Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಲಕ್ನೋದಲ್ಲಿ ನಡೆದ ಮುಖ್ಯ ಸಚೇತಕರ ಸಮಾವೇಶದಲ್ಲಿ ವಿಧಾನ ಮಂಡಲ ಸಚಿವಾಲಯವನ್ನು ಕಾಗದ ರಹಿತ ಮಾಡಲು ಕೇಂದ್ರ ಸರ್ಕಾರ ಶೇ. 95 ಹಣಕಾಸಿನ ನೆರವು ನೀಡುವುದಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಕಾಗದ ರಹಿತ ಪರಿಷತ್ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ದೇಶದಲ್ಲಿ ಹರಿಯಾಣ ವಿಧಾನಸಭೆ ಕಾಗದ ರಹಿತವಾಗಿ ಕಾರ್ಯ ಕಲಾಪ ನಡೆಸುತ್ತಿದೆ. ಮಹಾರಾಷ್ಟ್ರ ಮತ್ತು ರಾಜಸ್ಥಾನ ಕೂಡ ಇದೇ ಮಾದರಿ ಅನುಸರಿಸಿದೆ. ರಾಜ್ಯ ವಿಧಾನ ಮಂಡಲವೂ ಕಾಗದ ರಹಿತ ಮಾಡಲಾಗುವುದು ಎಂದರು. ಈ ಕುರಿತು ಚುನಾವಣೆ ನಂತರ ಎಲ್ಲಾ ಶಾಸಕರಿಗೂ ತರಬೇತಿ ನೀಡಲಾಗುವುದು. ಜನಪ್ರತಿನಿಧಿಗಳು ತಂತ್ರಜ್ಞಾನ ಅಳವಡಿಸಿಕೊಳ್ಳುವ ಕುರಿತು ಸ್ವತಃ ಪ್ರಧಾನಿಯೇ ಸಂಸದರಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಶಾಸಕರು ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದುಹೇಳಿದರು.
ಫೆ.5ರಿಂದ ಈ ವರ್ಷದ ಮೊದಲ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ
ಭಾಷಣ ಮಾಡಲಿದ್ದಾರೆ. ಫೆ.9ರವರೆಗೂ ಅಧಿವೇಶನ ನಡೆಯಲಿದ್ದು, ಫೆ.16ರಿಂದ 28ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ.
ಈ ಅಧಿವೇಶನದಲ್ಲಿ ಮೂರು ವಿಧೇಯಕಗಳು ಮಂಡನೆಯಾಗಲಿವೆ. ಇತ್ತೀಚಿನ ದಿನಗಳಲ್ಲಿ ಮಹತ್ವದ ವಿಧೇಯಕಗಳು ಚರ್ಚೆಯಾಗದೇ ಅಂಗೀಕಾರವಾಗುತ್ತಿಲ್ಲ. ವಿಧಾನ ಮಂಡಲದ ಅಧಿವೇಶನ ವರ್ಷಕ್ಕೆ ಕನಿಷ್ಠ 60 ದಿನ ನಡೆಯಬೇಕು ಎಂದು ನಿಯಮ ಮಾಡಿದ್ದರೂ ಕೇವಲ ಒಂದು ವರ್ಷ ಮಾತ್ರ 60 ದಿನ ಅಧಿವೇಶನ ನಡೆಸಿದ್ದು, ನಾವೇ ಮಾಡಿದ ನಿಯಮ ಪಾಲನೆ ಮಾಡಲು ಆಗುತ್ತಿಲ್ಲ ಎಂದು ಸಭಾಪತಿ ಶಂಕರಮೂರ್ತಿ ಬೇಸರ ವ್ಯಕ್ತಪಡಿಸಿದರು. ವಿಧಾನ ಮಂಡಲದ ಶಾಸಕರ ಸಂಬಳ ಹೆಚ್ಚಳ ಮಾಡುವ ಕುರಿತಂತೆ ಯಾವುದೇ ಪ್ರಸ್ತಾಪ ಬಂದಿಲ್ಲ. ಸಂಬಳ ಹೆಚ್ಚಳಕ್ಕೆ ಪ್ರಸ್ತಾಪ ಬಂದರೂ ಅವಕಾಶ ನೀಡುವುದಿಲ್ಲ.
ಡಿ.ಎಚ್.ಶಂಕರಮೂರ್ತಿ, ವಿಧಾನಪರಿಷತ್ ಸಭಾಪತಿ