Advertisement
2005ರಿಂದ 2014ರವರೆಗೆ ಜಿಲ್ಲೆಯಲ್ಲಿ ಬಿಟಿ ಹತ್ತಿ ಬೆಳೆ ಹೆಚ್ಚಿನ ಕ್ಷೇತ್ರ ವ್ಯಾಪಿಸಿತ್ತು. ಮುಂಗಾರು ಬಿತ್ತನೆ ಸಮಯದಲ್ಲಿ ಬಿಟಿ ಹತ್ತಿ ಬೀಜ ಹಾಗೂ ರಸಗೊಬ್ಬರಕ್ಕೆ ರೈತರು ಪರದಾಡಿದ್ದರು. ಬಿಟಿ ಹತ್ತಿ ಬೀಜ ಪಡೆಯಲು ನೂಕುನುಗ್ಗಲು ಉಂಟಾಗಿ ಲಾಠಿ ಏಟು, ರಸಗೊಬ್ಬರಕ್ಕಾಗಿ ಗೋಲಿಬಾರ್ ನಡೆದು ರೈತರು ಪೊಲೀಸರ ಗುಂಡೇಟಿಗೆ ಬಲಿಯಾದದ್ದೂ ಇದೆ. ಇಷ್ಟಾಗಿದ್ದರೂ ಬಿಟಿ ಹತ್ತಿಯ ಮೇಲಿನ ವ್ಯಾಮೋಹ ಮಾತ್ರ ರೈತರಿಗೆ ಕಡಿಮೆಯಾಗಿರಲಿಲ್ಲ. ಕೆಲ ರೈತರಂತೂ ಆಹಾರ ಬೆಳೆಗಳ ಕೃಷಿಯನ್ನೇ ಕೈಬಿಟ್ಟು ಬಿಟಿ ಹತ್ತಿ ಬೆನ್ನು ಹತ್ತಿದ್ದರು.
Related Articles
Advertisement
ಪ್ರತಿವರ್ಷ ಕುಸಿತ: 2014ರಲ್ಲಿ ಕಳಪೆ ಬೀಜ, ಕೀಟಬಾಧೆ ಸೇರಿದಂತೆ ಅನೇಕ ಕಾರಣಗಳಿಂದ ಬಿಟಿಹತ್ತಿಯು ಸಮರ್ಪಕವಾಗಿ ಇಳುವರಿಯೇ ಬರಲಿಲ್ಲ. ಕೆಲ ರೈತರ ಜಮೀನಿನಲ್ಲಂತೂ ಆಳೆತ್ತರಕ್ಕೆ ಹತ್ತಿಗಿಡಗಳು ಬೆಳೆದರೂ ಹೂ, ಕಾಯಿ ಬಿಡಲಿಲ್ಲ. ಇದರಿಂದ ರೈತರು ಬೀದಿಗಿಳಿದು ಹೋರಾಟ ನಡೆಸುವಂತಾಯಿತು. ಪರಿಣಾಮ ಸರ್ಕಾರ ಮಧ್ಯ ಪ್ರವೇಶಿಸಿ ಬಿಟಿ ಹತ್ತಿ ಬೆಳೆಹಾನಿಗೆ ಬಿಡಿಗಾಸಿನ ಪರಿಹಾರ ನೀಡಿತು. ಇದರಿಂದ ರೈತರು ಬಿಟಿಹತ್ತಿ ಬೆಳೆದು ಕೈಸುಟ್ಟು ಕೊಂಡರು.
2015ರಲ್ಲಿ ಬರ ಆವರಿಸಿದ್ದರಿಂದ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಶ್ರಿತವಾಗಿರುವ ಬಿಟಿ ಹತ್ತಿ ಸಮರ್ಪಕವಾಗಿ ಬೆಳೆಯಲಿಲ್ಲ. ಇದರಿಂದಲೂ ರೈತರು ಹಾನಿ ಅನುಭವಿಸಿದರು. ಅದರ ಜತೆಗೆ ಪದೇ ಪದೇ ಬಿಟಿ ಹತ್ತಿಯನ್ನೇ ಬಿತ್ತನೆ ಮಾಡಿದ್ದು, ಬೆಳೆ ಬದಲಾವಣೆ ಇಲ್ಲದೇ ಇರುವುದರಿಂದಲೂ ಇಳುವರಿ ಮೇಲೆ ಪರಿಣಾಮ ಬೀರಿದೆ.
ಜಿಲ್ಲೆಯ ರೈತರನ್ನು ಅತಿಯಾಗಿ ಆಕರ್ಷಿಸಿದ್ದ ಹತ್ತಿ ಈಗ ರೈತರ ಹೊಲದಿಂದ ಕಣ್ಮರೆಯಾಗುತ್ತಿದೆ. ಮಳೆ ಅಭಾವ, ನಿರಂತರ ರೋಗಬಾಧೆ, ಕೀಟಬಾಧೆ, ಇಳುವರಿ ಕುಂಠಿತ, ಬೆಲೆಕುಸಿತ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ರೈತರು ಹತ್ತಿಯಿಂದ ಹಿಂದೆ ಸರಿಯುತ್ತ ಬಂದಿದ್ದು ಕಳೆದ ವರ್ಷ 76 ಸಾವಿರ ಹೆಕ್ಟೇರ್‌ಗೆ ಬಂದು ನಿಂತಿದೆ. ಅಂದರೆ ಈವರೆಗೆ ಹತ್ತಿ ಕ್ಷೇತ್ರ ಅರ್ಧದಷ್ಟು ಕ್ಷೇತ್ರ ಕಡಿಮೆಯಾದಂತಾಗಿದೆ. ಈ ವರ್ಷ ಮಳೆ ಒಂದು ತಿಂಗಳು ತಡವಾಗಿ ಬಂದಿದೆ. ತಡವಾಗಿ ಬಂದ ಮಳೆ ಹತ್ತಿಗೆ ಸೂಕ್ತವಲ್ಲದೇ ಇರುವುದರಿಂದ ಹತ್ತಿ ಬಿತ್ತನೆ ಕ್ಷೇತ್ರ ಇನ್ನೂ ಗಣನೀಯವಾಗಿ ಕಡಿಮೆಯಾಗಿ ಸರಾಸರಿ 30ರಿಂದ 50 ಹೆಕ್ಟೇರ್‌ಗೆ ಇಳಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಕೃಷಿ ತಜ್ಞರು.
•ಎಚ್.ಕೆ. ನಟರಾಜ