ಹತ್ತಿ ಬಿತ್ತಿ ಬೆಳೆದ ರೈತರ ಕಥೆ ಆಗಾಗ ಲಾಭ-ನಷ್ಟದ ವಿಚಾರದಲ್ಲಿ ಚರ್ಚೆಗೆ ಬರುತ್ತಲೇ ಇರುತ್ತದೆ. ಬ್ರಿಟಿಷರಿಂದ “ಕಾಟನ್ ಕ್ಯಾಪಿಟಲ್’ ಎಂದೇ ಕರೆಯಿಸಿಕೊಂಡಿದ್ದ ಧಾರವಾಡ ಜಿಲ್ಲೆಯಲ್ಲಿ ಹತ್ತಿ ಬೆಳೆ ನೆಲೆಯೂರಿದ್ದು ಶತಮಾನಗಳ ಹಿಂದೆಯೇ ಆದರೂ ಹತ್ತಿ ಬೆಳೆಗೆ ವೇಗೋತ್ಕರ್ಷ ಸಿಕ್ಕಿದ್ದು ಸ್ವಾತಂತ್ರ್ಯ ಚಳವಳಿಯಲ್ಲಿನ ಖಾದಿ ಗ್ರಾಮೋದ್ಯೋಗದಿಂದಾಗಿ ಎಂದರೆ ತಪ್ಪಾಗಲಾರದು.
ಹುಬ್ಬಳ್ಳಿಯ ಬಸವೇಶ್ವರ ಎಪಿಎಂಸಿಯಲ್ಲಿ 2020ರಲ್ಲಿ 30 ಎಂಎಂ ನೂಲಿನ ಪ್ರತೀ ಕ್ವಿಂಟಾಲ್ ಹತ್ತಿಗೆ 5,875 ಹಾಗೂ 29 ಎಂಎಂ ನೂಲಿನ ಹತ್ತಿಗೆ 5,775 ರೂ., 28 ಎಂಎಂ ನೂಲಿನ ಹತ್ತಿಗೆ 5,775 ರೂ. ಬೆಲೆ ಲಭ್ಯವಾಗಿತ್ತು. ಇದೀಗ ಸರಕಾರಿ ಖರೀದಿ ಬೆಲೆ ಆರು ಸಾವಿರ ರೂ. ಆಸುಪಾಸಿದೆ. 2021ರಲ್ಲಿ ಎಲ್ಲ ಬಗೆಯ ಹತ್ತಿಯ ಬೆಲೆ ಖಾಸಗಿ ಮಾರುಕಟ್ಟೆಯಲ್ಲಿ 16 ಸಾವಿರ ರೂ.ಗೆ ಏರಿ, 10 ಸಾವಿ ರಕ್ಕೆ ಇಳಿ ದಿ ದೆ. ಹತ್ತಿ ಬೆಳೆದ ರೈತರಿಗೆ ಈ ಬೆಲೆ ಸಿಕ್ಕಿದ್ದು ಹೆಚ್ಚು ಕಡಿಮೆ ಇತಿಹಾಸದಲ್ಲಿಯೇ ಇದೇ ಮೊದಲು. 2018ರಲ್ಲಿ ಕ್ವಿಂಟಾಲ್‌ಗೆ ಗರಿಷ್ಠ 7 ಸಾವಿರ ರೂ.ಗೆ ಮಾರಾಟವಾಗಿದ್ದ ಹತ್ತಿ ಈವರೆಗಿನ ಸರಾಸರಿ ಗರಿಷ್ಠ ಬೆಲೆಯಾಗಿತ್ತು.
ರಾಜ್ಯದಲ್ಲಿಯೇ ಉತ್ತಮ ಗುಣಮಟ್ಟ ಮತ್ತು ಅಧಿಕ ಹತ್ತಿ ಉತ್ಪಾದನೆಯಲ್ಲಿ ಅಖಂಡ ಧಾರವಾಡ ಜಿಲ್ಲೆ ಶತಮಾನಗಳ ಹಿಂದಿನಿಂದಲೂ ಮೊದಲ ಸ್ಥಾನದಲ್ಲಿದೆ. ಬ್ರಿಟಿಷರು ಕೂಡ ಹುಬ್ಬಳ್ಳಿಯನ್ನೇ ಕಾಟನ್ ಕ್ಯಾಪಿಟಲ್(ಹತ್ತಿ ರಾಜಧಾನಿ) ಮಾಡಿಕೊಂಡಿದ್ದರು. ಈಗಲೂ ಇಲ್ಲಿಂದ ಜಿನ್ನಿಂಗ್ ಮಾಡಿದ ಹತ್ತಿ ಗುಜರಾತ್, ಮುಂಬಯಿ ಸೇರಿ ವಿದೇಶಗಳಿಗೂ ರವಾನೆಯಾಗುತ್ತದೆ. 1992ರಲ್ಲಿ 1.97 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಉತ್ಪಾದನೆಯಾಗಿದ್ದು, ರಾಜ್ಯದ ಒಟ್ಟು ಹತ್ತಿ ಪಾಲಿನಲ್ಲಿ ಶೇ.33.73ರಷ್ಟಿದಿದ್ದು ದಾಖಲಾಗಿತ್ತು. ಆಗ ಕ್ವಿಂಟಾಲ್‌ಗೆ 3500 ರೂ.ನಷ್ಟು ಮಾರಾಟ ಬೆಲೆ ದಾಖಲಾಗಿತ್ತು. 2020ರಲ್ಲಿ 75,025 ಕ್ವಿಂಟಾಲ್ ಹತ್ತಿ ಹುಬ್ಬಳ್ಳಿಯ ಸರಕಾರಿ ಖರೀದಿ ಕೇಂದ್ರದ ಮೂಲಕ ಖರೀದಿಯಾಗಿದೆ. ಸದ್ಯಕ್ಕೆ ಸ್ಥಳೀಯ ಹತ್ತಿ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಕಳೆದ ವರ್ಷದ ಹತ್ತಿ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ:ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶಾನ್, ರಾಹುಲ್
ಕಡಿಮೆಯಾಗುತ್ತಿದೆ ಹತ್ತಿ ಬೆಳೆ: ಆದರೆ ವರ್ಷದಿಂದ ವರ್ಷಕ್ಕೆ ಹತ್ತಿ ಬೆಳೆ ಕಡಿಮೆಯಾಗುತ್ತಿದ್ದು, ಇಲ್ಲಿ ಗೋವಿನಜೋಳ, ಕಬ್ಬು, ಸೋಯಾ ಅವರೆ ಹತ್ತಿ ಬೆಳೆಯನ್ನು ನುಂಗಿ ಹಾಕುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಹತ್ತಿ ಬೆಳೆ ಶೇ.43ರಷ್ಟು ಕುಸಿತ ಕಂಡಿದೆ. ಕೃಷಿ ವಿವಿ ಮತ್ತು ಕೇಂದ್ರ ಸರಕಾರ ಇಲ್ಲಿ ನೆಲೆಯೂರಿಸಿದ ಜಯಧರ್, ವರಲಕ್ಷ್ಮೀ, ಜಯಲಕ್ಷ್ಮೀ, ಶಾರದಾ, ಅಜಂತಾ, ಅಭಾದಿತಾ, ಡಿಸಿಎಚ್-32, ತಳಿಗಳಿದ್ದವು. ಸದ್ಯಕ್ಕೆ ಡಿಸಿಎಚ್-32 ಮತ್ತು ಬಿಟಿ ಎರಡೇ ತಳಿಗಳು ಪ್ರಚಲಿತದಲ್ಲಿವೆ.
ರಾಷ್ಟ್ರಧ್ವಜಕ್ಕೆ ನೂಲು : ರಾಷ್ಟ್ರಧ್ವಜ ದೇಶಿ ಮಗ್ಗದಲ್ಲಿನ ಹತ್ತಿ ನೂಲಿನಿಂದ ಸಿದ್ಧಗೊಂಡ ಶುದ್ಧ ಖಾದಿಯದ್ದೇ ಆಗಿರಬೇಕು ಎಂಬ ಗಾಂಧೀಜಿ ಅವರ ಕಲ್ಪನೆಗೆ ತಕ್ಕಂತೆ ಧಾರವಾಡದಲ್ಲಿ ಇಡೀ ದೇಶಕ್ಕೆ ಬೇಕಾಗುವ ಅತ್ಯುತ್ತಮ ಗುಣಮಟ್ಟದ ಖಾದಿ ಬಟ್ಟೆಯ ರಾಷ್ಟ್ರಧ್ವಜಗಳು ಇಂದಿಗೂ ಸಿದ್ಧಗೊಳ್ಳುತ್ತಿವೆ.
-ಬಸವರಾಜ ಹೊಂಗಲ್