Advertisement

ಪರಿಷತ್‌ ಚುನಾವಣೆ: ಉತ್ತರ ಕರ್ನಾಟಕಕ್ಕೆ ಜೆಡಿಎಸ್‌ ಟಿಕೆಟ್‌ ಸಿಗಬಹುದೇ?

01:32 PM May 29, 2020 | Suhan S |

ಬೆಳಗಾವಿ: ಪ್ರತಿ ವಿಧಾನಸಭೆ ಚುನಾವಣೆ ಹಾಗೂ ಅನಂತರ ಉತ್ತರ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿರುವ ಜಾತ್ಯತೀತ ಜನತಾದಳ (ಜೆಡಿಎಸ್‌) ಬರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಭಾಗದ ನಾಯಕರಿಗೆ ಪಕ್ಷದ ಟಿಕೆಟ್‌ ನೀಡುತ್ತದೆಯೇ?.

Advertisement

ಇಂತಹ ಒಂದು ಗಂಭೀರ ಚರ್ಚೆ ಹಾಗೂ ರಾಜಕೀಯ ಮಾತುಗಳು ಈಗ ಕೇಳಿಬರುತ್ತಿವೆ. ಬರುವ ಜೂನ್‌ ತಿಂಗಳಲ್ಲಿ ವಿಧಾನ ಪರಿಷತ್‌ನ ಖಾಲಿಯಾಗುವ ಸ್ಥಾನಗಳಿಗೆ ಚುನಾವಣೆ ನಡೆಯಲಿರುವುದರಿಂದ ಈ ಚರ್ಚೆಗೆ ಸಾಕಷ್ಟು ಹಾಗೂ ನಿಷ್ಠಾವಂತ ಕಾರ್ಯಕರ್ತರ ಗಮನ ಮಹತ್ವ ಬಂದಿದೆ. ಉತ್ತರ ಕರ್ನಾಟಕದ ನಾಯಕರ ಪಕ್ಷದ ವರಿಷ್ಠರ ಕಡೆ ತಿರುಗಿದೆ.

ಉತ್ತರ ಕರ್ನಾಟಕದಲ್ಲಿ ಅಲ್ಪಸ್ವಲ್ಪ ಉಳಿದಿರುವ ಜೆಡಿಎಸ್‌ ಬೇರು ಇನ್ನಷ್ಟು ಗಟ್ಟಿಯಾಗಬೇಕಾದರೆ ಬರಲಿರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬೆಂಗಳೂರು ಭಾಗವನ್ನು ಬಿಟ್ಟು ಉತ್ತರ ಕರ್ನಾಟಕದವರಿಗೆ ಅವಕಾಶ ಕೊಡಬೇಕು ಎಂಬ ಬಲವಾದ ಕೂಗು ಆರಂಭವಾಗಿದೆ.

ಈ ಸಂಬಂಧ ಪಕ್ಷದ ಕೆಲ ಹಿರಿಯ ಕಾರ್ಯಕರ್ತರು ವರಿಷ್ಠರ ಗಮನಕ್ಕೆ ತರಲು ಸಹ ನಿರ್ಧರಿಸಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ತಾವು ಎಂದಿಗೂ ತಾರತಮ್ಯ ಧೋರಣೆ ಅನುಸರಿಸಿಲ್ಲ. ಇಲ್ಲಿಯ ನಾಯಕರಿಗೆ ಅವಕಾಶ ವಂಚನೆ ಮಾಡಿಲ್ಲ ಎಂದು ಹೇಳುತ್ತಲೇ ಬಂದಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಎಚ್‌ .ಡಿ.ಕುಮಾರಸ್ವಾಮಿ ಅವರಿಗೆ ಈಗ ಉ.ಕ.ಭಾಗದ ಜನರ ಮನಸ್ಸು ಗೆಲ್ಲಲು ಇದೊಂದು ಒಳ್ಳೆಯ ಅವಕಾಶ. ಈ ಮೂಲಕ ಪಕ್ಷದ ಬಗ್ಗೆ ಇರುವ ಅಭಿಪ್ರಾಯ ಬದಲಾಯಿಸಬಹುದು ಎಂಬುದು ಇಲ್ಲಿನ ನಾಯಕರ ಅನಿಸಿಕೆ.

ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ನಂತರ ಜೆಡಿಎಸ್‌ ಬಗ್ಗೆ ಉತ್ತರ ಕರ್ನಾಟಕದಲ್ಲಿ ಹೊಸ ಇಮೇಜ್‌ ಸೃಷ್ಟಿಯಾಗಿತ್ತು. ಇದೇ ವಾತಾವರಣದಲ್ಲಿ ಹೆಚ್ಚು ಶಾಸಕರು ಸಹ ಈ ಭಾಗದಿಂದ ಆಯ್ಕೆಯಾಗಿದ್ದರು. ಆದರೆ ಅದೇ ವರ್ಚಸ್ಸು ಈಗ ಉಳಿದಿಲ್ಲ. 2006ರಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಪರ್ಯಾಯ ಪಕ್ಷ ಎಂದು ಗುರುತಿಸಿಕೊಂಡಿದ್ದ ಜೆಡಿಎಸ್‌ ಈಗ ಉತ್ತರ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ಹುಡುಕಲು ಪರದಾಡುತ್ತಿದೆ. ಪಕ್ಷದ ಬಗೆಗೆ ಉತ್ತರ ಕರ್ನಾಟಕದ ಜನರಲ್ಲಿ ಮೊದಲಿನ ವಿಶ್ವಾಸ ಇಲ್ಲ. ಇಲ್ಲಿ ಯಾವತ್ತೂ ಪ್ರಭಾವಿಗಳಿಗೆ ಮಾತ್ರ ಟಿಕೆಟ್‌ ನೀಡಲಾಗುತ್ತದೆ.

Advertisement

ನಿಷ್ಠೆಯಿಂದ ದುಡಿದವರಿಗೆ ಅವಕಾಶಗಳು ಬಹಳ ಕಡಿಮೆ. ಒಂದು ಭಾಗದವರ ಹಿತಾಸಕ್ತಿ ಮಾತ್ರ ಗಮನದಲ್ಲಿಟ್ಟುಕೊಂಡು ಅವರಿಗೇ ಮಣೆ ಹಾಕಲಾಗುತ್ತದೆ ಎಂಬ ಬಲವಾದ ಅಭಿಪ್ರಾಯ ಇದೆ. ಹೀಗಿರುವಾಗ ಜನರಲ್ಲಿ ವಿಶೇಷವಾಗಿ ಪಕ್ಷದ ಹಿರಿಯ ಕಾರ್ಯಕರ್ತರಲ್ಲಿ ಮೊದಲಿನ ವಿಶ್ವಾಸ ಮೂಡಿಸಬೇಕಾದರೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಭಾಗದ ನಾಯಕರಿಗೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಉತ್ತರ ಕರ್ನಾಟಕದಿಂದ ಅನೇಕ ನಾಯಕರು ದೊಡ್ಡ-ದೊಡ್ಡ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಕ್ಷದ ಉಸ್ತುವಾರಿ ಹೊಣೆ ನಿರ್ವಹಿಸುತ್ತಿದ್ದಾರೆ. ಬಿಜೆಪಿಯಲ್ಲಿ ಒಬ್ಬರು ಕೇಂದ್ರ ಸಚಿವರು ಸೇರಿದಂತೆ ಬೆಳಗಾವಿ ಜಿಲ್ಲೆಯೊಂದರಲ್ಲೇ ಐವರು ಸಚಿವರಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷರಿದ್ದಾರೆ. ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಿದ್ದಾರೆ. ಕಾಂಗ್ರೆಸ್‌ದಲ್ಲಿ ಸಹ ಉನ್ನತ ಸ್ಥಾನ ಅಲಂಕರಿಸಿದವರಿದ್ದಾರೆ. ಆದರೆ ಇದೇ ಅವಕಾಶ ಜೆಡಿಎಸ್‌ದಲ್ಲಿ ಇಲ್ಲ. ಇವರನ್ನು ಎದುರಿಸಬೇಕಾದರೆ ಅಥವಾ ಪೈಪೋಟಿಯ ಮೇಲೆ ಪಕ್ಷ ಕಟ್ಟಬೇಕಾದರೆ ಜೆಡಿಎಸ್‌ದಲ್ಲಿ ಶಾಸಕರು ಇರಬೇಕು. ಆದರೆ ಈಗ ಎಲ್ಲವೂ ಮೈಸೂರು ಕರ್ನಾಟಕ ಭಾಗಕ್ಕೆ ಸೀಮಿತವಾಗಿದೆ. ಚುನಾವಣೆ ಸಮಯದಲ್ಲೂ ಸಹ ಈ ಭಾಗದ ಬಗ್ಗೆ ಪಕ್ಷದ ವರಿಷ್ಠರಿಗೆ ಆಸಕ್ತಿ ಕಡಿಮೆ ಎನ್ನುವ ಅಸಮಾಧಾನವಿದೆ.

ಪಕ್ಷದಲ್ಲಿ ಈಗ ಹಿರಿಯ ಶಾಸಕರಾದ ಬಸವರಾಜ ಹೊರಟ್ಟಿ ಹಾಗೂ ಮಾಜಿ ಶಾಸಕ ಎನ್‌.ಎಚ್‌. ಕೋನರೆಡ್ಡಿ ಅವರನ್ನು ಬಿಟ್ಟರೆ ಬೇರೆ ನಾಯಕರು ಈ ಭಾಗದಲ್ಲಿ ಇಲ್ಲ. ಇದ್ದವರು ಪಕ್ಷದಿಂದ ದೂರವಾದರು. ಬಸವರಾಜ ಹೊರಟ್ಟಿ ಸಹ ಪಕ್ಷಕ್ಕಿಂತ ತಮ್ಮ ಸ್ವಂತ ಬಲದಿಂದ ಗಟ್ಟಿಯಾಗಿ ಗುರುತಿಸಿಕೊಂಡವರು. ಹೀಗಾಗಿ ಹೊಸ ನಾಯಕರಿಗೆ ಅವಕಾಶ ಕೊಡಬೇಕು ಎಂಬುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಆಗ್ರಹ.

 

– ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next