ಮುಂಬೈ: 2019ರಲ್ಲಿ ನಾವು ಬಿಜೆಪಿಯೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವು. ಆದರೆ ಶಿವಸೇನೆ ಪಕ್ಷ ಕಾಂಗ್ರೆಸ್, ಎನ್ ಸಿಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಇದರ ಪರಿಣಾಮ ಹಿಂದುತ್ವ, ಸಾವರ್ಕರ್, ಮುಂಬೈ ಬಾಂಬ್ ಸ್ಫೋಟ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಕರಾವಳಿಯಲ್ಲಿ ಭಾರೀ ಮಳೆ: ಕಾಸರಗೋಡಿನ ಮಧೂರು ದೇಗುಲ ಜಲಾವೃತ
ಬುಧವಾರ (ಜುಲೈ 06) ಸಿಎಂ ಶಿಂಧೆ ಎಎನ್ ಐಗೆ ನೀಡಿದ ಸಂದರ್ಶನದಲ್ಲಿ, ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಹಿಂದಿನ ಕಾರಣವನ್ನು ಬಹಿರಂಗಗೊಳಿಸಿದ್ದಾರೆ. “ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಅಧಿಕಾರ ನೀಡಲು ಮಿತ್ರ ಪಕ್ಷಗಳು ಯತ್ನಿಸಿದ್ದರಿಂದ ನಮ್ಮ (ಶಿವಸೇನಾ) ಶಾಸಕರಿಗೆ ತಮ್ಮ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವುದು ಕಷ್ಟವಾಗಿತ್ತು. ಅನುದಾನದ ಕೊರತೆಯಿಂದಾಗಿ ನಮ್ಮ ಶಾಸಕರಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣದಿಂದ ರೋಸಿ ಹೋದ ಶಾಸಕರು ಬಂಡಾಯ ಏಳಲು ಕಾರಣವಾಯಿತು” ಎಂದು ತಿಳಿಸಿದ್ದಾರೆ.
“ ನಾವು ಹಲವಾರು ಬಾರಿ ಉದ್ಧವ್ ಠಾಕ್ರೆ ಜತೆ ಚರ್ಚೆ ನಡೆಸಿದ್ದೇವು. ಆದರೆ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಿಂದ ನಮಗೆ ಯಾವುದೇ ಅನುಕೂಲ, ನೆರವು ಸಿಗಲಿಲ್ಲ. ನಮ್ಮ ಪಕ್ಷದ ಮುಖ್ಯಮಂತ್ರಿ ಇದ್ದಿದ್ದರೂ ಕೂಡಾ ನಗರ ಪಂಚಾಯತ್ ಚುನಾವಣೆಯಲ್ಲಿ ನಾವು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದೇವು. ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸಿದ್ದರೂ ಕೂಡಾ ಅದರಲ್ಲಿ ಯಶಸ್ವಿಯಾಗಲಿಲ್ಲ ಎಂದು ಶಿಂಧೆ ಬಿಕ್ಕಟ್ಟಿನ ಹಿಂದಿನ ಬೇಗುದಿಯನ್ನು ತೆರೆದಿಟ್ಟಿದ್ದಾರೆ.
ನಮ್ಮದು ಜನಸಾಮಾನ್ಯರ ಸರ್ಕಾರವಾಗಿದ್ದು, ಎಲ್ಲಾ ವರ್ಗದ ಜನರಿಗೂ ನ್ಯಾಯ ಒದಗಿಸುತ್ತೇವೆ. ನಾವು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಪ್ರತಿಯೊಬ್ಬರು ಇದು ನಮ್ಮ ಸರ್ಕಾರ ಎಂಬ ಭಾವನೆ ಮೂಡುವಂತೆ ಮಾಡುವುದಾಗಿ ಶಿಂಧೆ ಭರವಸೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನಿಂದಾಗಿ ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಜೂನ್ 30ರಂದು ಏಕನಾಥ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.