Advertisement

ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್‌ ಕಾಲೇಜುಗಳ ಉಪನ್ಯಾಸಕರ ವರ್ಗಕ್ಕೆ ಕೌನ್ಸೆಲಿಂಗ್: ಡಿಸಿಎಂ

06:51 PM Jan 31, 2021 | Team Udayavani |

ಬೆಂಗಳೂರು: ಸರ್ಕಾರಿ ಪದವಿ, ಎಂಜಿನಿಯರಿಂಗ್‌ ಮತ್ತು ಡಿಪ್ಲೊಮಾ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಕೌನ್ಸೆಲಿಂಗ್ ಮೂಲಕ ನಡೆಯಲಿದ್ದು, ಒಟ್ಟು ಬೋಧನಾ ಸಿಬ್ಬಂದಿಯ ಪೈಕಿ ಶೇ.15ರಷ್ಟು ಮೀರದಂತೆ ವರ್ಗಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement

ಈ ಬಗ್ಗೆ ಪದವಿ ಹಾಗೂ ತಾಂತ್ರಿಕ ಕಾಲೇಜುಗಳ ಬೋಧನಾ ಸಿಬ್ಬಂದಿ ವರ್ಗಕ್ಕೆ ಹೊಸ ನಿಯಮಾವಳಿ ರೂಪಿಸಿ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಒಂದೇ ಕಡೆ 4 ವರ್ಷ ಕೆಲಸ ಮಾಡಿರುವ ಬೋಧಕರು ವರ್ಗಾವಣೆಗೆ ಅರ್ಹರಾಗಿದ್ದು, ಈ ಅಂಶವನ್ನು ಆಧಾರವಾಗಿಟ್ಟುಕೊಂಡು ವರ್ಗಾವಣೆ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಪದವಿ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಬೋಧಕರಿಗೆ ಇದು ಅನ್ವಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವರ್ಗಾವಣೆಗೆ ಚಾಲನೆ ಸಿಗಲಿದೆ. ಆದಷ್ಟು ಬೇಗ ಕೌನ್ಸೆಲಿಂಗ್ ದಿನಾಂಕಗಳನ್ನು ಪ್ರಕಟಿಸಲಾಗುವುದು. ಎಲ್ಲರಿಗೂ ಇಷ್ಟವಾಗುವ ಹಾಗೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಅವರು ವಿವರಿಸಿದರು.

ಐದು ವಲಯ:

Advertisement

ರಾಜ್ಯವನ್ನು ಎ, ಬಿ, ಸಿ, ಡಿ ಮತ್ತು ಇ ವಲಯ ಎಂದು ಐದು ವಿಭಾಗ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯನ್ನು ‘ಎ’ ವಲಯವೆಂದು, ಬಿಡಿಎ ಮತ್ತು ಬೆಂಗಳೂರು ಹೊರತುಪಡಿಸಿದ ಇತರ ಮಹಾನಗರ ಪಾಲಿಕೆಗಳ ವ್ಯಾಪ್ತಿಯನ್ನು ‘ಬಿ’ ವಲಯವೆಂದು, ಜಿಲ್ಲಾ ಕೇಂದ್ರ ಹಾಗೂ ನಗರಸಭೆಗಳ ವ್ಯಾಪ್ತಿಯನ್ನು ‘ಸಿ’ ವಲಯ, ತಾಲ್ಲೂಕು ಕೇಂದ್ರ ಹಾಗೂ ಪಟ್ಟಣ ಪಂಚಾಯತಿಗಳನ್ನು ‘ಡಿ’ ವಲಯ ಹಾಗೂ ಮೇಲಿನ ಎಲ್ಲಾ ವಲಯಗಳ ವ್ಯಾಪ್ತಿಯನ್ನು ಹೊರತುಪಡಿಸಿದ ಪ್ರದೇಶಗಳಲ್ಲಿನ ಕಾಲೇಜುಗಳನ್ನು ‘ಇ’ ವಲಯಗಳೆಂದು ವಿಂಗಡಿಸಲಾಗಿದೆ. ಯಾರು ಯಾವ ವಲಯದಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸುತ್ತಾರೊ ಅವರು ಬೇರೊಂದು ವಲಯಕ್ಕೆ ವರ್ಗವಾಗಲು ಅರ್ಹತೆ ಪಡೆಯುತ್ತಾರೆ ಎಂದು ಉಪ ಮುಖ್ಯಮಂತ್ರಿ ವಿವರಿಸಿದರು.

ಶೇ.15ರಷ್ಟು ವರ್ಗಾವಣೆ ವಿವರ

ರಾಜ್ಯದ ಐದೂ ಶೈಕ್ಷಣಿಕ ವಿಭಾಗಗಳ ವ್ಯಾಪ್ತಿಯ ಪದವಿ, ಡಿಪ್ಲೊಮೋ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಬೋಧನಾ ಸಿಬ್ಬಂದಿಯ ಪೈಕಿ ಶೇ.9ರಷ್ಟು ಬೋಧಕರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕಡ್ಡಾಯವಾಗಿ ವರ್ಗ ಮಾಡಲಾಗುವುದು. ಪತಿ-ಪತ್ನಿಯರ ಪ್ರಕರಣಗಳಲ್ಲಿ ಶೇ.3ರಷ್ಟು ಸಿಬ್ಬಂದಿಯನ್ನು ಮಾತ್ರ ವರ್ಗ ಮಾಡಲಾಗುವುದು. ವಿಧವೆಯರು, ಡಿವೋರ್ಸ್‌ ಪಡೆದ ಬೋಧಕಿಯರು, ವಿಕಲಚೇತನರ ಹೊಣೆಗಾರಿಕೆ ಇರುವವರು, ಸೇನೆ ಅಥವಾ ಅರೆ ಸೇನಾಪಡೆಯಲ್ಲಿ ಕೆಲಸ ಮಾಡುತ್ತಿರುವವರ ಪ್ರಕರಣಗಳಲ್ಲಿ ಶೇ.1ರಷ್ಟು, ಅಂಗವೈಕಲ್ಯ ಹೊಂದಿರುವ ವ್ಯಕ್ತಿಯ ಶೇ.1ರಷ್ಟು ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳು ಇರುವವರ ಪೈಕಿ ಶೇ.1ರಷ್ಟು ಬೋಧಕರನ್ನು ವರ್ಗಾವಣೆಗೆ ಪರಿಗಣಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

ವರ್ಗಾವಣೆಯಲ್ಲಿ ಪಾರದರ್ಶಕತೆ:

ವರ್ಗಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಸರಕಾರದ ಮುಖ್ಯ ಉದ್ದೇಶವಾಗಿದೆ. 4 ವರ್ಷಗಳಿಗೂ ಹೆಚ್ಚು ಕಾಲದಿಂದ ಒಂದೇ ಕಡೆ ಠಿಕಾಣೆ ಹೂಡಿರುವ ಬೋಧನಾ ಸಿಬ್ಬಂದಿಯನ್ನು ಮುಲಾಜಿಲ್ಲದೆ ವರ್ಗ ಮಾಡಲಾಗುವುದು. ಇದಕ್ಕೆ ಸಂಬಂಧಿತ ಎಲ್ಲ ನಿಯಮಗಳನ್ನು ಪ್ರಕಟಿಸಲಾಗಿದೆ ಎಂದಿದ್ದಾರೆ.

ಈ ಹಿಂದೆ ವರ್ಗಾವಣೆ ಎಂದರೆ ದೊಡ್ಡ ಪ್ರಹಸನದಂತೆ ನಡೆಯುತ್ತಿತ್ತು. ಆದರೆ, ಇಡೀ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಣೆಗೊಳಪಡಿಸಿ ಎಲ್ಲವೂ ಆನ್‌ಲೈನ್‌ ಮೂಲಕವೇ ನಡೆಸಲಾಗುತ್ತಿದೆ. ವೈಜ್ಞಾನಿಕವಾಗಿ ಎಲ್ಲವೂ ನಡೆಯಲಿದೆ. ಉಪನ್ಯಾಸಕರು ಇನ್ನು ಮುಂದೆ ಸಚಿವರು,  ಅಧಿಕಾರಿಗಳ ಕಚೇರಿಗಳ ಸುತ್ತ ಅಲೆಯುವ ಅವ್ಯವಸ್ಥೆ ಇರುವುದಿಲ್ಲ. ಕೌನ್ಸೆಲಿಂಗ್‌ ಮೂಲಕವೇ ವರ್ಗಾವಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next