Advertisement

ಮನೋವೈದ್ಯರಿಂದ ಕೌನ್ಸೆಲಿಂಗ್‌

06:08 PM Apr 05, 2020 | Suhan S |

ಬಳ್ಳಾರಿ: ಜಿಲ್ಲೆಯಲ್ಲಿ ಕೋವಿಡ್‌ ಆಸ್ಪತ್ರೆ, ಹೋಂ ಕ್ವಾರಂಟೈನ್‌, ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಮನೋವೈದ್ಯರು ಹಾಗೂ ಕೌನ್ಸಿಲರ್‌ಗಳ ಮೂಲಕ ಕೌನ್ಸೆಲಿಂಗ್‌ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿ ಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಟಾಸ್ಕ್ಫೋರ್ಸ್‌ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಿಕಿತ್ಸೆ ಪಡೆಯುತ್ತಿರುವವರಿಗೆ ಕೌನ್ಸೆಲಿಂಗ್‌ ಅಗತ್ಯವಿದೆ ಎಂದು ತಿಳಿದುಬಂದಿದ್ದು, ಕೂಡಲೇ ಅವರಿಗೆ ಕೌನ್ಸೆಲಿಂಗ್‌ ಮಾಡುವುದರ ಮೂಲಕ ಆ ಕೋವಿಡ್‌ ಭಯದಿಂದ ಹೊರಬರುವಂತೆ ನೋಡಿಕೊಳ್ಳಬೇಕು. ಪ್ರತಿನಿತ್ಯ ಒಂದು ಬಾರಿಯಂತೆ ಹೋಂ ಕ್ವಾರಂಟೈನ್‌, ಕೋವಿಡ್‌ ಆಸ್ಪತ್ರೆ, ಐಸೋಲೇಶನ್‌ ವಾರ್ಡ್‌ಗಳಿಗೆ ಭೇಟಿ ನೀಡಿ ಮನೋವೈದ್ಯರು ಹಾಗೂ ಕೌನ್ಸಿಲರ್‌ಗಳು ಕೌನ್ಸೆಲಿಂಗ್‌ ಮಾಡಬೇಕು. ಈ ಕುರಿತು ಇಂದೇ ಆದೇಶ ಹೊರಡಿಸಲಾಗುವುದು ಎಂದವರು ತಿಳಿಸಿದರು.

ಕೋವಿಡ್‌ ಆಸ್ಪತ್ರೆ ಹಾಗೂ ವಿಮ್ಸ್‌ಗೆ ಕೋವಿಡ್‌ ಸಂಬಂಧಿತ ವೈದ್ಯಕೀಯ ಪರಿಕರಗಳು ಹಾಗೂ ಔಷಧ ಗಳು ಅಗತ್ಯವಿದ್ದಲ್ಲಿ ಬೇಡಿಕೆ ಪಟ್ಟಿಯನ್ನು ಕೂಡಲೇ ಸಲ್ಲಿಸಿ ಎಂದು ಹೇಳಿದ ಡಿಸಿ ನಕುಲ್‌ ಅವರು ಈಗಾಗಲೇ ಕೋವಿಡ್‌ ಆಸ್ಪತ್ರೆಗೆ ಬಹುತೇಕ ವೈದ್ಯಕೀಯ ಪರಿಕರಗಳು ಹಾಗೂ ಔಷ ಧಗಳನ್ನು ಒದಗಿಸಲಾಗಿದೆ. ಇನ್ನೂ ಅಗತ್ಯವಿದ್ದಲ್ಲಿ ಒದಗಿಸಲಾಗುವುದು ಎಂದರು.

ಕೋವಿಡ್‌ ಸೋಂಕು ಪತ್ತೆ ಪ್ರಯೋಗಾಲಯ ಬಳ್ಳಾರಿ ವಿಮ್ಸ್ ನಲ್ಲಿ ಈಗಾಗಲೇ ಸಿದ್ಧವಾಗಿದ್ದು, ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿ, ಅದನ್ನು ಪುಣೆಗೆ ಕಳುಹಿಸಿಕೊಡಲಾಗಿದೆ. ಅಲ್ಲಿಯೂ ಒಂದೇ ರೀತಿಯ ವರದಿ ಬಂದಲ್ಲಿ ಇದು ಆರಂಭಿಸಲು ಅನುಕೂಲವಾಗುತ್ತದೆ ಎಂಬ ಮಾಹಿತಿಯನ್ನು ವಿಮ್ಸ್‌ ನಿರ್ದೇಶಕ ದೇವಾನಂದ ಅವರು ಸಭೆಯಲ್ಲಿ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿರುವ ಎಲ್ಲ ತಾಲೂಕುಗಳಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್ಗಳನ್ನು ಒದಗಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ ಡಿಸಿ ನಕುಲ್‌ ಅವರು ಕೋವಿಡ್‌ ಆಸ್ಪತ್ರೆ, ವಿಮ್ಸ್‌, ಫೀವರ್‌ ಕ್ಲಿನಿಕ್‌ಗಳಿಗೆ ಥರ್ಮಲ್‌ ಸ್ಕ್ಯಾನರ್‌ಗಳನ್ನು ಪೂರೈಸಲಾಗಿದ್ದು ಇನ್ನೂ ಹೆಚ್ಚು ಬೇಕಾದಲ್ಲಿ ಅವುಗಳನ್ನು ಒದಗಿಸಲಾಗುವುದು ಎಂದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್‌ ರೂಂ ಸಿಬ್ಬಂದಿಗೆ ಕೋವಿಡ್‌-19 ಗೈಡ್‌ಲೈನ್ಸ್‌ ಕುರಿತು ಹಾಗೂ ಫೋನ್‌ ಕರೆ ಬಂದಾಗ ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬುದಕ್ಕೆ ಸಂಬಂ ಧಿಸಿದಂತೆ ಸೂಕ್ತ ತರಬೇತಿಯನ್ನು ಕೂಡಲೇ ಮಾಡಿ ಎಂದು ಅವರು ಸೂಚಿಸಿದರು.

ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘ‌ ಚರ್ಚೆಗಳು ನಡೆದವು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ. ನಿತೀಶ್‌, ಅಪರ ಜಿಲ್ಲಾಧಿಕಾರಿ ಮಂಜುನಾಥ, ಡಿಎಚ್‌ಒ ಡಾ| ಜನಾರ್ಧನ್‌, ವಿಮ್ಸ್‌ ನಿರ್ದೇಶಕ ದೇವಾನಂದ ಸೇರಿದಂತೆ ಟಾಸ್ಕ್ಪೋರ್ಸ್‌ ಸಮಿತಿ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next