಭಾ ಕರಂದ್ಲಾಜೆ ಅವರ ನಡುವೆ ನಿಕಟ ಸ್ಪರ್ಧೆ ನಿರೀಕ್ಷಿಸಲಾಗಿದೆ. ಉಳಿದಂತೆ ಶಿವಸೇನೆ, ಪ್ರೌಟಿಸ್ಟ್ ಸರ್ವ ಸಮಾಜ, ಸಿಪಿಐ (ಎಂ.ಎಲ್.) ರೆಡ್‌ಸ್ಟಾರ್, ಉತ್ತಮ ಪ್ರಜಾಕೀಯ ಪಾರ್ಟಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ, ಪಕ್ಷೇತರರು ಸೇರಿದಂತೆ ಒಟ್ಟು 12 ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಪಕ್ಷೇತರನಾಗಿ ಸ್ಪರ್ಧಿಸಿದ್ದರು. ಸಮೀಕ್ಷೆಗಳ ಫಲಿತಾಂಶದಿಂದ ಉತ್ಸಾಹ ಗೊಂಡಿರುವ ಬಿಜೆಪಿ ಪಾಳಯದಲ್ಲಿ ಗೆಲುವಿನ ಲೆಕ್ಕಾಚಾರ ಗರಿಗೆದರಿದೆ. ಕಾಂಗ್ರೆಸ್ ಮುಖಂಡ ರಾಗಿ ಜೆಡಿಎಸ್‌ನಿಂದ ಸ್ಪರ್ಧಿಸಿರುವ “ಮೈತ್ರಿ ಅಭ್ಯರ್ಥಿ’ ಪ್ರಮೋದ್ ಮಧ್ವರಾಜ್ ಅವರ ಗೆಲುವಿನ ಕುರಿತಾದ ಚರ್ಚೆಗಳು ಕೂಡ ನಡೆಯುತ್ತಿವೆ. ಗೆಲುವಿನ ಲೆಕ್ಕಾಚಾರ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಪ್ರಮಾಣದಲ್ಲಿ ಆಗಿರುವ ಹೆಚ್ಚಳ ಮತ್ತು ಕ್ಷೇತ್ರದಲ್ಲಿ ವ್ಯಕ್ತವಾಗಿರುವ ರಾಜಕೀಯ ಟ್ರೆಂಡ್‌ಗಳನ್ನು ಮೂಲವಾಗಿರಿಸಿಕೊಂಡು ಗೆಲುವಿನ ಸಾಧ್ಯತೆಗಳ ಬಗ್ಗೆ ಲೆಕ್ಕಾಚಾರ ನಡೆಯುತ್ತ ಬಂದಿದೆ. ಜತೆಗೆ ಗರಿಷ್ಠ ಮತದಾನವಾದರೆ ಯಾವ ರಾಜಕೀಯ ಪಕ್ಷಕ್ಕೆ ಹೆಚ್ಚು ಅನುಕೂಲ ಎಂಬ ಬಗ್ಗೆ ಈ ಹಿಂದಿನ ಅಂಕಿಅಂಶಗಳನ್ನು ಆಧರಿಸಿಕೊಂಡು ವಿವಿಧ ಕೋನಗಳಿಂದ ವಿಶ್ಲೇಷಣೆಗಳು ನಡೆದಿವೆ.