Advertisement

ಎರಡು ಮಸೂದೆಗಳಿಗೆ ಪರಿಷತ್‌ ಅಂಗೀಕಾರ

12:06 AM Dec 27, 2022 | Team Udayavani |

ಬೆಳಗಾವಿ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ನೀಡಲಾಯಿತು.

Advertisement

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಕುರಿತಾಗಿ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಸಹಿತ ಪ್ರಮುಖರು ಮಾತನಾಡಿ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ಹೊರ ರಾಜ್ಯಗಳ ಕನ್ನಡ ಭಾಷಿಕರ ಹಿತರಕ್ಷಣೆ, ರಾಜ್ಯೋತ್ಸವ ಆಚರಣೆಗೆ ನೆರವು ನೀಡಬೇಕು. ಅಮೆರಿಕದ ಕನ್ನಡ ಅಸೋಸಿಯೇಶನ್‌ (ಅಕ್ಕ)ಸಮ್ಮೇಳನಕ್ಕೆ ಕೋಟ್ಯಂತರ ರೂ.ನೀಡಲಾಗುತ್ತಿದೆ. ಹೊರರಾಜ್ಯಗಳ ಕನ್ನಡ ಭಾಷಿಕರು ಕೈಗೊಳ್ಳುವ ರಾಜ್ಯೋತ್ಸವ ಇನ್ನಿತರ ಕಾರ್ಯಕ್ರಮಗಳಿಗೆ ನೆರವು ನೀಡುವಂತಾಗಬೇಕು ಎಂದರು.

ಸಭಾನಾಯಕ ಶ್ರೀನಿವಾಸ ಪೂಜಾರಿ, ಗಡಿನಾಡು ಪ್ರದೇಶದಲ್ಲಿನ ಕನ್ನಡ ಶಾಲೆ, ಕನ್ನಡಿಗರ ಹಿತ ರಕ್ಷಣೆ, ಹಳ್ಳಿಗಳ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದರು.

ಭೂ ಕಂದಾಯ ಮಸೂದೆ
ಕಂದಾಯ ಸಚಿವ ಆರ್‌.ಅಶೋಕ ಅವರು ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಭೂ ಕಂದಾಯ ತಿದ್ದುಪಡಿ ಮಸೂದೆ ಮಂಡಿಸಿದರು.

ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ಇದು ಬಡವರ ಪರವಾದ ಕಾಯ್ದೆ ಯಲ್ಲ. ಭೂ ಪರಿವರ್ತನೆ ಸರಳೀಕರಣ ಎನ್ನುವುದು ಭೂಮಾಫಿಯಾ ಹಾಗೂ ಲೂಟಿ ಹೊಡೆಯುವವರಿಗೆ ಅನುಕೂಲ ಆಗಲಿದೆ. ಜಗ್ಗಿ ವಾಸುದೇವ ಅವರಿಗೆ ನೂರಾರು ಎಕ್ರೆ ಭೂಮಿ ನೀಡಲಾಗಿದೆ. ರಾಜ್ಯಕ್ಕೆ ಅವರಿಂದ ಏನು ಕೊಡುಗೆ ಸಿಕ್ಕಿದೆ ಎಂದು ಪ್ರಶ್ನಿಸಿದರು.

Advertisement

ಇತರ ಕೆಲವು ಸದಸ್ಯರು ಮಾತನಾಡಿ, ಜಮೀನಿನಲ್ಲಿ ಯಾರು ಮನೆ ಕಟ್ಟಿಕೊಂಡಿದ್ದಾರೋ ಅಂಥವರಿಗೆ ಮಾತ್ರ ಭೂ ಪರಿವರ್ತನೆ ಸರಳೀಕರಣ ಪ್ರಯೋಜನ ನೀಡುವಂತೆ ಕಾಯ್ದೆ ಮಾಡಿ ಎಂದು ಸಲಹೆ ನೀಡಿದರು.

ಸ‌ಚಿವ ಆರ್‌.ಅಶೋಕ್‌ ಮಾತ ನಾಡಿ, ತಿದ್ದುಪಡಿ ಕಾಯ್ದೆ ತರುವ ಉದ್ದೇಶವೇ ಬಡವರಿಗೆ ಪ್ರಯೋಜನವಾಗಲಿ ಎಂಬುದು. ಕೋಳಿ ಸಾಕಾಣಿಕೆಗೆ ಭೂ ಪರಿವರ್ತನೆ ಅಗತ್ಯವಿಲ್ಲ ಎಂದು ಈಗಾಗಲೇ ಹೇಳಲಾಗಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next