ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಬಿ.ಕೆ.ಹರಿಪ್ರಸಾದ್ ಹಾಗೂ ನಸೀರ್ ಅಹಮದ್ ಅವರಿಗೆ ಅವಕಾಶ ಕಲ್ಪಿಸಿದೆ. ಮತ್ತೆ ಹಿರಿಯ ನಾಯಕರನ್ನು ಪರಿಗಣಿಸಿದ್ದು, ಹೊಸಬರಿಗೆ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಜೂ.29 ರಂದು ನಡೆಯುವ ವಿಧಾನ ಪರಿಷತ್ತಿನ ಏಳು ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ ದೊರೆಯುವ 2 ಸ್ಥಾನಗಳಿಗೆ ನೂರಕ್ಕೂ ಹೆಚ್ಚು ಆಕಾಂಕ್ಷಿಗಳು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದರು.
ರಾಜ್ಯ ನಾಯಕರು ಎಂ.ಸಿ.ವೇಣುಗೋಪಾಲ್, ಎಂ.ಆರ್. ಸೀತಾರಾಮ್, ನಸೀರ್ ಅಹಮದ್ ಹಾಗೂ ಐವಾನ್ ಡಿಸೋಜಾ ಹೆಸರು ಗಳನ್ನು ಶಿಫಾರಸು ಮಾಡಿದ್ದರು. ಆದರೆ, ಪಟ್ಟಿಯನ್ನು ಪರಿಷ್ಕರಿಸಿ ಕಳುಹಿಸುವಂತೆ ಹೈಕಮಾಂಡ್ ವಾಪಸ್ ಕಳುಹಿಸಿತ್ತು. ಹೈಕಮಾಂಡ್ ನಿರ್ದೇಶನದಂತೆ ಪರ್ಯಾಯ ಹೆಸರು ಶಿಫಾರಸು ಮಾಡುವ ಕುರಿತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಾಯಕರು ಸಭೆ ಸೇರಿ ಚರ್ಚೆ ನಡೆಸಿದ್ದರು. ಹೊಸಬರಿಗೆ ಅವಕಾಶ ಕಲ್ಪಿಸಲು ರಾಹುಲ್ ಗಾಂಧಿ ಮೂಲಕ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶಾಕೀರ್ ಸನದಿಗೆ ಅವಕಾಶ ಕಲ್ಪಿಸಲು ಹೈಕಮಾಂಡ್ ನಾಯಕರು ಒಲವು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಆದರೆ, ಸಿದ್ದರಾಮಯ್ಯ ತಾವು ಸೂಚಿಸಿರುವ ನಸೀರ್ ಅಹಮದ್ ಅವರನ್ನು ಪರಿಗಣಿಸುವಂತೆ ಪಟ್ಟು ಹಿಡಿದಿದ್ದರಿಂದ ಕೊನೆ ಕ್ಷಣದಲ್ಲಿ ಮತ್ತೆ ನಸೀರ್ ಅಹಮದ್ ಹೆಸರನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ಅಲ್ಲದೆ, ಎಂ.ಆರ್.ಸೀತಾರಾಮ್ ಬದಲು ಹಿಂದುಳಿದ ವರ್ಗಕ್ಕೆ ಸೇರಿದ ಪರ್ಯಾಯ ಹೆಸರು ರಾಜ್ಯ ನಾಯಕರು ಸೂಚಿಸುವುದರಲ್ಲಿ ಬಿ.ಕೆ. ಹರಿಪ್ರಸಾದ್ ದೆಹಲಿಯಲ್ಲಿ ಕುಳಿತು ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡಿ ಸೀಟು ಗಿಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸಿದ್ದು ಹಿಡಿತ: ಎರಡು ಸ್ಥಾನಗಳಲ್ಲಿ ಒಂದು ಅಲ್ಪ ಸಂಖ್ಯಾತರಿಗೆ ಮತ್ತೂಂದು ಹಿಂದುಳಿದ ವರ್ಗದವರಿಗೆ ನೀಡಬೇಕೆಂದು ಪಕ್ಷದ ನಾಯಕರು ಒಮ್ಮತದಿಂದ ತೀರ್ಮಾನಿಸಿದ್ದರು. ಅದರಂತೆ ಸಿದ್ದರಾಮಯ್ಯ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ್ದ ನಜೀರ್ ಅಹಮದ್‌ಗೆ ಟಿಕೆಟ್ ಕೊಡಿಸಲು ಪಟ್ಟು ಹಿಡಿದುಕೊಂಡಿದ್ದರು. ಇನ್ನು ಹಿಂದುಳಿದ ವರ್ಗದ ಆಕಾಂಕ್ಷಿಗಳಲ್ಲಿ ಪ್ರಮುಖವಾಗಿ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರಿಗೆ ಕೊಡಿಸಲು ಮಲ್ಲಿಕಾರ್ಜುನ ಖರ್ಗೆ ಒಲವು ವ್ಯಕ್ತಪಡಿಸಿದ್ದರು. ಆದರೆ, ಹೈಕಮಾಂಡ್ ಸಿದ್ದರಾಮಯ್ಯ ಬೇಡಿಕೆಗೆ ಮನ್ನಣೆ ನೀಡಿದ್ದು, ಅವರು ಈಗಲೂ ಪಕ್ಷದಲ್ಲಿ ಪರ್ಯಾಯ ಶಕ್ತಿಕೇಂದ್ರ ಎಂಬುದನ್ನು ಸಾಬೀತು ಪಡಿಸಿದಂತಾಗಿದೆ.
ಹೊಸಬರಿಗೆ ನಿರಾಸೆ: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರಿಂದ ಕಾಂಗ್ರೆಸ್ ನಲ್ಲೂ ಅದೇ ಮಾದರಿ ಅನುಸರಿಸಬೇಕು ಎಂದು ಅನೇಕ ಆಕಾಂಕ್ಷಿಗಳು ರಾಜ್ಯ, ಕೇಂದ್ರದ ನಾಯಕರ ಮೇಲೆ ಒತ್ತಡ ಹೇರಿದ್ದರು. ಹೈಕಮಾಂಡ್ ಹಳೆಯ ಸಂಪ್ರದಾಯವನ್ನೇ ಮುಂದುವರಿಸಿದೆ. ಅಧ್ಯಕ್ಷರಿಗೆ ಸಿಗದ ಮನ್ನಣೆ: ರಾಜ್ಯಸಭೆ ಚುನಾವಣೆಗೆ ಹೈಕಮಾಂಡ್ ರಾಜ್ಯ ನಾಯಕರ ಅಭಿಪ್ರಾಯ ಕೇಳದೇ ಖರ್ಗೆಯವರನ್ನು ಅಭ್ಯ ರ್ಥಿಯನ್ನಾಗಿ ಘೋಷಣೆ ಮಾಡಿತ್ತು. ಈಗ ಪರಿಷತ್ ಚುನಾವಣೆಗೂ ಪಕ್ಷದ ಅಧ್ಯಕ್ಷರ ಕಡೆಯಿಂದ ಕಳುಹಿಸಿದ್ದ ಸಂಭಾವ್ಯರ ಪಟ್ಟಿಯನ್ನು ಪರಿಗಣಿಸದೇ ಇರುವುದರಿಂದ ಡಿ.ಕೆ.ಶಿವಕುಮಾರ್ ಪ್ರಯತ್ನಕ್ಕೆ ಮನ್ನಣೆ ದೊರೆತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.