ಬೆಂಗಳೂರು: ಬಸನಗೌಡ ಪಾಟೀಲ್ ಅವರಿಂದ ತೆರವಾಗಿದ್ದ ವಿಜಯಪುರ ಜಿಲ್ಲೆಯ ಬಾಗಲಕೋಟೆ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಸಹೋದರ ಸುನೀಲ್‌ಗೌಡ ಪಾಟೀಲ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಸೆಪ್ಟೆಂಬರ್ 6 ರಂದು ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಎಂ.ಬಿ. ಪಾಟೀಲ್, ಆರ್.ಬಿ. ತಿಮ್ಮಾಪುರ ಸೇರಿದಂತೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಚುನಾವಣೆಯಲ್ಲಿ ಸುನೀಲ್‌ಗೌಡ ಪಾಟೀಲ್ ಅವರನ್ನು ಅಭ್ಯರ್ಥಿ ಮಾಡುವ ಬಗ್ಗೆ ಬಹುತೇಕ ನಾಯಕರು ಒಲವು ತೋರಿದ್ದರಿಂದ ಅವರ ಸ್ಪರ್ಧೆ ಖಚಿತವಾಗಿದೆ. ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಸುಣಗಾರ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಸುನೀಲ್ ಪಾಟೀಲ್‌ಗೆ ಟಿಕೆಟ್ ನೀಡದಿದ್ದರೆ, ಈಗಾಗಲೇ ಸಚಿವ ಸ್ಥಾನ ಸಿಗದಿರುವ ಎಂ.ಬಿ.ಪಾಟೀಲ್ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡು ಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಪಕ್ಷದ ನಾಯಕರು ಸುನಿಲ್ ಗೌಡ ಪಾಟೀಲ್‌ಗೆ ಟಿಕೆಟ್ ನೀಡಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಂದೇ ದಿನ ಎರಡು ಕಡೆ ಸಭೆ: ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಮುಖಂಡರ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿಜಯಪುರದಲ್ಲಿ ಸಭೆ ನಡೆಸಿದರು. ಇಬ್ಬರು ನಾಯಕರು ಒಂದೇ ವಿಷಯಕ್ಕೆ ಪ್ರತ್ಯೇಕವಾಗಿ ಸಭೆ ನಡೆಸಿರುವುದು ಪಕ್ಷದ ಕಾರ್ಯಕರ್ತರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.